ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆಯೂ ಭಾನುವಾರ ಜಿಲ್ಲಾಡಳಿತ ತೆರವುಗೊಳಿಸಿತು. ಇದರಿಂದ ಕೆರಳಿರುವ ಕಾರ್ಯಕರ್ತರು ಇಡೀ ಗ್ರಾಮವನ್ನು ಬಂದ್ ಮಾಡಿ ಹೋರಾಟ ಮುಂದುವರಿಸಿದ್ದಾರೆ, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ರಂಗಮಂದಿರದ ಸಮೀಪ ಗೌರಿಶಂಕರ ಸೇವಾ ಟ್ರಸ್ಟ್ ವತಿಯಿಂದ ಜ.19ರಂದು 108 ಅಡಿ ಧ್ವಜಸ್ತಂಭ ಸ್ಥಾಪಿಸಿ ಅದಕ್ಕೆ ಹನುಮಂತ– ಅರ್ಜುನ ಚಿತ್ರವುಳ್ಳ ಬೃಹತ್ ಕೇಸರಿ ಧ್ವಜ ಹಾರಿಸಲಾಗಿತ್ತು. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಧ್ವಜಸ್ತಂಭ ಸ್ಥಾಪಿಸಲಾಗಿತ್ತು.
‘ರಾಷ್ಟ್ರ ಧ್ವಜ, ಕನ್ನಡ ಧ್ವಜ ಹಾರಿಸುವ ಅನುಮತಿ ಪಡೆದು ಕೇಸರಿ ಧ್ವಜ ಹಾರಿಸಲಾಗಿದೆ, 60 ಅಡಿ ಸ್ತಂಭ ಸ್ಥಾಪಿಸುವ ಮಾಹಿತಿ ನೀಡಿ 108 ಅಡಿ ಸ್ಥಾಪಿಸಲಾಗಿದೆ’ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ನೀಡಿದ್ದರು.
ಶುಕ್ರವಾರ ಸ್ಥಳಕ್ಕೆ ಬಂದ ತಾ.ಪಂ. ಇಒ ಧ್ವಜಸ್ತಂಭ ತೆರವುಗೊಳಿಸುವಂತೆ ಕೆರಗೋಡು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದರು. ಇದನ್ನು ವಿರೋಧಿಸಿದ ಸುತ್ತಮುತ್ತಲ ಹಳ್ಳಿಗಳ ಜನರು ಬಿಜೆಪಿ, ಜೆಡಿಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸದಸ್ಯರು ಶನಿವಾರ ಮಧ್ಯಾಹ್ನದಿಂದಲೇ ಪ್ರತಿಭಟನೆ ಆರಂಭಿಸಿದ್ದರು.
ಶನಿವಾರ ರಾತ್ರಿಯೇ ಸ್ತಂಭ ತೆರವುಗೊಳಿಸುತ್ತಾರೆ ಎಂಬ ಮಾಹಿತಿ ಇದ್ದ ಕಾರಣ ಕಾರ್ಯಕರ್ತರು ರಾತ್ರಿಯಿಡೀ ಪ್ರತಿಭಟಿಸಿದ್ದರು. ಮಧ್ಯಾರಾತ್ರಿಯಿಂದಲೇ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಇತ್ತು. ಧ್ವಜಸ್ತಂಭದ ಎದುರು ಸಾವಿರಾರು ಕಾರ್ಯಕರ್ತರು ‘ಜೈಶ್ರೀರಾಮ್’ ಘೋಷಣೆ ಕೂಗುತ್ತಿದ್ದರು. ಸ್ತಂಭ ತೆರವುಗೊಳಿಸದಂತೆ ಒತ್ತಡ ಹೇರಿದರು.
ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ನಡುವೆ ಭಾನುವಾರ ಬೆಳಿಗ್ಗೆ ಧ್ವಜಸ್ತಂಭಕ್ಕೆ ಅಳವಡಿಸಲಾಗಿದ್ದ ಕೇಸರಿ ಧ್ವಜ ಇಳಿಸಿದರು. ಧ್ವಜ ಇಳಿಸುವಾಗ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ನಡೆದ ಮಾತಿನ ಚಕಮಕಿ, ನೂಕಾಟದಲ್ಲಿ ಹಲವು ಕಾರ್ಯಕರ್ತರು ಗಾಯಗೊಂಡರು. ಧ್ವಜ ಇಳಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಹೊರ ಜಿಲ್ಲೆಗಳಿಂದಲೂ ಬಂದ ಕಾರ್ಯಕರ್ತರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದರು.
‘ಧ್ವಜ ಇಳಿಸಲು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯೇ ಕಾರಣ. ಶಾಸಕ ಗಣಿಗ ರವಿಕುಮಾರ್ ಆಣತಿಯಂತೆ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರ ಧ್ವಜಾರೋಹಣ, ಲಾಠಿ ಪ್ರಹಾರ; ಕೇಸರಿ ಧ್ವಜ ಇಳಿಸಿದ ನಂತರ ಅಧಿಕಾರಿಗಳು ಸ್ತಂಭಕ್ಕೆ ರಾಷ್ಟ್ರಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ತಮ್ಮತ್ತ ನುಗ್ಗಿ ಬಂದ ಪ್ರತಿಭಟನಕಾರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.
ಸದ್ಯ ಧ್ವಜ ಸ್ತಂಭದ ಸುತ್ತಲೂ ಪೊಲೀಸ್ ಪಹರೆ ಹಾಕಲಾಗಿದೆ. ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ, ಎಸ್‌ಪಿ ಎನ್.ಯತೀಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಗ್ರಾಮದಾದ್ಯಂತ ಪೊಲೀಸ್ ಪಹರೆ ಹಾಕಲಾಗಿದೆ.
‘ರಾಷ್ಟ್ರ ಧ್ವಜಾರೋಹಣಕ್ಕೆ ನಮ್ಮ ವಿರೋಧವಿಲ್ಲ, ನಾವು ಸ್ಥಾಪಿಸಿರುವ ಸ್ತಂಭದಲ್ಲಿ ಹನುಮ ಧ್ವಜವನ್ನೇ ಹಾರಿಸಬೇಕು. ಮತ್ತೆ ಹನುಮ ಧ್ವಜ ಹಾರಿಸುವವರೆಗೂ ಹೋರಾಟ ಹಿಂಪಡೆಯುವುದಿಲ್ಲ’ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.
ಘಟನೆಯ ನಂತರ ಬಿಜೆಪಿ, ಜೆಡಿಎಸ್ ರಾಜ್ಯಮಟ್ಟದ ಮುಖಂಡರು ಭೇಟಿ ನೀಡಿ ಪ್ರತಿಭಟನಕಾರರಿಗೆ ಸಾಥ್ ನೀಡಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಜೆಡಿಎಸ್ ಮುಖಂಡರಾದ ಡಿ.ಸಿ.ತಮ್ಮಣ್ಣ, ಸುರೇಶ್‌ಗೌಡ ಭೇಟಿ ನೀಡಿ ಅಹೋರಾತ್ರಿ ಧರಣಿಯನ್ನು ಬೆಂಬಲಿಸಿದ್ದಾರೆ.
‘ಹನುಮ ದೇವರಿಗೆ ಕಾಂಗ್ರೆಸ್ ಸರ್ಕಾರ ಅಪಮಾನ ಮಾಡಿದೆ’ ಎಂದು ಆರೋಪಿಸಿರುವ ಬಜರಂಗದಳ ಫೆ.9ರಂದು ಮಂಡ್ಯ ನಗರ ಬಂದ್‌ಗೆ ಕರೆ ನೀಡಿದೆ.
‘ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಅನುಮತಿ ಪಡೆದು ಧ್ವಜಸ್ತಂಭ ಹಾಕಿದ್ದರೂ ಧ್ವಜ ಕೆಳಗಿಳಿಸಿ ಹನುಮನಿಗೆ ಅವಮಾನ ಮಾಡಿದೆ. ಇದರ ವಿರುದ್ಧ ಫೆ.9ರಂದು ನಗರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು’ ಎಂದು ಬಜರಂಗ ದಳದ ಮುಖಂಡ ಬಾಲಕೃಷ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.