ADVERTISEMENT

ಒಗ್ಗಟ್ಟಿನಿಂದ ದುಡಿದರೆ ಮಾತ್ರ ಕಾಂಗ್ರೆಸ್‌ಗೆ ಅಧಿಕಾರ: ಡಿ.ಕೆ.ಶಿವಕುಮಾರ್‌ ಅಭಿಮತ

‘ಸ್ವಾತಂತ್ರ್ಯ ನಡಿಗೆ’ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 13:19 IST
Last Updated 10 ಆಗಸ್ಟ್ 2022, 13:19 IST
ಮಂಡ್ಯದ ಸೋಮೇಶ್ವರ ಸಮುದಾಯ ಭವನದಲ್ಲಿ ನಡೆದ ‘ಸ್ವಾತಂತ್ರ್ಯ ನಡಿಗೆ’ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿದರು
ಮಂಡ್ಯದ ಸೋಮೇಶ್ವರ ಸಮುದಾಯ ಭವನದಲ್ಲಿ ನಡೆದ ‘ಸ್ವಾತಂತ್ರ್ಯ ನಡಿಗೆ’ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿದರು   

ಮಂಡ್ಯ: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಏಳು ಸ್ಥಾನಗಳಲ್ಲಿಯೂ ಸೋತಿದೆ. ಗುಂಪು ರಾಜಕಾರಣದಿಂದ ಏನೂ ಮಾಡಲು ಸಾಧ್ಯವಿಲ್ಲ. ವಿಧಾನ ಪರಿಷತ್‌ ಚುನಾವಣೆ ಮಾದರಿಯಲ್ಲಿ ಒಗ್ಗಟ್ಟಿನಿಂದ ದುಡಿದರೆ ಮಾತ್ರ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಾಧ್ಯ’ ಎಂದು ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕಾಂಗ್ರೆಸ್‌ ವತಿಯಿಂದ ಬೆಂಗಳೂರಿನಲ್ಲಿ ನಡೆಯುವ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮದ ಅಂಗವಾಗಿ ಬುಧವಾರ ನಗರದ ಸೋಮೇಶ್ವರ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ದಿನೇಶ್‌ ಗೂಳಿಗೌಡ ಮತ್ತು ಮಧು ಜಿ.ಮಾದೇಗೌಡ ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಗೆದ್ದರು. ಒಗ್ಗಟ್ಟಿಲ್ಲ ಅಂದರೆ ಗೆಲುವು ಸಿಗುತ್ತಿತ್ತೇ? ನಾಯಕರು, ಕಾರ್ಯಕರ್ತರು ಶಿಸ್ತು ರೂಢಿಸಿಕೊಳ್ಳಬೇಕು. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶವಾಗಿದೆ. ಪ್ರತಿ ಬೂತ್‌ ಮಟ್ಟದಲ್ಲಿ ಸಮಿತಿ ರಚನೆ ಮಾಡಿಕೊಂಡು, ಮಂಡಲ, ಹೋಬಳಿ, ಜಿಲ್ಲಾ ಘಟಕ ತೆರೆಯುವ ಬಗ್ಗೆ ಯೋಜನೆ ರೂಪಿಸಲಾಗಿದೆ’ ಎಂದರು.

‘ವಿವಿಧ ಹುದ್ದೆ ಅಲಂಕರಿಸಿರುವವರು ಈಗಾಗಲೇ ಐದು ವರ್ಷ ಆಗಿದ್ದರೆ, ಅವರೆಲ್ಲರೂ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಹೊಸ ಮುಖಗಳು ಬರಬೇಕು. ಮಹಿಳೆಯರಿಗೆ ಹಾಗೂ ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು. ಆ ಪ್ರಕಾರವೇ ಪ್ರತಿ ಕ್ಷೇತ್ರದಲ್ಲಿ 75 ಕಿ.ಮೀ ಪಾದಯಾತ್ರೆ ನಡೆಸಬೇಕು ಎಂದು ಹೇಳಲಾಗಿತ್ತು, ಆದರೆ ಈಗ ಅದನ್ನು 150– 200 ಕಿ.ಮೀವರೆಗೂ ಪಾದಯಾತ್ರೆ ನಡೆಸಬೇಕು. ಜನರ ಹತ್ತಿರ ಹೋಗಬೇಕು. ಜನಸಂಪರ್ಕ ಸಭೆ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಬೆಲೆ ಏರಿಕೆಯಿಂದ ಆಗಿರುವ ಅನಾಹುತ, ಅನ್ಯಾಯ, ರೈತರಿಗೆ ಆಗಿರುವ ಕಷ್ಟ ನಷ್ಟಗಳನ್ನು ಜರಿಗೆ ತಿಳಿಸುವ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಬೇಕು. ನಮ್ಮ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ನಮ್ಮ ಕಾರ್ಯಕರ್ತರು ಹೊಸ ಕಾರ್ಯಸೂಚಿ ರೂಪಿಸಬೇಕು. ಎಲ್ಲಾ ಏಳೂ ಸ್ಥಾನದಲ್ಲಿ ಗೆಲುವು ಸಾಧಿಸಬೇಕು’ ಎಂದರು.

‌‘ರಾಹುಲ್‌ ಗಾಂಧಿ ಅವರು ಸೆ.7ರಿಂದ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ, ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣದಿಂದ ನಾಗಮಂಗಲದವರೆಗೂ 60 ಕಿ.ಮೀ ಪಾದಯಾತ್ರೆ ನಡೆಯಲಿದೆ. ಆ ಸಮಯದಲ್ಲಿ ಐದು ದಿವಸ ನಿಮ್ಮ ಜೊತೆ ರಾಹುಲ್‌ ಗಾಂಧಿ ಇರುತ್ತಾರೆ. ಈ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಬೇಕು’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಮಾತನಾಡಿ ‘ಸ್ವಾತಂತ್ರ್ಯೋತ್ಸವಕ್ಕೆ ಆ.15ರಂದು 75 ವರ್ಷ ತುಂಬಲಿದೆ. ಅಮೃತ ಮಹೋತ್ಸವ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಜಯನಗರದ ನ್ಯಾಷನಲ್‌ ಕಾಲೇಜಿನ ಮೈದಾನದವರೆಗೂ ನಡೆಯಲಿದೆ. ಸುಮಾರು 1 ಲಕ್ಷ ಕಾಂಗ್ರೆಸ್‌ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದರು.

ಕೆಪಿಸಿಸಿ ಉಪಾಧ್ಯಕ್ಷರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಕಾಂಗ್ರೆಸ್‌ ಮುಖಂಡರಾದ ಬಿ.ಎಸ್‌.ಶಿವಣ್ಣ, ಎಂ.ಎಸ್‌.ಆತ್ಮಾನಂದ, ರಮೇಶ್‌ ಬಾಬುಬಂಡಿಸಿದ್ದೇಗೌಡ, ಡಾ.ಎಚ್‌.ಕೃಷ್ಣ, ಗಣಿಗ ರವಿಕುಮಾರ್, ಸಿ.ಡಿ.ಗಂಗಾಧರ, ಪಣಕನಹಳ್ಳಿ ಸಿದ್ದೇಗೌಡ, ತ್ಯಾಗರಾಜು, ಅಪ್ಪಾಜಿಗೌಡ ಇದ್ದರು.

ನಾವೇ ಲೀಡರ್‌ ಅಂದುಕೊಳ್ಳದಿರಿ

‘ಮಂಡ್ಯದ ಹಲವು ಮುಖಂಡರಲ್ಲಿ ಶಿಸ್ತಿಲ್ಲ, ಖಾಲಿ ಪೆಟ್ಟಿಗೆಯಂತೆ ಬಡಾಯಿ ಕೊಚ್ಚಿಕೊಳ್ಳುವವರೇ ಜಾಸ್ತಿ. ಹೂವಿನ ಹಾರ ಹಿಡಿದುಕೊಂಡು ಬರುವವರೇ ಹೆಚ್ಚು. ನಾವೆ ಲೀಡರ್‌ ಎಂದು ತಿಳಿದುಕೊಳ್ಳುತ್ತಾರೆ. ಹೂವಿನ ಹಾರಕ್ಕೆ ಕಾಸು ಕೊಟ್ಟಿರೋರೆ ಯಾರೋ, ಇಲ್ಲಿ ಫೋಟೋಗೆ ಫೋಸ್‌ ಕೊಡುವವರು ಯಾರೋ ಆಗಿರುತ್ತಾರೆ. ಇದೆಲ್ಲವೂ ನನಗೆ ಗೊತ್ತಿದೆ’ ಡಿಕೆಶಿ ಟೀಕಿಸಿದರು.

‘ನಾನು, ನೀವು ಸ್ವಾತಂತ್ರ್ಯ ಹೋರಾಟ ನೋಡಿಲ್ಲ, ಬಿಜೆಪಿಯವರೂ ಸ್ವಾತಂತ್ರ ಹೋರಾಟ ನೋಡಿಲ್ಲ. ಆದರೆ, ಕಾಂಗ್ರೆಸ್‌ನ ಹಿರಿಯರು ಸ್ವಾತಂತ್ರ್ಯ ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡದ್ದಾರೆ. ರಾಷ್ಟ್ರಧ್ವಜನದ ತ್ರಿವರ್ಣವನ್ನು ಬಿಜೆಪಿ ಆಗಲೀ, ಜೆಡಿಎಸ್‌ನವರಾಗಲೀ ಹಾಕಿಕೊಳ್ಳಲು ಅವಕಾಶವಿಲ್ಲ. ಕಾಂಗ್ರೆಸ್‌ ಮಾತ್ರ ಹಾಕಿಕೊಳ್ಳಲು ಸಾಧ್ಯವಾಗಿದೆ. ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಶಕ್ತಿ ಕೊಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.