ಮಂಡ್ಯ: ‘ಕೆ.ಆರ್.ಎಸ್ ಅಣೆಕಟ್ಟೆಗೆ ಧಕ್ಕೆಯಾಗದಂತೆ, ಸುರಕ್ಷತಾ ಜಾಗವನ್ನು ಮೀಸಲಿಟ್ಟು, ಉಳಿದ 200 ಎಕರೆ ಜಾಗದಲ್ಲಿ ‘ಅಮ್ಯೂಸ್‌ಮೆಂಟ್ ಪಾರ್ಕ್’ ಸ್ಥಾಪಿಸಲಾಗುವುದು. ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಬೃಂದಾವನ ಉದ್ಯಾನ ಅಭಿವೃದ್ಧಿ ಸಂಬಂಧ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ ಅವರು, ‘ಬೃಂದಾವನ ಉದ್ಯಾನ ಮೇಲ್ದರ್ಜೆಗೆ ಏರಿಸುವ ಯೋಜನೆಯಲ್ಲೇ ‘ಕಾವೇರಿ ಆರತಿ’ ಕಾರ್ಯಕ್ರಮಕ್ಕೂ ಜಾಗ ಮೀಸಲಿಡಲು ಸೂಚಿಸಲಾಗಿದೆ’ ಎಂದರು.
‘ಸುಮಾರು ₹2 ಸಾವಿರ ಕೋಟಿ ವೆಚ್ಚದಲ್ಲಿ ಉದ್ಯಾನವನ್ನು ವಿಶ್ವದರ್ಜೆಗೇರಿಸುತ್ತೇವೆ. ಡಿಸ್ನಿಲ್ಯಾಂಡ್ ಯೋಜನೆಯನ್ನು ಮಾರ್ಪಡಿಸಿ, ಅಮ್ಯೂಸ್‌ಮೆಂಟ್ ಪಾರ್ಕ್ ಸ್ಥಾಪಿಸುತ್ತೇವೆ. ಎರಡು ಮೂರು ಪಂಚಾಯಿತಿಗಳನ್ನು ಸೇರಿಸಿ ‘ಕಂಟ್ರೋಲ್ ಪ್ಲ್ಯಾನಿಂಗ್ ಕಮಿಟಿ’ ರಚಿಸುತ್ತೇವೆ’ ಎಂದರು.
ಮೈಶುಗರ್ ಉಳಿಸಲು ಕ್ರಮ: ‘ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ದಿನ 10 ಸಾವಿರ ಟನ್ ಕಬ್ಬು ನುರಿಸಬೇಕೆಂಬುದು ನಮ್ಮ ಆಶಯ. ಆದರೆ 5 ಸಾವಿರ ಟನ್ ನುರಿಸಬೇಕೆಂದು ತಾಂತ್ರಿಕ ಸಮಿತಿ ತಿಳಿಸಿದೆ. ಎಥೆನಾಲ್ ಘಟಕ ಸೇರಿದಂತೆ ಎಲ್ಲವೂ ಕಾರ್ಯಾರಂಭವಾಗಿ ಸಂಸ್ಥೆ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ನಾವು ದೊಡ್ಡ ಕಾರ್ಖಾನೆ ಮಾಡುವುದು ದೊಡ್ಡದಲ್ಲ. ಅದಕ್ಕೆ ತಕ್ಕಂತೆ ರೈತರು ಕಬ್ಬು ಬೆಳೆಯಲು ಉತ್ತೇಜಿಸಬೇಕು’ ಎಂದರು.
‘ಬಿಳಿಗುಂಡ್ಲುವಿಗೆ ನಿಗದಿಯಂತೆ 50 ಟಿಎಂಸಿ ಬದಲು 96 ಟಿಎಂಸಿ ಹೆಚ್ಚುವರಿಯಾಗಿ ನೀರು ಹರಿಸಿದ್ದೇವೆ. ತಮಿಳುನಾಡು ಪಾಲಿನ 177 ಟಿಎಂಸಿ ನೀರಿನ ಪೈಕಿ ಈಗಾಗಲೇ 149 ಟಿಎಂಸಿ ನೀರನ್ನು ಹರಿಸಲಾಗಿದೆ. ನಮ್ಮ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸಲು ಸೂಚಿಸಲಾಗಿದೆ’ ಎಂದರು.
Cut-off box - ಎಚ್‌ಡಿಕೆ ಎಂದಿಗೂ ರೈತರ ಪರ ನಿಂತಿಲ್ಲ: ಡಿಕೆಶಿ ಟೀಕೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾನೂನು ಮೂಲಕ ಹೋರಾಟ ನಡೆಸಿ ಅನುಮತಿ ಪಡೆದುಕೊಳ್ಳುತ್ತೇವೆ. ಈಗಾಗಲೇ ಪ್ರಧಾನಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರ ಜತೆ ಮಾತುಕತೆ ನಡೆಸಿದ್ದೇನೆ. ಕೇಂದ್ರ ಸಚಿವ ಕುಮಾರಸ್ವಾಮಿ ಅನುಮತಿ ಕೊಡಿಸುವ ಅವಶ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ರೈತರ ಪರ ನಿಂತ ಉದಾಹರಣೆ ಇಲ್ಲ. ಅವರ ಬುಡುಬುಡುಕೆ ಮಾತುಗಳು ಬೇಕಿಲ್ಲ. ಹೊಸದಾಗಿ ಪಂಚೆ ಹಾಕಿದ್ದನ್ನು ಬಿಟ್ಟರೆ ಎಂದಿಗೂ ರೈತರ ಪರವಾಗಿಲ್ಲ ಎಂದು ಕುಟುಕಿದರು. ಸಮುದ್ರಕ್ಕೆ ಸೇರುವ ನೀರನ್ನು ಉಳಿಸಿಕೊಳ್ಳಲು ಮೇಕೆದಾಟು ಯೋಜನೆಯ ಅವಶ್ಯಕತೆ ಇದೆ. ನಮ್ಮ ಲೆಕ್ಕದ ಪ್ರಕಾರ 71 ಟಿಎಂಸಿಯಷ್ಟು ನೀರು ಸಮುದ್ರದ ಪಾಲಾಗಿದ್ದು ನಮ್ಮ ಮೇಕೆದಾಟು ಅಣೆಕಟ್ಟಿನ ಸಾಮರ್ಥ್ಯ ಕೇವಲ 66 ಟಿಎಂಸಿ. ಸಮುದ್ರಕ್ಕೆ ಹೋಗುತ್ತಿರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಅನುಮತಿ ಕೇಳಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.