ADVERTISEMENT

ನೈಸರ್ಗಿಕ ಸಂಪನ್ಮೂಲಗಳ ನಾಶ ಸಲ್ಲದು: ಡಾ.ರಾಜೇಂದ್ರ ಕುಮಾರ್

ನಾಗತಿಹಳ್ಳಿ ಸಂಸ್ಕೃತಿ ಹಬ್ಬದ ಸಮಾರೋಪದಲ್ಲಿ ಡಾ.ರಾಜೇಂದ್ರ ಕುಮಾರ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 4:52 IST
Last Updated 15 ಏಪ್ರಿಲ್ 2021, 4:52 IST
ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿ ಗ್ರಾಮದಲ್ಲಿ ನಡೆದ ನಾಗತಿಹಳ್ಳಿ ಸಂಸ್ಕೃತಿ ಹಬ್ಬ ಕಾರ್ಯಕ್ರಮದ ಸಮಾರೋಪದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅವರನ್ನು ಸನ್ಮಾನಿಸಲಾಯಿತು
ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿ ಗ್ರಾಮದಲ್ಲಿ ನಡೆದ ನಾಗತಿಹಳ್ಳಿ ಸಂಸ್ಕೃತಿ ಹಬ್ಬ ಕಾರ್ಯಕ್ರಮದ ಸಮಾರೋಪದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅವರನ್ನು ಸನ್ಮಾನಿಸಲಾಯಿತು   

ನಾಗಮಂಗಲ: ‘ಭವಿಷ್ಯದಲ್ಲಿ ಒಂದು ವೇಳೆ ಮಹಾಯುದ್ಧಗಳು ಸಂಭವಿಸುತ್ತವೆ ಎಂದರೆ ಅದು ಹಣ, ಭೂಮಿ, ಸಂಪತ್ತಿನಿಂದಲ್ಲ. ಭವಿಷ್ಯದಲ್ಲಿ ಉದ್ಭವಿಸುವ ನೀರಿನ ಸಮಸ್ಯೆಯಿಂದ ಮಾತ್ರವೇ ಮಹಾಯುದ್ಧಗಳು ಜರುಗುತ್ತವೆ’ ಎಂದು ಕೃಷಿ ವಿಜ್ಞಾನ ವಿವಿಯ ಕುಲಪತಿ ಡಾ.ರಾಜೇಂದ್ರ ಕುಮಾರ್ ಹೇಳಿದರು.

ತಾಲ್ಲೂಕಿನ ನಾಗತಿಹಳ್ಳಿ ಗ್ರಾಮದಲ್ಲಿ ನಡೆದ ನಾಗತಿಹಳ್ಳಿ ಸಂಸ್ಕೃತಿ ಹಬ್ಬದ 17ನೇ ವಾರ್ಷಿಕೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು.

ಹಳ್ಳಿಯ ಸಂಪ್ರದಾಯ ಸಂಸ್ಕೃತಿ ಎಲ್ಲೋ ಮರೆಯಾಗುತ್ತಿದೆ ಎಂಬ ನೋವಿದೆ. ಈ ಕಾರ್ಯಕ್ರಮ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ. ಕೃಷಿ ಎಂಬುದನ್ನು ನಾವು ಸಂಸ್ಕೃತಿ, ಸಂಪ್ರದಾಯದಂತೆ ನಡೆಸಿಕೊಂಡು ಬಂದಿದ್ದೇವೆ‌. ಕೃಷಿಯಲ್ಲಿ ಇಂದಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ಸುಧಾರಿತ ವಿಧಾನಗಳನ್ನು ಅಳವಡಿಸಿಕೊಂಡು ಮುಂದುವರಿಯುತ್ತಿದ್ದೇವೆ. ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸುವ ಮೂಲಕ ನಮ್ಮ‌ ಮುಂದಿನ ಪೀಳಿಗೆಯನ್ನು ಮರೆಯುತ್ತಿದ್ದೇವೆ. ಯುವ ಪೀಳಿಗೆಗೆ ಕೃಷಿಯೆಡೆಗೆ ಆಕರ್ಷಿತರಾಗುತ್ತಿದ್ದು, ಕೃಷಿ ಕ್ಷೇತ್ರವೂ ಆಶಾದಾಯಕವಾಗಿದೆ ಎಂದರು.

ADVERTISEMENT

ರೈತರು ಇಂದು ರಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಜೊತೆಗೆ ಮಣ್ಣಿನ ಸಾರ ಕಾಪಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಲಾಭದಾಯಕ ಕೃಷಿ ಮಾಡಲು ಅವಕಾಶವಿದೆ. ಕೃಷಿಯಲ್ಲಿ ಯುವಕರನ್ನು ಸೆಳೆಯಲು ಯಾಂತ್ರೀಕರಣ ವ್ಯವಸ್ಥೆ ಮಾಡಲಾಗಿದೆ. ಯುವ ರೈತರಿಗೆ ಹೊಸ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಮಾತನಾಡಿ, ಸರ್ಕಾರಿ ಶಾಲೆ, ಸಂಸ್ಥೆಗಳ ಕಾರ್ಯಕ್ರಮಕ್ಕೆ ಬಂದ ವೇಳೆ ಬಾಲ್ಯದ ದಿನಗಳು ‌ನೆನಪಾಗುತ್ತವೆ. ನಾನು ಸರ್ಕಾರದ ಮಗಳಾಗಿಯೇ ಬೆಳೆದಿದ್ದೇನೆ. ಸರ್ಕಾರದ ಕೆಲಸ ನನ್ನ ಕುಟುಂಬದಂತೆ. ಮಂಡ್ಯ ಜಿಲ್ಲೆಯಲ್ಲಿ ಸುಮಾರು 8 ವರ್ಷ ಕಳೆದಿದ್ದೇನೆ‌. ಅಂದಿನಿಂದ ಇಂದಿನವರೆಗೆ ಮಂಡ್ಯದವಳೇ ಆಗಿದ್ದೇನೆ ಎಂದರು.

ಪುಸ್ತಕ ಬಿಡುಗಡೆ ಮಾಡಿ‌ದ ಪ್ರೊ.ಕೃಷ್ಣೇಗೌಡ, ನಾವು ಕಣ್ಣನ್ನು ತೆರೆದರೆ ಸಾಲದು, ನಾವು ಏನನ್ನು ನೋಡಬೇಕು ಎಂಬುದನ್ನು ನಾವೇ ನಿರ್ಧಾರ ಮಾಡಬೇಕು. ಕವಿಯಾದವರಿಗೆ ಸಾಮಾನ್ಯ ಜನರಿಗೆ ಕಾಣದ ಕೇಳದ ವಿಚಾರ ಕೇಳಿಸಬೇಕು. ಹೂ ಅರಳುವ ಸದ್ದು, ಮಂಜು ಸುರಿಯುವ ಸದ್ದು ಕೇಳಿಸಿದಾಗ ಮಾತ್ರ ಒಳ್ಳೆಯ ಕವಿಯಾಗಲು ಸಾಧ್ಯ ಎಂದರು.

ಸಮಾಜದ ಬಗ್ಗೆ ಚಿಂತನೆ ಮಾಡುವ ವ್ಯಕ್ತಿಗಳು ಎಲ್ಲಾ ಕಾಲದಲ್ಲೂ ಬೆರಳೆಣಿಕೆಯಷ್ಟು ಇರುತ್ತಾರೆ. ಅವರಿಂದ ಸಮಾಜದ ಬದಲಾವಣೆ ಸಾಧ್ಯವಾಗುತ್ತದೆ. ಮನುಷ್ಯನಿಗೆ ವಿನಯವೂ ಬಹು ದೊಡ್ಡ ಶಕ್ತಿಯಾಗಿದೆ ಎಂದರು.

ದಿನೇಶ್ ಹೆರಗನಹಳ್ಳಿ ಅವರ ಭಾವಾಂಕುರ ಮತ್ತು ಪಿಯು ವಿದ್ಯಾರ್ಥಿನಿ ನಾಗತಿಹಳ್ಳಿ ಯಶಸ್ವಿ ಅವರು ಬರೆದ ಬೆಳಕಿನ ಕೂಸು ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ ಅವರ ಸ್ಮರಣೆ ಮಾಡಲಾಯಿತು. ಡಾ.ಎಚ್.ಎಲ್.ನಾಗೇಗೌಡ ಅವರ ಜನಪದ ಲೋಕದಿಂದ ಬಂದಿದ್ದ ವಿವಿಧ ಜಾನಪದ ತಂಡಗಳು ನೃತ್ಯ ಪ್ರದರ್ಶನ ನೀಡಿದವು. ಕಾರ್ಯಕ್ರಮದ ನಂತರ ಪರಿಹಾರ ನಾಟಕ ಪ್ರದರ್ಶನಗೊಂಡಿತು.

ಮಂಡ್ಯ ರಮೇಶ್, ನಟ ವಸಿಷ್ಟ ಸಿಂಹ, ನಾಗತಿಹಳ್ಳಿ ಚಂದ್ರಶೇಖರ್, ಲೇಖಕ ಚಂದ್ರೇಗೌಡ, ಶಿವಕುಮಾರ್ ಕಾರೇಪುರ, ಶಿಲ್ಪಶ್ರೀ ಹರವು ಮತ್ತು ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.