ಮಂಡ್ಯ: ‘ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ನಮ್ಮ ಶಾಸಕರಿಗೆ ₹100 ಕೋಟಿ ಆಫರ್ ನೀಡಿರುವುದು ಹೊಸದೇನಲ್ಲ. ಈ ಹಿಂದೆಯೂ ಸರ್ಕಾರ ಬೀಳಿಸಲು ₹50 ಕೋಟಿ ಆಫರ್ ನೀಡಿದ್ದರು. ಈಗ ಅದು ಡಬ್ಬಲ್ ಆಗಿದೆ ಅಷ್ಟೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರನ್ನು ಆಪರೇಷನ್ ಮಾಡಿದ್ದರು. ಆಗ ಎಷ್ಟು ಹಣ ಕೊಟ್ಟಿದ್ದರೆಂಬ ಮಾಹಿತಿ ಇಲ್ಲ’ ಎಂದರು.
‘ಆಗ ಯಾರೂ ಹಣ ಪಡೆಯದೆ ಬಿಜೆಪಿಗೆ ಹೋಗಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಉಳಿಯಲ್ಲವೆಂದು ಎರಡೂ ಪಕ್ಷದವರು ಹೇಳುತ್ತಿದ್ದಾರೆ. ಉಪ ಚುನಾವಣೆಯಲ್ಲೂ ಸರ್ಕಾರ ಉರುಳಿಸುವ ಮಾತಾಡಿದ್ದಾರೆ ಎಂದ ಮೇಲೆ ಆಪರೇಷನ್ ಕಮಲ ನಡೆಯುತ್ತಿದೆ ಎಂದೇ ಅರ್ಥ. ನಾವು ಹಗರಣಗಳನ್ನು ಮಾಡಿಲ್ಲ. ಸಿಎಂ ಸೇರಿದಂತೆ ಹಲವರ ಮೇಲೆ ಆರೋಪ ಮಾಡಿದ್ದಾರೆ. ಒಂದನ್ನೂ ಸಾಬೀತುಪಡಿಸಿಲ್ಲ’ ಎಂದು ದೂರಿದರು.
‘ನಮ್ಮ ಶಾಸಕರನ್ನು ಸಂಪರ್ಕಿಸಿರುವುದು ಸತ್ಯ. ಆಡಿಯೊ, ವಿಡಿಯೊ ಯಾರ ಬಳಿ ಇದೆಯೆಂದು ಅವರು ಬಿಡುಗಡೆ ಮಾಡುತ್ತಾರೆ? ಮಗನ ಚುನಾವಣೆಗಾಗಿ ನೂರಾರು ಕಂಪನಿಗಳಿಂದ ಎಚ್.ಡಿ. ಕುಮಾರಸ್ವಾಮಿಯವರು ರೋಲ್‌ಕಾಲ್ ಮಾಡಿ ಸಾವಿರಾರು ಕೋಟಿ ಹಣ ಪಡೆದಿದ್ದಾರೆ. ಬಿಜೆಪಿಯ ಶೇ 40 ಕಮಿಷನ್ ಆರೋಪಕ್ಕೆ ತಪ್ಪಿತಸ್ಥರ ತಲೆದಂಡವಾಗಿದೆ. ಚನ್ನಪಟ್ಟಣ, ಶಿಗ್ಗಾವಿ ಉಪಚುನಾವಣೆಯಲ್ಲಿ ಎಷ್ಟು ಖರ್ಚಾಗಿದೆ ಗೊತ್ತಾ? ಜೆಡಿಎಸ್-ಬಿಜೆಪಿಗೆ ಸರಿಸಾಟಿಯಾಗಿ ನಾವು ಓಡೋಕೆ ಆಗಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆಗನ್ನು ಮುಂದಿಟ್ಟುಕೊಂಡು ಮತ ಕೇಳಿದ್ದೇವೆ’ ಎಂದರು.
‘ಪ್ರಲ್ಹಾದ ಜೋಶಿಯವರಿಗೆ ತಾಕತ್ತು ಜಾಸ್ತಿ. ನಮಗೆ ಸ್ವಲ್ಪ ಕಡಿಮೆ. ಅವರ ಆರೋಪಗಳಿಗೆ ಮೊದಲು ದಾಖಲೆಗಳನ್ನು ಬಿಡುಗಡೆ ಮಾಡಲಿ. ಕಡಿಮೆ ತಾಕತ್ತಿನ ನಾವು ಆ ಮೇಲೆ ಬಿಡುಗಡೆ ಮಾಡುತ್ತೇವೆ. ಸಮಯ ಬಂದಾಗ ಎಲ್ಲಾ ಬಿಡುಗಡೆಯಾಗುತ್ತದೆ’ ಎಂದರು.
Quote - ಕಾಂಗ್ರೆಸ್ ಶಾಸಕರ ಖರೀದಿಗೆ ಈಗಲೂ ಬಿಜೆಪಿ ಯತ್ನಿಸುತ್ತಿದೆ. ಈ ಕುರಿತು ದಾಖಲೆ ಸಿಕ್ಕರೆ ಅದರ ಬಗ್ಗೆಯೂ ತನಿಖೆ ಮಾಡುತ್ತೇವೆ –ಜಿ.ಪರಮೇಶ್ವರ ಗೃಹ ಸಚಿವ
ಶಾಸಕ ಗಣಿಗ ದಾಖಲೆ ಕೊಡಲಿ: ನಿಖಿಲ್ ಹಾಸನ: ‘ಕಾಂಗ್ರೆಸ್ ಶಾಸಕರಿಗೆ ಕೋಟಿಗಟ್ಟಲೆ ಆಫರ್ ಕೊಟ್ಟಿದ್ದಾರೆಂದು ಆರೋಪಿಸಿರುವ ಶಾಸಕ ರವಿ ಗಣಿಗ ದಾಖಲೆಗಳಿದ್ದರೆ ರಾಜ್ಯದ ಜನತೆಯ ಮುಂದಿಡಲಿ’ ಎಂದು ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು. ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ‘136 ಶಾಸಕರಿರುವ ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಬೇಕಾದ ಶಾಸಕರ ಸಂಖ್ಯೆಯ ಮಿತಿ ಮೀರಿ ರಾಜ್ಯದ ಜನ ಶಕ್ತಿ ತುಂಬಿದ್ದಾರೆ. ಅದಕ್ಕೆ ಹಲವು ಕಾರಣಗಳಿವೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಒಡೆಯುವ ಶಾಸಕರನ್ನು ಖರೀದಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು. ‘ಒಂದೂವರೆ ವರ್ಷದಲ್ಲಿ ನಡೆದಿರುವ ಭ್ರಷ್ಟಾಚಾರ ಹಗರಣ ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಲೋಕಸಭಾ ಚುನಾವಣೆ ವೇಳೆ ನಾಲ್ಕು ತಿಂಗಳು ಗ್ಯಾರಂಟಿ ತಡೆ ಹಿಡಿದಿದ್ದರು. ಚುನಾವಣೆ ಬಂದಾಗ ಗೃಹಲಕ್ಷ್ಮಿ ಹಣ ಹಾಕಿದರು. ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.