ಕಿಕ್ಕೇರಿ: ಹೋಬಳಿಯ ಲಿಂಗಾಪುರದಲ್ಲಿ ಬುಧವಾರ ಸಂಜೆ (ಮಾ.20) ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ.
ಗ್ರಾಮದ ರಾಜೇಂದ್ರ, ಮಂಜುಳಾ ಅವರ ಮೂರನೇ ಪುತ್ರಿ ಎಲ್.ಆರ್. ಪ್ರೇಮಕುಮಾರಿ (26) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
‘ಮೈಸೂರಿನ ಎನ್.ಆರ್. ಮೊಹಲ್ಲಾದ ಕುಮಾರಸ್ವಾಮಿ ಅವರ ಪುತ್ರ ರಾಘವೇಂದ್ರ ಎಂಬುವವರಿಗೆ 2 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ವಿವಾಹದ ವೇಳೆ 150 ಗ್ರಾಂ ಚಿನ್ನ, ₹5 ಲಕ್ಷ ವರದಕ್ಷಿಣೆಯಾಗಿ ನೀಡಲಾಗಿತ್ತು. ಆರಂಭದಲ್ಲಿ ಚೆನ್ನಾಗಿದ್ದರು. ನಂತರ ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತರುವಂತೆ ಆಗಿಂದಾಗ್ಗೆ ಹಿಂಸೆ ನೀಡಲು ಆರಂಭಿಸಿದ್ದರು. ನಿತ್ಯ ಗಲಾಟೆ, ಬೆದರಿಕೆ ಹಾಕುತ್ತಿದ್ದರು. ಈ ಕುರಿತು ಸಾಕಷ್ಟು ರಾಜಿ, ಪಂಚಾಯಿತಿಗಳು ನಡೆದವು. ಯಾವುದೂ ಪ್ರಯೋಜನವಾಗದೆ, ಹಿಂಸೆ ತಾಳಲಾರದೆ ವರ್ಷದ ಹಿಂದೆ ತವರು ಮನೆಗೆ ಮನೆಗೆ ಕರೆದುಕೊಂಡು ಬಂದಿದ್ದಾಗಿ ಮಂಜುಳಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ದಾಂಪತ್ಯ ಕಲಹ, ವರದಕ್ಷಿಣೆ ಕಿರುಕುಳ ಸಂಬಂಧ ಕಿಕ್ಕೇರಿ, ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಲಾಗಿತ್ತು. ಹಾಗೂ ಕೆ.ಆರ್.ಪೇಟೆ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಲಾಗಿತ್ತು.
‘ಪ್ರೇಮಕುಮಾರಿ ತನ್ನ ಭವಿಷ್ಯ ರೂಪಿಸಿಕೊಳ್ಳಲು ಹಾಸನದಲ್ಲಿ ಎಲ್‌ಎಲ್‌ಬಿ ವ್ಯಾಸಂಗಕ್ಕಾಗಿ ಸೇರಿಕೊಂಡಿದ್ದಳು. ಕಳೆದ ವಾರ ರಾಘವೇಂದ್ರ ತನ್ನ ಕುಟುಂಬದರೊಂದಿಗೆ ಸೇರಿಕೊಂಡು ಹಣ ತಂದುಕೊಡಲು ಈಕೆಗೆ ಪೋನ್ ಮೂಲಕ ಕರೆ ಮಾಡಿ ಬೆದರಿಕೆ ಹಾಕಿದ್ದ. ಹಣ ನೀಡಲು ನಿರಾಕರಿಸಿದರೆ ಸುಫಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕದ್ದ. ಪತಿ, ಕುಟುಂಬದವರ ಬೆದರಿಕೆಗೆ ಹೆದರಿ ಡೆತ್‌ನೋಟ್ ಬರೆದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಮಂಜುಳಾ ದೂರಿನಲ್ಲಿ ತಿಳಿಸಿದ್ದಾರೆ.
ಮಂಜುಳಾ ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.