ಬೆಳಕವಾಡಿ: ಮನೆ ಮನೆಗೆ ತಿರುಗಿ ಕಾಯಕವನ್ನು ಮಾಡಿದಂತಹ ಪವಾಡ ಪುರುಷರು ಮಲೈ ಮಹದೇಶ್ವರ ಮತ್ತು ಮಂಟೇಸ್ವಾಮಿ ಎಂದು ಜಾನಪದ ಗಾಯಕ ಮಳವಳ್ಳಿ ಎಂ.ಮಹದೇವಸ್ವಾಮಿ ಹೇಳಿದರು.
ಬೆಳಕವಾಡಿ ಸಮೀಪದ ಪೂರಿಗಾಲಿ ಗ್ರಾಮದ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಭೀಮ ಬೆಳಕು ಸಾಂಸ್ಕೃತಿಕ ಕಲಾ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಪೂರ್ವಿಕರು ಜಾನಪದ ಗೀತೆಗಳನ್ನು ಹಾಡಿ ಉಳಿಸಿ ಹೋಗಿದ್ದಾರೆ. ಅವರ ಪರಂಪರೆಯನ್ನು ಉಳಿಸಲು ನಾನು ಕೂಡ ಜೋಳಿಗೆ , ಕಂಸಾಳೆ, ತಂಬೂರಿ ಹಿಡಿದುಕೊಂಡು ಮನೆ ಮನೆಯಲ್ಲಿ ಕಾಯಕ ಮಾಡಿದ್ದೇನೆ. ಜಾನಪದ ಕಲೆಯನ್ನು ಉಳಿಸುವುದಕ್ಕೆ ಮುಂದಿನ ಪೀಳಿಗೆಗೆ ಪರಿಚಯಿಸುವುದಕ್ಕೆ ಕಲಾತಂಡದವರು ಟ್ರಸ್ಟ್ ಆರಂಭಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ವಿಶ್ವವಿದ್ಯಾನಿಲಯದ ನಾಟಕ ವಿಭಾಗದ ಡಾ. ಚಂದ್ರಪ್ಪ ಮಾತನಾಡಿ, ಆಚರಣೆ, ಪರಂಪರೆ, ಸಂಪ್ರದಾಯ, ಸಂಯಮ, ಶಿಸ್ತು, ಸಂಸ್ಕಾರ, ಗುರು ಹಿರಿಯರಿಗೆ ಗೌರವ ಕೊಡುವುದು ಜಾನಪದದ ಒಳಗೆ ಇರುವ ದೊಡ್ಡ ಶಕ್ತಿ. ಯಾವ ವ್ಯಕ್ತಿ ಜಾನಪದವನ್ನು ಅಪ್ಪಿ, ಒಪ್ಪಿ, ಬೆಳೆಸಿಕೊಳ್ಳುತ್ತಾನೋ ಆ ವ್ಯಕ್ತಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ ಎನ್ನುವುದಕ್ಕೆ ಮಳವಳ್ಳಿ ಮಹದೇವಸ್ವಾಮಿ ಸಾಕ್ಷಿ ಎಂದರು.
ಗ್ರಾ.ಪಂ.ಅಧ್ಯಕ್ಷೆ ರೂಪ, ಜಿ.ಪಂ. ಮಾಜಿ ಸದಸ್ಯ ಜಯರಾಜು, ಭೀಮ ಬೆಳಕು ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಕೊಳತ್ತೂರು ಕೆ.ಎಂ.ನಂಜುಂಡಸ್ವಾಮಿ, ಭೂಮಿಗೀತ ಕಲಾತಂಡದ ಎಂ. ನಟರಾಜ, ಪ್ರತಾಪ್, ಮುಖ್ಯ ಶಿಕ್ಷಕ ಎಂ. ಸಿದ್ದರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.