ನಾಗಮಂಗಲ: ಪಟ್ಟಣದ 15ನೇ ವಾರ್ಡ್‌ನ ವೆಂಕಟೇಶ್ವರ ಚಿತ್ರಮಂದಿರದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಚರಂಡಿ ಹಾಗೂ ಒಳಚರಂಡಿಯನ್ನು ಮುಚ್ಚಿರು ವುದರಿಂದ ಕೊಳಚೆ ನೀರು ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಈ ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹಗೊಂಡಿದ್ದು, ಸ್ಥಳೀಯರ ನಿವಾಸಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.
ಹೆದ್ದಾರಿ ಕಾಮಗಾರಿ ನಡೆಸಲಾಗು ತ್ತಿದೆ. ಜನರಿಗೆ ಯಾವುದೇ ಸೂಚನೆ ನೀಡದೇ ಚರಂಡಿ ಮತ್ತು ಒಳಚರಂಡಿಯನ್ನು ಮುಚ್ಚಲಾಗಿದೆ. ಒಂದು ವಾರದಿಂದ ಕೊಳಚೆ ನೀರು ಸಂಗ್ರಹಗೊಳ್ಳುತ್ತಿದೆ. ನೀರು ದುರ್ವಾಸನೆ ಬೀರುತ್ತಿದ್ದು, ಜನರು ಮೂಗು ಮುಚ್ಚಿ ಕೊಂಡು ಓಡಾಗುತ್ತಿದ್ದಾರೆ. ಅಲ್ಲದೆ, ಸ್ಥಳೀಯರು ರೋಗಗಳ ಭೀತಿಯಲ್ಲಿ ಬದುಕುಂತಾಗಿದೆ. ಈ ಕೊಳಚೆ ನೀರು ಕೆಲ ಅಂಗಡಿಗಳಿಗೆ ನುಗ್ಗಿದೆ. ಇದರಿಂದ ಅಲ್ಲಿ ಕೆಲಸ ಮಾಡುವ ಕೆಲಸಗಾರರು ಪರದಾಡುವಂತಾಗಿದೆ.
ಚರಂಡಿ ನೀರು ಮನೆ ಮುಂದೆ ಸಂಗ್ರಹವಾಗಿದ್ದು, ಮಕ್ಕಳು ಮತ್ತು ವೃದ್ಧರೂ ಓಡಾಡಲು ಸಾಧ್ಯವಾಗುತ್ತಿಲ್ಲ. ಮನೆಗಳಲ್ಲಿ ವಾಸ ಮಾಡಲು ಆಗುತ್ತಿಲ್ಲ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಮಹಮ್ಮದ್ ಹಸನ್ ದೂರಿದರು.
‘ಜನರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗೆ ಮೊದಲೇ ಸೂಚನೆ ನೀಡಲಾಗಿತ್ತು. ಸದ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೀರು ಹರಿದು ಹೋಗಲು ತಾತ್ಕಾಲಿಕ ವ್ಯವಸ್ಥೆ ಮಾಡಲು ಕ್ರಮವಹಿಸುತ್ತೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಗಂಗಾಧರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.