ADVERTISEMENT

ಮಂಡ್ಯ | ಪಹಣಿಯಲ್ಲಿ ವಕ್ಫ್‌ ಹೆಸರು ಕೈಬಿಡಿ: ರೈತ ಸಂಘ ಆಗ್ರಹ

ಭತ್ತಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡಲು ರೈತಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 12:41 IST
Last Updated 26 ನವೆಂಬರ್ 2024, 12:41 IST
ರೈತರ ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರು ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ (ಮೂಲ ಸಂಘಟನೆ) ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು
ರೈತರ ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರು ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ (ಮೂಲ ಸಂಘಟನೆ) ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು   

ಮಂಡ್ಯ: ರೈತರ ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರು ಕೈಬಿಟ್ಟು, ವಕ್ಫ್‌ ಬೋರ್ಡ್ ನಿಷಿದ್ಧಗೊಳಿಸಿ ಜನರನ್ನು ಉಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ (ಮೂಲ ಸಂಘಟನೆ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ವಕ್ಫ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಿರುವುದರಿಂದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಕೂಡಲೇ ಹೆಸರು ತೆಗೆಸಬೇಕು. ಭತ್ತ ಖರೀದಿ ಕೇಂದ್ರಗಳನ್ನು ತೆರೆದು, ರೈತರಿಂದ ಖರೀದಿ ಮಾಡುವ ಪ್ರತಿ ಕ್ವಿಂಟಲ್ ಭತ್ತಕ್ಕೆ ಕೇಂದ್ರದ ದರದ ಜೊತೆಗೆ ರಾಜ್ಯ ಸರ್ಕಾರ ₹700 ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಭತ್ತ ಕಟಾವು ಯಂತ್ರದ ಬಾಡಿಗೆ ದರ ದುಬಾರಿಯಾಗಿರುವುದರಿಂದ ಕೃಷಿ ಇಲಾಖೆ ಏಕದರ ನಿಗದಿ ಮಾಡಬೇಕು. ಬೇಸಿಗೆ ಬೆಳೆ ಒಣಗದಂತೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸಲು ಮುಂದಾಗಬೇಕು. ಅರ್ಧಕ್ಕೆ ಸ್ಥಗಿತಗೊಂಡಿರುವ ವಿ.ಸಿ. ನಾಲೆ ಕಾಮಗಾರಿ ಪೂರ್ಣಗೊಳಿಸಬೇಕು. ಜೊತೆಗೆ ಉಪಕಾಲುವೆಗಳನ್ನು ದುರಸ್ತಿಗೊಳಿಸಿ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಮುಕ್ತ ಮತ್ತು ನ್ಯಾಯಸಮ್ಮತ ದರವನ್ನು (ಎಫ್‌ಆರ್‌ಪಿ) ಕಬ್ಬು ಆಧಾರಿತ ಉಪ ಉತ್ಪನ್ನಗಳ ಬೆಲೆಗಳ ಆಧಾರದ ಮೇಲೆ ಪ್ರತಿ ಟನ್‌ಗೆ ₹4,500 ನೀಡಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಪಡೆಯಲು ದಾಖಲಾತಿ ಒದಗಿಸಲು ರೈತರಿಗೆ ಕಷ್ಟವಾಗುತ್ತಿರುವುದರಿಂದ ದಾಖಲಾತಿ ಸರಳೀಕರಣ ಮಾಡಿ, ಕಡಿಮೆ ಬಡ್ಡಿ ದರದಲ್ಲಿ ₹10 ಲಕ್ಷದವರೆಗೆ ಬೆಳೆ ಸಾಲ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ರೈತರು, ಸ್ತ್ರೀ ಶಕ್ತಿ ಮತ್ತು ಮಹಿಳಾ ಸಂಘಗಳ ಸದಸ್ಯರ ಆಧಾರ್ ಕಾರ್ಡ್ ಆಧಾರವಾಗಿಟ್ಟುಕೊಂಡು ಸಾಲ ನೀಡುತ್ತಿದ್ದಾರೆ. ಇದರಿಂದ ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗದ ಹಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಾಲ ವಸೂಲಿದಾರರು ಹಾಗೂ ಮುಖ್ಯಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ವಹಿಸಬೇಕು ಎಂದು ಆಗ್ರಹ ಪಡಿಸಿದರು.

ಸಂಘಧ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ‘ಯಾವುದೇ ಸರ್ಕಾರಗಳು ರೈತರ ಪರವಾಗಿ ನಿಲ್ಲುವುದಿಲ್ಲ ಎಂಬುದಕ್ಕೆ ರಾಜ್ಯದಲ್ಲಿ ವಕ್ಫ್‌ ತನ್ನಿಷ್ಟದಂತೆ ಮೆರೆಯುತ್ತಿರುವುದೇ ಸಾಕ್ಷಿಯಾಗಿದೆ. ದೇವಾಲಯದ ಆಸ್ತಿಗಳು ಮತ್ತು ರೈತರ ಪಹಣಿಯನ್ನೂ ಬಿಡುತ್ತಿಲ್ಲ. ಜೊತೆಗೆ ಶಾಲಾ ಸ್ಥಳಗಳನ್ನು ನುಂಗಿ ಹಾಕುತ್ತಿರುವುದನ್ನು ನಾವು ಕಾಣುತ್ತೇವೆ. ಇದನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗವುದು’ ಎಂದು ಎಚ್ಚರಿಕೆ ನೀಡಿದರು.

ಸಂಘದ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ, ಉಪಾಧ್ಯಕ್ಷ ಕೆ.ನಾಗೇಂದ್ರಸ್ವಾಮಿ, ಸೋ.ಶಿ.ಪ್ರಕಾಶ್, ಎಚ್.ಜೆ.ಪ್ರಭುಲಿಂಗು, ಎಲ್.ಸುರೇಶ್, ಬಸವರಾಜು, ಕೆ.ಜೆ.ಉಮೇಶ್, ಅಣ್ಣೂರು ಮಹೇಂದ್ರ, ಕೀಲಾರ ಸೋಮಶೇಖರ್‌, ತೇಜು ಕೋಡಿಶೆಟ್ಟಿಪುರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.