ADVERTISEMENT

ದಸರೆ: ಶ್ರೀರಂಗಪಟ್ಟಣದಲ್ಲಿ ಅಗಣಿತ ಕುರುಹು

ಹಂಪಿ ಮಾದರಿಯಲ್ಲೇ ಉತ್ಸವ; 2008ರಿಂದ ದಸರಾ ಉತ್ಸವಕ್ಕೆ ಮತ್ತೆ ಚಾಲನೆ

ಗಣಂಗೂರು ನಂಜೇಗೌಡ
Published 24 ಸೆಪ್ಟೆಂಬರ್ 2024, 7:36 IST
Last Updated 24 ಸೆಪ್ಟೆಂಬರ್ 2024, 7:36 IST
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಬಲ ಪಾರ್ಶ್ವದಲ್ಲಿ, ಯದುವಂಶದ ಒಡೆಯರ್‌ ದೊರೆಗಳ ಕಾಲದ ಅರಮನೆ ಇದ್ದ ಸ್ಥಳದಲ್ಲಿರುವ ವಸಂತ ಕೊಳ
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಬಲ ಪಾರ್ಶ್ವದಲ್ಲಿ, ಯದುವಂಶದ ಒಡೆಯರ್‌ ದೊರೆಗಳ ಕಾಲದ ಅರಮನೆ ಇದ್ದ ಸ್ಥಳದಲ್ಲಿರುವ ವಸಂತ ಕೊಳ   

ಶ್ರೀರಂಗಪಟ್ಟಣ: ವಿಜಯನಗರ ಸಾಮ್ರಾಜ್ಯ ಪತನದ ನಂತರ ನಾಡಹಬ್ಬ ದಸರಾ ಉತ್ಸವ ವೈಭವೋಪೇತವಾಗಿ ನಡೆಯಲು ಆರಂಭವಾದದ್ದು ಶ್ರೀರಂಗಪಟ್ಟಣದಲ್ಲಿ ಎಂಬುದಕ್ಕೆ ಅಗಣಿತ ಕುರುಹುಗಳು ಉಳಿದಿವೆ.

ರಾಜ ಒಡೆಯರ್‌ ಶ್ರೀರಂಗಪಟ್ಟಣವನ್ನು ರಾಜಧಾನಿ ಮಾಡಿಕೊಂಡು ಕ್ರಿ.ಶ 1610ರಲ್ಲಿ ಸ್ವತಂತ್ರ ದೊರೆಯಾಗಿ ಅಧಿಕಾರಕ್ಕೇರಿದ ಬಳಿಕ ವಿಜಯನಗರದ ರಾಜಧಾನಿ ಹಂಪಿಯಲ್ಲಿ ನಡೆಯುತ್ತಿದ್ದ ಮಾದರಿಯಲ್ಲಿ ಇಲ್ಲಿಯೂ ದಸರಾ ಉತ್ಸವ ಶುರುವಾಯಿತು.

ರಣಧೀರ ಕಂಠೀರವ ನರಸರಾಜ ಒಡೆಯರ್‌ (ಕ್ರಿ.ಶ 1638–59) ಮತ್ತು ಚಿಕ್ಕದೇವರಾಜ ಒಡೆಯರ್‌ (ಕ್ರಿ.ಶ 1673–1704) ಕಾಲದಲ್ಲಿ ಇಲ್ಲಿ ನಡೆಯುತ್ತಿದ್ದ ನಾಡಹಬ್ಬ ದಶ ದಿಕ್ಕುಗಳಲ್ಲೂ ಪ್ರಖ್ಯಾತಿ ಪಡೆದಿತ್ತು. ಶ್ರೀರಂಗನಾಥಸ್ವಾಮಿ ದೇವಾಲಯದ ಬಲ ಪಾರ್ಶ್ವದಲ್ಲಿದ್ದ ಅರಮನೆಯಲ್ಲಿ ನವರಾತ್ರಿಯ ಸಾಂಪ್ರದಾಯಿಕ ಆಚರಣೆಗಳು ಹತ್ತು ದಿನಗಳ ಕಾಲ ನಡೆಯುತ್ತಿದ್ದವು.

ADVERTISEMENT

ಬಳಿಕ ಅಧಿಕಾರಕ್ಕೆ ಬಂದ ಇಮ್ಮಡಿ ಕಂಠೀರವ ನರಸರಾಜ ಒಡೆಯರ್‌ (ಕ್ರಿ.ಶ 1704–14), ಕೃಷ್ಣರಾಜ ಒಡೆಯರ್‌ (1714–32) ಏಳನೇ ಚಾಮರಾಜ ಒಡೆಯರ್‌, (1732–34), ಇಮ್ಮಡಿ ಕೃಷ್ಣರಾಜ ಒಡೆಯರ್‌ (1734–66), ನಂಜರಾಜ ಒಡೆಯರ್‌ (1766–70), ಬೆಟ್ಟದ ಚಾಮರಾಜ ಒಡೆಯರ್‌ (1770–76) ಕಾಲದಲ್ಲಿ ಕೂಡ ದಸರಾ ಉತ್ಸವದ ಸಂಭ್ರಮದಿಂದ ನಡೆಯುತ್ತಿತ್ತು. ನವಾಬ್‌ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್‌ ಕಾಲದಲ್ಲಿ ನವರಾತ್ರಿ ಆಚರಣೆ ಸರಳತೆ ಪಡೆಯಿತು.

ನಾಲ್ಕನೇ ಆಂಗ್ಲೋ– ಮೈಸೂರು ಯುದ್ದದಲ್ಲಿ (1799) ಶ್ರೀರಂಗಪಟ್ಟಣ ಪತನಗೊಂಡು ರಾಜಧಾನಿ ಮೈಸೂರಿಗೆ ಸ್ಥಳಾಂತರಗೊಂಡ ಕಾರಣ ದಸರಾ ಉತ್ಸವ ಇಲ್ಲಿ ಸಂಪೂರ್ಣವಾಗಿ ನಿಂತು ಹೋಯಿತು.

ಪರಂಪರೆ ಇಲಾಖೆ ಆಯುಕ್ತರಾಗಿದ್ದ ಟಿ.ಎಂ. ವಿಜಯಭಾಸ್ಕರ್‌ ಅವರ ಆಸಕ್ತಿಯ ಫಲವಾಗಿ 2008ರಲ್ಲಿ ಈ ಪಾರಂಪರಿಕ ಪಟ್ಟಣದಲ್ಲಿ ದಸರಾ ಉತ್ಸವಕ್ಕೆ ಮತ್ತೆ ಚಾಲನೆ ಸಿಕ್ಕಿತು. ಆರಂಭದ ವರ್ಷಗಳಲ್ಲಿ ಒಂದೆರಡು ದಿನ ನಡೆಯುತ್ತಿದ್ದ ದಸರಾ ಉತ್ಸವ ಈಗ 3ರಿಂದ 5 ದಿನಗಳ ಕಾಲ ನಡೆಯುತ್ತಿದೆ. 1610ರಿಂದ ಪರಿಗಣಿಸಿದರೆ ಈ ವರ್ಷದ್ದು 414ನೇ ದಸರಾ.

ಕಾವ್ಯದಲ್ಲಿ ದಸರಾ:

ಕಂಠೀರವ ನರಸರಾಜ ಒಡೆಯರ್‌ ಕಾಲದಲ್ಲಿ ದಸರಾ ಉತ್ಸವ ಸಂಭ್ರಮದಿಂದ ನಡೆಯುತ್ತಿತ್ತು ಎಂಬುದಕ್ಕೆ ಸಾಹಿತ್ಯಾಧಾರಗಳಿವೆ. ಅದರಲ್ಲಿ ಮುಖ್ಯವಾದುದು ಗೋವಿಂದ ವೈದ್ಯನ ‘ಕಂಠೀರವ ನರಸರಾಜ ವಿಜಯಂ’ ಕೃತಿ. ಇದರ ರಚನೆಕಾರ ತಲಕಾಡಿನ ಭಾರತೀನಂಜ ಎಂಬ ವಾದವೂ ಇದೆ. ಒಟ್ಟು 26 ಸಂಧಿಗಳ ಈ ಕಾವ್ಯದ ಮೂರು ಸಂಧಿಗಳು ದಸರೆಯ ವೈಭವವನ್ನು ವರ್ಣಿಸುತ್ತವೆ. ಈ ಕೃತಿಯನ್ನು ಸಾಹಿತಿ ಬೆಟಗೇರಿ ಕೃಷ್ಣ ಶರ್ಮಾ ‘ಚಾರಣ ಕಾವ್ಯ’ ಎಂದು ಕರೆದಿದ್ದಾರೆ.

ಈ ಕೃತಿಯ ಪುರ ಶೃಂಗಾರ ಭಾಗದಲ್ಲಿ ವಿಜಯದಶಮಿ ಆಚರಣೆಯ ಸಿದ್ದತೆಗಳು, ಕಂಠೀರವನ ಒಡ್ಡೋಲಗದ ವರ್ಣನೆ, ಆಯುಧ ಪೂಜೆ ಮತ್ತು ಜಂಬೂ ಸವಾರಿಯ ಚಿತ್ರಣವನ್ನು ಕವಿ ಪ್ರತ್ಯಕ್ಷದರ್ಶಿಯಾಗಿ ನಿಂತು, ನೋಡಿ ಆನಂದಿಸಿದವನಂತೆ ಬಣ್ಣಿಸಿದ್ದಾರೆ.

‘ದೊರೆಯು ಪಲ್ಲಕ್ಕಿಯಿಂದಿಳಿದು ಜಯ ಘೋಷಗಳ ನಡುವೆ ಓಲಗ ಶಾಲೆಗೆ ಆಗಮಿಸಿ ನವರತ್ನದ ಗದ್ದುಗೆಯಲ್ಲಿ ಮಂಡಿಸಿದನು..., ಉತ್ಸವದ ಆಮಂತ್ರಣ ತಲುಪಿ ಹತ್ತಿರದ ಮಾಗಡಿ, ಕುಣಿಗಲುಗಳಿಂದ ಹಿಡಿದು ದೂರದ ಮಲಯಾಳ, ತಂಜಾವೂರು, ಮಧುರೆಯ ದೊರೆಗಳು ಆಗಮಿಸಲಾಗಿ ಅವರಿಗೆ ಯಥೋಚಿತವಾದ ಸ್ವಾಗತವು ದೊರೆಯಿತು...’ ಎಂದು ಕವಿ ವರ್ಣಿಸಿದ್ದಾನೆ.

ಶ್ರೀರಂಗಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿರುವ ಯದು ವಂಶದ 12ನೇ ದೊರೆ ರಣಧೀರ ಕಂಠೀರವ ನರಸರಾಜ ಒಡೆಯರ್‌ ಪ್ರತಿಮೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.