ADVERTISEMENT

ಬಡವರಿಗೆ ಕಾಂಗ್ರೆಸ್ ಸರ್ಕಾರದಿಂದ ಆರ್ಥಿಕ ಶಕ್ತಿ: ಶಾಸಕ ಪಿ.ಎಂ. ನರೇಂದ್ರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 15:11 IST
Last Updated 28 ಜೂನ್ 2024, 15:11 IST
ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮ ಪಂಚಾಯತಿಯಿಂದ ನಿರ್ಮಿಸಿರುವ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಉದ್ಘಾಟಿಸಿದರು. ಎಲ್.ಮಮತಾ, ಚನ್ನಿಗರಾಮು ಇದ್ದರು.
ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮ ಪಂಚಾಯತಿಯಿಂದ ನಿರ್ಮಿಸಿರುವ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಉದ್ಘಾಟಿಸಿದರು. ಎಲ್.ಮಮತಾ, ಚನ್ನಿಗರಾಮು ಇದ್ದರು.   

ಮಳವಳ್ಳಿ: ಮುಂದಿನ ಒಂದೂವರೆ ವರ್ಷದೊಳಗೆ ಕ್ಷೇತ್ರದ ಎಲ್ಲರಿಗೂ ಕುಡಿಯಲು ಶುದ್ಧ ಕಾವೇರಿ ನೀರು ಒದಗಿಸಲು ಹಲವು ಯೋಜನೆಗಳು ಜಾರಿಯಾಗಲಿವೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ತಾಲ್ಲೂಕಿನ ಕಂದೇಗಾಲ ಗ್ರಾಮ ಪಂಚಾಯತಿಯಿಂದ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕಳಂಕರಹಿತ ಆಡಳಿತ ನೀಡುವುದರ ಜತೆಗೆ ಕ್ಷೇತ್ರದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆದು ತಾಲ್ಲೂಕಿನ ಅಭಿವೃದ್ಧಿಗೆ ಹತ್ತಾರು ಯೋಜನೆಗಳನ್ನು ತಂದಿರುವೆ. ಅದರ ಜತೆಗೆ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ನುಡಿದಂತೆ ನಡೆದು ಘೋಷಣೆ ಮಾಡಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಬಡವರ ಬದುಕಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ADVERTISEMENT

‘ಗ್ರಾಮೀಣ ಭಾಗದ ಅಭಿವೃದ್ಧಿಗೆ ಅನುದಾನ ಕೊರತೆಯಾಗದಂತೆ ಆಡಳಿತ ನಡೆಸಲಾಗುತ್ತಿದೆ. ನಾವು ಎಂದಿಗೂ ಸುಳ್ಳು ಭರವಸೆ ನೀಡುವುದಿಲ್ಲ. ಬೇರೆಯವರ ರೀತಿ ಸುಳ್ಳು ಘೋಷಣೆ ಮಾಡಿ, ಅನುದಾನ ಕೊಟ್ಟು ಕಿತ್ತುಕೊಳ್ಳುವುದಿಲ್ಲ, ನಮ್ಮ ಸರ್ಕಾರ ಇಷ್ಟೆಲ್ಲ ಸವಲತ್ತುಗಳನ್ನು ನೀಡುತ್ತಿದ್ದರೂ ಜನರು ಭಾವನಾತ್ಮಕವಾಗಿ ಬೇರೆಯದೇ ದಾರಿಯಲ್ಲಿ ಚಿಂತನೆ ನಡೆಸಿದ್ದರು. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎನ್ನುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಹಿನ್ನಡೆಯಾಗಿರುವುದು ಬೇಸರ ತಂದಿದೆ’ ಎಂದರು.

‘ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ನಮ್ಮ ಸರ್ಕಾರ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಮಳವಳ್ಳಿ ಕ್ಷೇತ್ರದಲ್ಲಿ ನಾವು ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಲೋಕಸಭೆ ಚುನಾವಣೆಯಲ್ಲಿನ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಟಿಎಪಿಸಿಎಂಎಸ್ ನಿರ್ದೇಶಕ ಕುಳ್ಳಚನ್ನಂಕಯ್ಯ ಮಾತನಾಡಿ, ‘ನಮ್ಮ ಭಾಗದ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಿಗರಾಮು ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಇಒ ಎಲ್.ಮಮತಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಸುನೀತಾ, ರಾಧಾ, ಜವರಾಯಿಶೆಟ್ಟಿ, ಗೌರಮ್ಮ, ಚಿಕ್ಕಹೈದೇಗೌಡ, ಪುಟ್ಟರಾಜು, ಜಯಮ್ಮ, ಭಾಗಮ್ಮ, ಸಿದ್ದರಾಜೇ ಅರಸು, ಗೌರಮ್ಮ, ಆರೋಗ್ಯಾಧಿಕಾರಿ ಡಾ.ಸುರೇಶ್, ಪಿಡಿಒ ಎನ್.ನವೀನ್ ಕುಮಾರ್, ತಾಲ್ಲೂಕು ಪಂಚಾಯಿತಿ ಎಸ್.ಆರ್.ಅಖಿಲಾಂಭಿಕೆ, ಕೆ.ಸುಹಾಸ್, ಪಾರ್ಥಸಾರಥಿ, ಸೇವಾ ಕೇಂದ್ರ ನಿರ್ಮಾಣಕ್ಕೆ ಜಾಗ ದಾನ ಮಾಡಿದ ಮುತ್ತುರಾಯಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.