ಶ್ರೀರಂಗಪಟ್ಟಣ: ಮೆಕಾಲೆ ಶಿಕ್ಷಣ ಪದ್ಧತಿಯಲ್ಲಿದ್ದ ದೋಷಗಳನ್ನು ಪರಿಹರಿಸಲು ಹೊಸ ಶಿಕ್ಷಣ ನೀತಿ–2020 ಜಾರಿಗೆ ತರಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ವಿದ್ಯಾಭಾರತಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಅನುಷ್ಠಾನಕ್ಕೆ ತಂದರು. ಸ್ವಾತಂತ್ರ್ಯಾ ನಂತರ ಬಂದ
ಸರ್ಕಾರಗಳು ಆ ಪದ್ಧತಿಯ ತಪ್ಪುಗಳನ್ನು ಸರಿಪಡಿಸಲಿಲ್ಲ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣನೀತಿ–2020 ಭಾರತದ ದೇಸಿ ಚಿಂತನೆಗಳನ್ನು ಒಳಗೊಂಡಿದೆ. ಈ ದೇಶದ ಸಂಸ್ಕೃತಿ, ಪರಂಪರೆಯ ಸಂರಕ್ಷಣೆಗೆ ಪೂರಕ ವಾಗಿದೆ ಎಂದು ಅವರು ಹೇಳಿದರು.
ಸರ್ಕಾರಗಳು ಎಲ್ಲರಿಗೂ, ಎಲ್ಲ ಬಗೆಯ ಶಿಕ್ಷಣ ನೀಡುತ್ತದೆ ಎನ್ನಲಾಗದು. ದೇಶದ ಸಂಸ್ಕೃತಿಯ ಪುನರುತ್ಥಾನದ ಧ್ಯೇಯದೊಡನೆ ವಿದ್ಯಾ ಭಾರತಿ ಹೆಸರಿನ ಶಾಲೆಗಳನ್ನು ಆರಂಭಿಸಲಾಗಿದೆ. ಪಟ್ಟಣದಲ್ಲಿ 20 ವರ್ಷಗಳ ಹಿಂದೆ ಆರಂಭವಾಗಿರುವ ಈ ಶಾಲೆ ಪ್ರಗತಿ ಕಂಡಿರುವುದು ಸಂತಸದ ಸಂಗತಿ ಎಂದು ಸಚಿವರು ಹೇಳಿದರು.
ಶಾಲೆಯ ಸಂಯೋಜಕ ರಂಗನಾಥ್ ಮಾತನಾಡಿ, ದೇಶದಲ್ಲಿ 32 ಸಾವಿರ ಹಾಗೂ ರಾಜ್ಯದಲ್ಲಿ 400 ವಿದ್ಯಾ ಭಾರತಿ ಹೆಸರಿನ ಶಾಲೆಗಳಿವೆ. ದೇಸಿ ಸಂಸ್ಕೃತಿ, ಸಾಹಿತ್ಯ, ಯೋಗ, ನೈತಿಕ ಶಿಕ್ಷಣಕ್ಕೆ ಈ ಶಾಲೆಗಳಲ್ಲಿ ಆದ್ಯತೆ ನೀಡಲಾಗುತ್ತದೆ. ಎನ್‌ಎನ್‌ಪಿಆರ್ ಕಂಪೆನಿ ಶಾಲೆಗೆ ವಾಹನವನ್ನು ಕೊಡುಗೆಯಾಗಿ ನೀಡಿದೆ. ಯೂತ್ ಫಾರ್ ಸೇವಾ 30 ಮಕ್ಕಳನ್ನು ದತ್ತು ಪಡೆದಿದೆ ಎಂದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಫಲಕ ಅನಾವರಣ ಮಾಡಿದರು. ಶಾಲೆ ಅಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮಾ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾ ಭಾರತಿ ಕರ್ನಾಟಕದ ಪ್ರಾಂತೀಯ ಅಧ್ಯಕ್ಷ ಪರಮೇಶ್ವರ ಹೆಗಡೆ, ಸಾಸ್ಮೋಸ್ ಎಚ್‌ಇಟಿ ಟೆಕ್ನಾಲ ಜೀಸ್ ಸಂಸ್ಥಾಪಕ ಎಚ್.ಜಿ.ಚಂದ್ರಶೇಖರ್, ಶಿಕ್ಷಣ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಎಸ್.ಟಿ. ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು, ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಎಸ್. ಪ್ರಕಾಶ್, ಶಾಲೆಯ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮೀಶ್ ಶರ್ಮಾ, ಟ್ರಸ್ಟಿ ಶ್ರೀಪತಿ, ಬಿ.ವಿ. ವಿಷ್ಣುಮೂರ್ತಿ, ಪುರಸಭೆ ಸದಸ್ಯೆ ಪೂರ್ಣಿಮಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.