ADVERTISEMENT

ಶಿಕ್ಷಣ ಕ್ಷೇತ್ರವು ಜ್ಞಾನದ ಕೊಳವಿದ್ದಂತೆ: ವಿ.ಡಿ.ಸುವರ್ಣ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 16:01 IST
Last Updated 24 ನವೆಂಬರ್ 2024, 16:01 IST
ನಾಗಮಂಗಲ ತಾಲ್ಲೂಕಿನ ಬಿ.ಜಿ ನಗರದ ಬಿ.ಜಿ.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಡ್ಯದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ವಿ‌.ಡಿ.ಸುವರ್ಣ ಮಾತನಾಡಿದರು
ನಾಗಮಂಗಲ ತಾಲ್ಲೂಕಿನ ಬಿ.ಜಿ ನಗರದ ಬಿ.ಜಿ.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಡ್ಯದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ವಿ‌.ಡಿ.ಸುವರ್ಣ ಮಾತನಾಡಿದರು   

ನಾಗಮಂಗಲ: ಶಿಕ್ಷಣ ಕ್ಷೇತ್ರ ಎಂಬುದು ಮುತ್ತು ರತ್ನಗಳುಳ್ಳ ಸುಂದರ ಸರೋವರದಂತಿದ್ದು, ಈ ಜ್ಞಾನ ಕೊಳದಲ್ಲಿ ಎಷ್ಟು ಜನ ಮಿಂದರೂ, ಕೈ ತೊಳೆದುಕೊಂಡರೂ, ಸ್ಪರ್ಶಿಸಿದರೂ ಅಷ್ಟು ಫಲ ಅವರಿಗೆ ದೊರೆಯುತ್ತದೆ ಎಂದು ಮಂಡ್ಯದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ವಿ.ಡಿ.ಸುವರ್ಣ ಹೇಳಿದರು.

ತಾಲ್ಲೂಕಿನ ಬಿ.ಜಿ. ನಗರದ ಬಿ.ಜಿ.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಶೈಕ್ಷಣಿಕ ಮೌಲ್ಯಮಾಪನ ಮತ್ತು ಮೇಲುಸ್ತುವಾರಿ ಸಮಿತಿಯ ಬಿ.ಇಡಿ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆ ಮೌಲ್ಯಮಾಪನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನ ಸಾಧನೆಯು ಬಹು ಕಠಿಣ ಹೋರಾಟವಾಗಿದೆ. ಯಾರೇ ಆಗಲಿ ನಿತ್ಯ ಪರಿಶ್ರಮದಿಂದ ಬದುಕನ್ನು ರೂಪಿಸಿಕೊಳ್ಳಬೇಕಿದೆ. ಯಾರಲ್ಲಿ ಪ್ರಶ್ನಿಸುವ ಮನೋಧರ್ಮ ಬೆಳದಿರುತ್ತದೆಯೋ ಅವರು ಹೆಚ್ಚು ಜ್ಞಾನವನ್ನು ಗಳಿಸಬಹುದಾಗಿದೆ. ಶಿಕ್ಷಕ ವೃತ್ತಿಗೆ ಭಾಷಾ ಶುದ್ಧತೆಯೇ ಪರಿಪೂರ್ಣ ಹಂತವಾಗಿದ್ದು, ಭಾಷಾ ಸುಧಾರಣೆ ಮತ್ತು ಪರಿಷ್ಕರಣಿಯೊಂದಿಗೆ ಮುನ್ನಡೆದರೆ ವೃತ್ತಿ ಗೌರವನ್ನು ಹೆಚ್ಚಿಸಿಕೊಳ್ಳಬಹುದು. ಶಿಕ್ಷಕ ವೃತ್ತಿಯಲ್ಲಿ ಒಂದೇ ತಪ್ಪು ಪುನರಾವರ್ತನೆಯಾಗುತ್ತಿದ್ದರೆ ಅಜ್ಞಾನವಾಗುತ್ತದೆ. ಶಿಕ್ಷಕರು ವಿಷಯ ಸಂಪನ್ನರಾದರೆ ಮಾತ್ರ ವಿದ್ಯಾರ್ಥಿಗಳ ಮನವನ್ನು ತಲುಪಬಹುದು. ಆದ್ದರಿಂದ ವಿಷಯ ಸಂಪದೀಕರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಭವಿಷ್ಯದ ಪೀಳಿಗೆಯನ್ನು ಎತ್ತರಕ್ಕೆ ಕೊಂಡೊಯ್ಯಿರಿ ಎಂದರು.

ADVERTISEMENT

ನಂತರ ಕಾಲೇಜಿನ ಪ್ರಾಂಶುಪಾಲ ಎ.ಟಿ. ಶಿವರಾಮು ಮಾತನಾಡಿ, ಶಿಕ್ಷಣ ಎಂಬುದು ಸಮಾಜದ ಆತ್ಮ ಮತ್ತು ಆಸ್ತಿ. ಅರೆಬರೆ ತಿಳಿದ ವ್ಯಕ್ತಿಗಳು ಬೀಗುತ್ತಾರೆ. ಹೆಚ್ಚು ಜ್ಞಾನ ಮತ್ತು ತಿಳಿದವರು ಮಾತ್ರ ಏನೇನು ತಿಳಿದಿಲ್ಲ ಎಂಬ ವಿನಮ್ರ ಭಾವ ಹೊಂದಿರುತ್ತಾರೆ. ಕಾಲೇಜು ವಿದ್ಯಾರ್ಥಿಗಳ ಏಳಿಗೆಗೆ ಏಣಿ ಹಾಕಿದೆ. ಕ್ರಮವಾಗಿ ಹತ್ತುವ ಮೂಲಕ ವಿದ್ಯಾರ್ಥಿಗಳು ಜ್ಞಾನದ ಕುಶಲಿಗಳಾಗುವುದು ಅಗತ್ಯವಿದೆ. ಜೊತೆಗೆ ಅಧ್ಯಾಪಕರು ನೀಡುವ ಎಲ್ಲಾ ಜ್ಞಾನವನ್ನು ಗ್ರಹಿಸಿ, ಸಾಮಾಜಿಕ ಜವಾಬ್ದಾರಿಯನ್ನೂ ಗಮನದಲ್ಲಿಟ್ಟುಕೊಂಡು ನಿಮ್ಮ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕವನ್ನು ಕಂಡುಕೊಳ್ಳಿ ಎಂದರು.

ನಂತರ ಚಿಕ್ಕಬಳ್ಳಾಪುರದ ಬಿಜಿಎಸ್ ಇಂಗ್ಲಿಷ್ ಸ್ಕೂಲ್ ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಟಿ.ಎನ್.ಶ್ರೀನಿವಾಸ್, ಸಹ ಪ್ರಾಧ್ಯಾಪಕ ಎ.ಹೆಚ್.ಗೋಪಾಲ್, ಸಿ.ಎಲ್.ಶಿವಣ್ಣ, ಲೋಕೇಶ್, ಸೌಮ್ಯಾ, ಎ.ಸಿ.ದೇವಾನಂದ್, ಶೋಭಾ, ರವಿಕುಮಾರ್, ರಾಜಶೇಖರ್ ಮತ್ತು ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.