ಮಂಡ್ಯ: ‘8ನೇ ತರಗತಿವರೆಗಿನ ಮಕ್ಕಳಿಗಷ್ಟೇ ಮೊಟ್ಟೆ ವಿತರಿಸುತ್ತಿದ್ದುದರಿಂದ, ಅವರು ಇತರ ಮಕ್ಕಳೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದರು. ಆ ಮಾನವೀಯ ಗುಣ ಸರ್ಕಾರದ ಗಮನ ಸೆಳೆದ ಪರಿಣಾಮವಾಗಿಯೇ 9, 10ನೇ ತರಗತಿ ಮಕ್ಕಳಿಗೂ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಜ್ಯದಾದ್ಯಂತ 1ರಿಂದ 10ನೇ ತರಗತಿ ಸರ್ಕಾರಿ ಶಾಲೆ ಮಕ್ಕಳಿಗೆ ವಾರಕ್ಕೆರಡು ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ನಗರದ ಹೊಸಹಳ್ಳಿ ಸರ್ಕಾರಿ ಶಾಲೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘9, 10ನೇ ತರಗತಿಯವರಿಗೂ ಮೊಟ್ಟೆ ನೀಡಬೇಕೆಂಬ ಒತ್ತಾಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗಿತ್ತು. ಇನ್ನು ಮುಂದೆ ರಾಜ್ಯದ 58 ಲಕ್ಷ ಮಕ್ಕಳಿಗೆ ವಾರಕ್ಕೆ 1.16 ಕೋಟಿ ಮೊಟ್ಟೆ ವಿತರಿಸಲಾಗುತ್ತದೆ’ ಎಂದರು.
‘ವಾರಕ್ಕೆರಡು ಮೊಟ್ಟೆ ವಿತರಿಸುವ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿರಲಿಲ್ಲ. ಆದರೂ ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ, ಗ್ಯಾರಂಟಿ ಯೋಜನೆಗಳ ನಡುವೆಯೂ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಗೌರವವೂ ಹೆಚ್ಚಾಗಿದೆ’ ಎಂದರು.
ಮಕ್ಕಳೊಂದಿಗೆ ಊಟ: ಮಕ್ಕಳೊಂದಿಗೆ ಕುಳಿತ ಸಚಿವರು ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊಟ್ಟೆ ತಿನ್ನದ ಮಕ್ಕಳಿಗೆ ಶೇಂಗಾ ಚಿಕ್ಕಿ ಹಾಗೂ ಬಾಳೆಹಣ್ಣು ವಿತರಿಸಿದರು. ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸೇವಿಸಿದರು. ಊಟಕ್ಕೂ ಮೊದಲು ಮಕ್ಕಳೊಂದಿಗೆ ‘ಓಂ ಸಹನಾ ವವತು’ ಶಾಂತಿ ಮಂತ್ರ ಪಠಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.