ADVERTISEMENT

ಶ್ರೀರಂಗಪಟ್ಟಣ | ಈದ್‌ ಮಿಲಾದ್‌: ಪೈಗಂಬರ್ ಪಾದುಕೆಯ ಅಚ್ಚು, ಕೇಶ ದರ್ಶನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 14:16 IST
Last Updated 16 ಸೆಪ್ಟೆಂಬರ್ 2024, 14:16 IST
ಈದ್‌– ಮಿಲಾದ್‌ ನಿಮಿತ್ತ ಮುಸ್ಲಿಮರು ಸೋಮವಾರ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಸಂರಕ್ಷಿಸಿರುವ ಪ್ರವಾದಿ ಮಹಮದ್‌ ಪೈಗಂಬರ್‌ ಅವರ ಪಾದುಕೆಗಳ ಅಚ್ಚು ಮತ್ತು ಅವರ ಗಡ್ಡದ ಕೇಶದ ದರ್ಶನ ಪಡೆದರು
ಈದ್‌– ಮಿಲಾದ್‌ ನಿಮಿತ್ತ ಮುಸ್ಲಿಮರು ಸೋಮವಾರ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಸಂರಕ್ಷಿಸಿರುವ ಪ್ರವಾದಿ ಮಹಮದ್‌ ಪೈಗಂಬರ್‌ ಅವರ ಪಾದುಕೆಗಳ ಅಚ್ಚು ಮತ್ತು ಅವರ ಗಡ್ಡದ ಕೇಶದ ದರ್ಶನ ಪಡೆದರು   

ಶ್ರೀರಂಗಪಟ್ಟಣ: ಈದ್‌– ಮಿಲಾದ್‌ ನಿಮಿತ್ತ ಪಟ್ಟಣದ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಸೋಮವಾರ ಪ‍್ರವಾದಿ ಮಹಮದ್‌ ಪೈಗಂಬರರ ಪಾದುಕೆಯ ಅಚ್ಚು ಮತ್ತು ಅವರ ಗಡ್ಡದ ಕೇಶವನ್ನು ಮುಸ್ಲಿಮರು ಕಣ್ತುಂಬಿಕೊಂಡರು.

ಮಸೀದಿಯ ಮಹಡಿ ಮೇಲಿನ ಪ್ರಾರ್ಥನಾ ಸಭಾಂಗಣದ ಮುಂದೆ ಪಾದುಕೆಯ ಅಚ್ಚು ಮತ್ತು ಗಡ್ಡದ ಕೇಶ ಇರುವ ಪೆಟ್ಟಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಪಟ್ಟಣ ಮಾತ್ರವಲ್ಲದೆ ಮೈಸೂರು, ಮಂಡ್ಯ, ಬೆಂಗಳೂರು, ಪಾಂಡವಪುರ ಇತರ ಕಡೆಗಳಿಂದ ಬಂದವರು ಈ ಪವಿತ್ರ ವಸ್ತುಗಳ ದರ್ಶನ ಪಡೆದು, ಪುಷ್ಪ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ಪಾದುಕೆಯ ಅಚ್ಚು ಮತ್ತು ಕೇಶದ ಪೆಟ್ಟಿಗೆಯನ್ನು ಪನ್ನೀರಿನಿಂದ ತೊಳೆಯಲಾಯಿತು. ಭಕ್ತರು ಈ ಪೆಟ್ಟಿಗೆಗಳನ್ನು ತಲೆ ಮೇಲೆ ಹೊತ್ತು ಭಾವ ಪರವಶರಾದರು. ಜಾಮಿಯಾ ಮಸೀದಿಯ ಧರ್ಮಗುರು ಮುಫ್ತಿ ಸಜ್ಜಾದ್‌ ಹುಸೇನ್‌ ಅವರ ನೇತೃತ್ವದಲ್ಲಿ ಪ್ರಾರ್ಥನೆ ಮತ್ತು ಕುರಾನ್‌ ಗ್ರಂಥದ ವಾಕ್ಯಗಳ ವಾಚನ ನಡೆಯಿತು. ‘ಯಾ ನಬಿ ಸಲಾಂ ಅಲೇಕುಂ....’ ಎಂಬ ಶ್ಲೋಕವನ್ನು ಪಠಿಸಿದರು.

ADVERTISEMENT

ಬಳಿಕ ಪಾದುಕೆಯ ಅಚ್ಚು ಮತ್ತು ಕೇಶದ ಪೆಟ್ಟಿಗೆಯನ್ನು ತೊಳೆದ ಪನ್ನೀರನ್ನು ಪ್ರಸಾದ ರೂಪದಲ್ಲಿ ನೆರೆದಿದ್ದವರಿಗೆ ವಿತರಿಸಲಾಯಿತು. ಮಸೀದಿಯ ಆವರಣದಲ್ಲಿ ಪಾನಕ, ಖರ್ಜೂರ ಹಾಗೂ ಬಗೆ ಬಗೆಯ ಸಿಹಿ ವಿತರಣೆ ನಡೆಯಿತು.

ಐತಿಹ್ಯ: ‘ಜಾಮಿಯಾ ಮಸೀದಿಯಲ್ಲಿರುವ ಮಹಮದ್‌ ಪೈಗಂಬರ್‌ ಅವರ ಪಾದುಕೆಯ ಕಲ್ಲಿನ ಅಚ್ಚು ಮತ್ತು ಅವರ ಗಡ್ಡದ ಕೇಶವನ್ನು ಟರ್ಕಿಯ ಸುಲ್ತಾನ ಟಿಪ್ಪು ಸುಲ್ತಾನನಿಗೆ ನೀಡಿದ್ದ. ಟರ್ಕಿ ಮತ್ತು ಶ್ರೀರಂಗಪಟ್ಟಣದ ನಡುವೆ 18ನೇ ಶತಮಾನದಲ್ಲಿ ವಾಣಿಜ್ಯ ವ್ಯವಹಾರದ ವಿಷಯದಲ್ಲಿ ಉತ್ತಮ ಸಂಬಂಧವಿತ್ತು. ಈ ಸಂಬಂಧವು ಶಾಶ್ವತವಾಗಿ ಇರಲಿ ಎಂಬ ಉದ್ದೇಶದಿಂದ ಈ ಪವಿತ್ರ ವಸ್ತುಗಳನ್ನು ಟರ್ಕಿಯ ಸುಲ್ತಾನನು ಟಿಪ್ಪು ಸುಲ್ತಾನನಿಗೆ ನೀಡಿದ್ದನು. ಇವುಗಳನ್ನು ಜತನವಾಗಿ ಕಾಪಾಡಿಕೊಂಡು ಬರಲಾಗುತ್ತಿದೆ’ ಎಂದು ಮುಖಂಡ ಸಯ್ಯದ್‌ ಗುಲ್ಜಾರ್‌ ಪಾಷ ತಿಳಿಸಿದರು.

ಟಿಪ್ಪು ಸಮಾಧಿ ಸ್ಥಳ ಗುಂಬಸ್‌ನ ಧಾರ್ಮಿಕ ಮುಖಂಡ ಇನಾಯತ್–ಉರ್– ರೆಹಮಾನ್‌, ಟಿಪ್ಪು ವಕ್ಫ್‌ ಎಸ್ಟೇಟ್‌ ಕಾರ್ಯದರ್ಶಿ ಮಹಮದ್‌ ಇರ್ಫಾನ್‌, ಮುಖಂಡರಾದ ಎಕ್ಬಾಲ್‌ ಪಾಷ, ಉಮರ್, ಪುರಸಭೆ ಮಾಜಿ ಸದಸ್ಯ ಏಜಾಸ್‌ ಪಾಷ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.