ADVERTISEMENT

ಮಂಡ್ಯ | ದಶಕದಿಂದಲೂ ಹೆಣ್ಣು ಭ್ರೂಣಹತ್ಯೆ

3 ಖಾಸಗಿ ನರ್ಸಿಂಗ್‌ ಹೋಂಗಳಿಗೆ ಬೀಗ, ಮೆಡಿಕಲ್ಸ್‌ಗಳಲ್ಲಿ ಶಸ್ತ್ರಚಿಕಿತ್ಸೆ ಕಿಟ್‌ ಅಕ್ರಮ ಮಾರಾಟ

ಎಂ.ಎನ್.ಯೋಗೇಶ್‌
Published 28 ನವೆಂಬರ್ 2023, 23:17 IST
Last Updated 28 ನವೆಂಬರ್ 2023, 23:17 IST
ಭ್ರೂಣ ( ಸಾಂಕೇತಿಕ ಚಿತ್ರ)
ಭ್ರೂಣ ( ಸಾಂಕೇತಿಕ ಚಿತ್ರ)   

ಮಂಡ್ಯ: ಜಿಲ್ಲೆಯ ಆಲೆಮನೆಯೊಂದರಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿತ್ತು ಎಂಬ ಪ್ರಕರಣ ರಾಜ್ಯದ ಗಮನ ಸೆಳೆದಿದೆ. ಆದರೆ, ಸಕ್ಕರೆ ಜಿಲ್ಲೆಯಲ್ಲಿ ದಶಕಗಳಿಂದಲೂ ಭ್ರೂಣ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಸಾಮಾನ್ಯವಾಗಿದ್ದವು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ.

ನಗರದ ಮಿಮ್ಸ್‌ ಆಸ್ಪತ್ರೆಯ ಕೂಗಳತೆ ದೂರದಲ್ಲೇ ಇದ್ದ 3 ಖಾಸಗಿ ನರ್ಸಿಂಗ್‌ ಹೋಮ್‌ಗಳು ಹೆಣ್ಣು ಭ್ರೂಣ ಹತ್ಯೆ ಪ್ರಕರಣದಿಂದಲೇ ಬಾಗಿಲು ಮುಚ್ಚಿವೆ. ವಿವಿಧ ಮೆಡಿಕಲ್‌ ಸ್ಟೋರ್‌ಗಳಲ್ಲಿ ಭ್ರೂಣಹತ್ಯೆ ಶಸ್ತ್ರಚಿಕಿತ್ಸೆಗೆ (ಅಬಾರ್ಷನ್‌) ಅವಶ್ಯವಿರುವ ಔಷಧಿ ಕಿಟ್‌ ಜಿಲ್ಲೆಯಾದ್ಯಂತ ಮೆಡಿಕಲ್‌ ಸ್ಟೋರ್‌ಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದೆ ಎಂಬ ಮಾಹಿತಿಗಳೂ ಇವೆ.

ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಜಿಲ್ಲೆಯಲ್ಲಿ 2005ರಿಂದಲೂ ಬೆಳಕಿಗೆ ಬರುತ್ತಿವೆ. ಈ ಅನಿಷ್ಠದ ವಿರುದ್ಧ ವಿವಿಧ ಸಂಘಟನೆಗಳೂ ಹಲವು ಹೋರಾಟ ನಡೆಸಿವೆ. ಆದರೂ ದಂಧೆ ನಿಯಂತ್ರಣಕ್ಕೆ ಬಾರದಿರುವುದು ಆತಂಕ ಸೃಷ್ಟಿಸಿದೆ. ನಗರದ ಆಸ್ಪತ್ರೆ ರಸ್ತೆಯಲ್ಲಿದ್ದ ಜ್ಯೋತಿ ಆಸ್ಪತ್ರೆ, ಸ್ಪಂದನಾ ನರ್ಸಿಂಗ್‌ ಹೋಮ್‌ಗಳು ಹೆಣ್ಣು ಭ್ರೂಣ ಹತ್ಯೆ ಆರೋಪದ ಮೇಲೆಯೇ ಬಾಗಿಲು ಮುಚ್ಚಿವೆ.

ADVERTISEMENT

2021ರಲ್ಲಿ ವಿವೇಕಾನಂದ ರಸ್ತೆಯಲ್ಲಿದ್ದ ‘ನಮ್ಮ ಮನೆ’ ನರ್ಸಿಂಗ್‌ ಹೋಂ ಮೇಲೆ ಪೊಲೀಸರು ದಾಳಿ ನಡೆಸಿ ಶುಶ್ರೂಷಕಿಯೊಬ್ಬರನ್ನು ಬಂಧಿಸಿದ್ದರು. ಆಕೆ ಗ್ರಾಮೀಣ ಮಹಿಳೆಯರನ್ನು ನರ್ಸಿಂಗ್‌ ಹೋಂಗೆ ಕರೆತಂದು ಭ್ರೂಣಲಿಂಗ ಪರೀಕ್ಷೆ ಮಾಡಿಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಈ ಘಟನೆಯ ನಂತರ ‘ನಮ್ಮ ಮನೆ’ ನರ್ಸಿಂಗ್‌ ಹೋಂ ಕೂಡ ಸ್ಥಗಿತಗೊಂಡಿತ್ತು.

‘ಮಂಡ್ಯದ ಆಸ್ಪತ್ರೆ ರಸ್ತೆಯಲ್ಲಿ ಸಾಕಷ್ಟು ಸ್ಕ್ಯಾನಿಂಗ್‌ ಕೇಂದ್ರ, ಡಯಾಗ್ನೋಸ್ಟಿಕ್‌ ಕೇಂದ್ರಗಳಿವೆ. ಭ್ರೂಣ ಲಿಂಗ ಪರೀಕ್ಷೆ ನಡೆಯುತ್ತಿರುವ ಆರೋಪ ಸಮಗ್ರ ತನಿಖೆ ನಡೆಸಬೇಕು ಎಂದು ನಾವು ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಇಲ್ಲಿಯವರೆಗೂ ದಂಧೆ ನಿಲ್ಲಿಸಲು ಏಕೆ ಸಾಧ್ಯವಾಗಿಲ್ಲ, ದಂಧೆಯ ಹಿಂದೆ ಯಾರಿದ್ದಾರೆ’ ಎಂದು ಸಿಐಟಿಯು ಸಂಘಟನೆ ನಾಯಕಿ ಸಿ.ಕುಮಾರಿ ಪ್ರಶ್ನಿಸಿದರು.

ಔಷಧಿ ಕಿಟ್‌ ಮಾರಾಟ: ಮೆಡಿಕಲ್‌ ಸ್ಟೋರ್‌ ಮಾಲೀಕರೂ ಆಗಿರುವ ಶ್ರೀರಂಗಪಟ್ಟಣ ಪುರಸಭೆ ಸದಸ್ಯರೊಬ್ಬರು ಸಾಮಾನ್ಯ ಸಭೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಗಮನ ಸೆಳೆದಿದ್ದರು. ಭ್ರೂಣಹತ್ಯೆ ಶಸ್ತ್ರಚಿಕಿತ್ಸೆಗೆ ಅವಶ್ಯವಿರುವ ಔಷಧಿಗಳ ಕಿಟ್‌ ಕೊಡುವಂತೆ ಕೇಳಿಕೊಂಡು ಅಪಾರ ಸಂಖ್ಯೆಯ ಜನ ಅಂಗಡಿಗೆ ಬರುತ್ತಾರೆ.

‘ವೈದ್ಯರ ಸೂಚನೆ (ಪ್ರಿಸ್ಕ್ರಿಪ್ಷನ್‌) ಇಲ್ಲದೆ ಶಸ್ತ್ರಚಿಕಿತ್ಸೆ ಕಿಟ್‌ ಮಾರಾಟ ಮಾಡುವಂತಿಲ್ಲ. ಜಿಲ್ಲೆಯ ಹಲವು ಔಷಧಿ ಅಂಗಡಿಗಳಲ್ಲಿ ಅಕ್ರಮವಾಗಿ ಕಿಟ್‌ ಮಾರಾಟವಾಗುತ್ತಿರುವ ಮಾಹಿತಿ ಇದ್ದು, ಈ ಬಗ್ಗೆ  ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ. ಪುರಸಭೆ ಸದಸ್ಯರು ಸಂಪರ್ಕಕ್ಕೆ ಸಿಗಲಿಲ್ಲ.

ಮಳವಳ್ಳಿಯಲ್ಲೂ ದಂಧೆ?: ‘ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿರುವ ಆರೋಪಿ ಶಿವಲಿಂಗೇಗೌಡ ಮಳವಳ್ಳಿ ತಾಲ್ಲೂಕು ಕಾಗೇಪುರದ ನಿವಾಸಿ. ಆತ ಮಳವಳ್ಳಿ ಪಟ್ಟಣದ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ಆಸ್ಪತ್ರೆಯಲ್ಲೇ ಬಂಧಿಸಲಾಗಿದ್ದು ವಿಚಾರಣೆಗೆ ಒಳಪಡಿಸಲಾಗಿದೆ. ಮಳವಳ್ಳಿಯಲ್ಲೂ ಭ್ರೂಣಪತ್ತೆ ಪರೀಕ್ಷೆ ನಡೆದಿರುವ ಸಾಧ್ಯತೆ ಇದೆ’ ಎಂದು ಲೋಕಾಯುಕ್ತ ಪೊಲೀಸರೊಬ್ಬರು ತಿಳಿಸಿದರು.

‘ಪೊಲೀಸರು ನಡೆಸುತ್ತಿರುವ ತನಿಖೆಗೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ಹೇಳಿದರು.

ಪ್ರಕರಣ ಸಿಐಡಿ ತನಿಖೆಗೆ?

‘ಭ್ರೂಣ ಲಿಂಗ ಪರೀಕ್ಷೆ, ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪತ್ತೆಯಾಗಿರುವ ಕಾರಣ ಯಾವುದೇ ಒಂದು ಜಿಲ್ಲೆಯ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಇಡೀ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ಗಂಡು ಸಂತಾನಕ್ಕಾಗಿ ಹೆಣ್ಣುಭ್ರೂಣ ಹತ್ಯೆ

‘ಗಂಡು ಮಗು ಇಲ್ಲವೆಂದರೆ ವಾರಸುದಾರರು ಯಾರೂ ಇರುವುದಿಲ್ಲ, ತಂದೆ– ತಾಯಿ ಸತ್ತರೆ ಕೊಳ್ಳಿ ಇಡುವವರು ಯಾರೂ ಇಲ್ಲ, ಮುಕ್ತಿ ಸಿಗಬೇಕೆಂದರೆ ಗಂಡು ಸಂತಾನ ಇರಲೇಬೇಕು ಎಂಬ ಮೂಢನಂಬಿಕೆ ವ್ಯಾಪಕವಾಗಿದೆ. ಇದೇ ಕಾರಣಕ್ಕೆ ಲಿಂಗ ಪರೀಕ್ಷೆ ಮಾಡಿಸಿ ಹೆಣ್ಣು ಭ್ರೂಣವನ್ನು ಕಿತ್ತು ಹಾಕಲಾಗುತ್ತಿದೆ. ಸರ್ಕಾರ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದೇವಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.