ADVERTISEMENT

₹3.5 ಲಕ್ಷ ಕೋಟಿ ಮೊತ್ತದ ನೀರಾವರಿ ಯೋಜನೆಗಳಿಗೆ ಒತ್ತು: ಶಾಸಕ ಸುರೇಶ್‍ಗೌಡ

ಜೆಡಿಎಸ್‌ ಅಧಿಕಾರಕ್ಕೆ ತಂದರೆ ನೀರಾವರಿ ಯೋಜನೆ ಜಾರಿಗೆ: ಶಾಸಕ ಸುರೇಶ್‍ಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 16:23 IST
Last Updated 19 ಏಪ್ರಿಲ್ 2022, 16:23 IST
ನಾಗಮಂಗಲ ತಾಲ್ಲೂಕಿನ ಬೋಗಾದಿ ಗ್ರಾಮದಲ್ಲಿ ಜನತಾ ಜಲಧಾರೆ ರಥಕ್ಕೆ ಶಾಸಕ ಸುರೇಶ್ ಗೌಡ ಪೂಜೆ ಸಲ್ಲಿಸಿ ಚಾಲನೆ ನೀಡಿದರು
ನಾಗಮಂಗಲ ತಾಲ್ಲೂಕಿನ ಬೋಗಾದಿ ಗ್ರಾಮದಲ್ಲಿ ಜನತಾ ಜಲಧಾರೆ ರಥಕ್ಕೆ ಶಾಸಕ ಸುರೇಶ್ ಗೌಡ ಪೂಜೆ ಸಲ್ಲಿಸಿ ಚಾಲನೆ ನೀಡಿದರು   

ನಾಗಮಂಗಲ: ‘ಜೆಡಿಎಸ್‌ ಅಧಿಕಾರಕ್ಕೆ ಬಂದರೆ ₹3.5 ಲಕ್ಷ ಕೋಟಿ ಮೊತ್ತದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು’ ಎಂದು ಶಾಸಕ ಸುರೇಶ್‍ಗೌಡ ಹೇಳಿದರು.

ತಾಲ್ಲೂಕಿನ ಬೋಗಾದಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜನತಾ ಜಲಧಾರೆ ರಥ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದರು.

‘ರಾಜ್ಯದಲ್ಲಿ ಸಿಗುವ ಜಲಸಂಪನ್ಮೂಲ ವನ್ನು ರೈತರ ಜಮೀನಿಗೆ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜೆಡಿಎಸ್‌ ಪಕ್ಷ ಕೈಗೊಂಡಿದೆ’ ಎಂದರು.

ADVERTISEMENT

‘ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡುವ ವಿಚಾರಕ್ಕೆ ಕಾಂಗ್ರೆಸ್‌ನವರೇ ಅಡ್ಡಿಪಡಿಸಿದ್ದರು. ಆದರೆ, ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಾಲ ಮನ್ನಾ ಮಾಡಿ ದಿಟ್ಟ ನಿರ್ಧಾರ ಕೈಗೊಂಡಿದ್ದರು. ತಾಲ್ಲೂಕಿನಲ್ಲೇ 40 ಸಾವಿರ ಕುಟುಂಬಗಳ ಸಾಲ ಮನ್ನಾ ಆಗಿದೆ. ಆದ್ದರಿಂದ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಕುಮಾರಸ್ವಾಮಿ ಅವರನ್ನು ಎಲ್ಲರೂ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಗೂಡೆ ಹೊಸಹಳ್ಳಿಯಿಂದ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಹರಿಸುವ ಯೋಜನೆಯು ಈಗಾಗಲೇ ಚಾಲ್ತಿಯಲ್ಲಿದೆ. ಕೆ.ಆರ್.ಎಸ್‌.ನಿಂದ ತಾಲ್ಲೂಕಿನ ಪ್ರತಿ ಮನೆಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜಲಧಾರೆ ಯೋಜನೆಯು ಜನಪರ ಯೋಜನೆ ಆಗಿರುವುದರಿಂದ ನೀವೆಲ್ಲರೂ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಬೇಕು. ಮುಂದಿನ ಚುನಾವಣೆ ಯಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ಆಶೀರ್ವದಿಸಬೇಕು’ ಎಂದರು.

ರಥ ಸಂಚರಿಸಿದ ಗ್ರಾಮಗಳಲ್ಲಿ ಹೆಣ್ಣು ಮಕ್ಕಳು ಸಮೀಪದ ಕೆರೆಗಳಿಂದ ಕಳಸದಲ್ಲಿ ಹೊತ್ತು ತಂದ ಜಲವನ್ನು ಪೂಜೆ ಸಲ್ಲಿಸಿದ ನಂತರ ಜಲಧಾರೆ ರಥದ ಕಳಸದಲ್ಲಿ ಸಂಗ್ರಹಿಸಲಾಯಿತು.

ಜನತಾ ಜಲಧಾರೆ ರಥಯಾತ್ರೆ ಸಂಚಾರದ ವೇಳೆ ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತ, ಪಟದ ಕುಣಿತ, ತಮಟೆ, ಡೋಲು ವಾದ್ಯಗಳು ಜನರ ಗಮನ ಸೆಳೆದವು.

ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸಯ್ಯ, ಮುಖಂಡರಾದ ರಾಮು, ಸುರೇಶ, ಚೇತನ್ ಕುಮಾರ್, ಅಭಿಷೇಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.