ADVERTISEMENT

ಮೇಲುಕೋಟೆ: ಹೆಸರಿಗಷ್ಟೇ ತೋಳಗಳ ಸಂರಕ್ಷಣಾ ವಲಯ!

‘ಸೈಕಾಸ್ ಅಭಯಾರಣ್ಯ’ ಎಂದು ಘೋಷಿಸಲು ಪರಿಸರ ಪ್ರೇಮಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 6:41 IST
Last Updated 18 ಜುಲೈ 2024, 6:41 IST
ಸೈಕಾಸ್‌ ಸಸ್ಯ 
ಸೈಕಾಸ್‌ ಸಸ್ಯ    

ಮೇಲುಕೋಟೆ: ಹೆಸರಿಗೆ ಅದು ತೋಳಗಳ ಸಂರಕ್ಷಣೆ ಅಭಯಾರಣ್ಯ. ಆದರೆ ಇಪ್ಪತೈದು ವರ್ಷಗಳಿಂದ ಅಲ್ಲಿ ಒಂದೇ ಒಂದು ತೋಳವೂ ಇಲ್ಲ.

ಹೌದು, ಇಂಥದೊಂದು ಅಪರೂಪದ ಅಭಯಾರಣ್ಯ ಇರುವುದು ಪುರಾಣ ಪ್ರಸಿದ್ಧ ಮೇಲುಕೋಟೆಯಲ್ಲಿ ಎನ್ನುವುದು ಸೋಜಿಗ. ಮೇಲುಕೋಟೆಯಲ್ಲಿ ನಾರಾಯಣದುರ್ಗ ರಾಜ್ಯ ಅರಣ್ಯ ಮತ್ತು  ಮೂಡಿಬೆಟ್ಟ ರಾಜ್ಯ ಅರಣ್ಯ ಎಂಬ ಎರಡು ಮೀಸಲು ಅರಣ್ಯ ಇವೆ. ಆದರೆ ಇಲ್ಲಿ ತೋಳಗಳನ್ನು ಸಂರಕ್ಷಿಸಲು ಅಭಯಾರಣ್ಯವನ್ನು ಘೋಷಣೆ ಮಾಡಲಾಗಿದೆ.

1974 ಜೂನ್ 17ರಂದು ಕರ್ನಾಟಕ ಸರ್ಕಾರದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರು 6857.37 ಹೆಕ್ಟೇರ್ ವಿಸ್ತೀರ್ಣದ ಪ್ರದೇಶವನ್ನು ಅಭಯಾರಣ್ಯ ಎಂದು ಘೋಷಣೆ ಮಾಡಿದರು. ಈ ಅಭಯಾರಣ್ಯದ ಅಂತಿಮ ಅಧಿಸೂಚನೆಯನ್ನು 1998ರಂದು ತೋಳಗಳ ಸಂರಕ್ಷಣಾ ಅಭಯಾರಣ್ಯವೆಂದು ಘೋಷಿಸಲಾಯಿತು.

ADVERTISEMENT

ತೋಳ ಸಂತತಿ ನಾಶ:

‘ಅದಕ್ಕೆ ಕಾರಣ ಆಗ ಅಲ್ಲಿ ಇದ್ದುದ್ದು ಕುರುಚಲು ಅರಣ್ಯ. ವಿಶೇಷವೆಂದರೆ ಇದು ದೇಶದಲ್ಲೇ ಮೊದಲ ತೋಳಗಳ ಸಂರಕ್ಷಣಾ ಅರಣ್ಯ ಪ್ರದೇಶ. ಅಲ್ಲಿ ವಿಶೇಷವಾದ ತೋಳಗಳ ಸಂತತಿ ನೆಲೆಸಿತ್ತು. ಈ ಅಪರೂಪದ ಪ್ರಾಣಿ ಸಂತತಿಯು ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರದಿಂದ  ಸಂಪೂರ್ಣ ನಾಶವಾಗಿಬಿಟ್ಟಿದೆ. ಏಕೆಂದರೆ ಇಲ್ಲಿದ್ದ ಕುರುಚಲು ಅರಣ್ಯ ಪ್ರದೇಶದಲ್ಲಿ ನೀಲಗಿರಿ ಸಸಿಗಳನ್ನು ನೆಟ್ಟು ಕುರುಚಲು ಅರಣ್ಯವನ್ನು ನೀಲಗಿರಿ ಕಾಡಾಗಿ ಪರಿವರ್ತಿಸಿದ ಪರಿಣಾಮ ಕುರುಚಲು ನಾಶವಾಗಿ ತೋಳಗಳಿಗೆ ಬೇಕಾದ ಆಹಾರ ನಾಶವಾಯಿತು’ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ. 

ತೋಳಗಳ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣ ಕಣ್ಮರೆಯಾಯಿತು. ಗುಡ್ಡಗಾಡು ಪ್ರದೇಶದಲ್ಲಿ ನೀಲಗಿರಿ ಮರಗಳು ವ್ಯಾಪಕವಾಗಿ ಬೆಳೆಯಿತು. ಕಾಲಕ್ರಮೇಣ ತೋಳಗಳು ಆಹಾರ ಅರಸಿ ಅಲ್ಲಿಂದ ಕಾಲ್ಕಿತ್ತವು ಎನ್ನಲಾಗಿದೆ. 

ಒಂದೇ ಒಂದು ತೋಳಗಳು ಇಲ್ಲದ ಅರಣ್ಯ ಪ್ರದೇಶಕ್ಕೆ ‘ತೋಳಗಳ ಸಂರಕ್ಷಣಾ ವಲಯ’ ಎಂದು ಹೆಸರು ಇರುವುದು ಅಪಹಾಸ್ಯಕ್ಕೆ ಕಾರಣವಾಗಿದೆ. ಕಳೆದ ಇಪತ್ತೈದು ವರ್ಷಗಳಿಂದ ಅರಣ್ಯ ಇಲಾಖೆ ನಡೆಸಿದ ವನ್ಯಜೀವಿ ಗಣತಿಯಲ್ಲಿ ಒಂದೇ ಒಂದು ತೋಳಗಳು ಪತ್ತೆಯಾಗಿಲ್ಲ. ಇದೀಗ 2021-22ರಲ್ಲಿ ನಡೆಸಿದ ವನ್ಯಜೀವಿಗಳ ಗಣತಿಯಲ್ಲೂ ಕಣ್ಣಿಗೆ ಬಿದ್ದಿಲ್ಲ.

ವಿಶೇಷ ಅನುದಾನ ನೀಡಲಿ:

‘ಈ ಸಂಬಂಧ ಅರಣ್ಯ ಸಚಿವ  ಹಾಗೂ ಮುಖ್ಯಮಂತ್ರಿಯವರು ಮೇಲುಕೋಟೆ ವನ್ಯಜೀವಿಧಾಮದ ಹೆಸರು ಬದಲಾಯಿಸಿ ಮರುನಾಮಕರಣ ಮಾಡಬೇಕು. ಮೇಲುಕೋಟೆ ಒಂದು ಧಾರ್ಮಿಕ ಕ್ಷೇತ್ರವಾಗಿದೆ. ಸುತ್ತಲೂ ದಟ್ಟವಾದ ನೀಲಗಿರಿ ಮರಗಳಿಂದ ಕೂಡಿದ ಅರಣ್ಯಕ್ಕೆ ವಿಶೇಷ ಅನುದಾನ ನೀಡಿ ಮತ್ತಷ್ಟು ವನ್ಯಜೀವಿಗಳ ರಕ್ಷಣೆ ವಿಶೇಷ ಯೋಜ‌ನೆ ಜಾರಿಗೆ ತರಬೇಕು’ ಎಂದು ಪರಿಸರ ಪ್ರೇಮಿ ಸುಮನ್ಸ್ ಕೌಲಗಿ ಒತ್ತಾಯಿಸಿದ್ದಾರೆ.

ಈ ವನ್ಯಜೀವಿ ಧಾಮದಲ್ಲಿ ಪ್ರಸುತ್ತ ಕೃಷ್ಣಮೃಗ, ಹೆಬ್ಬಾವು, ನವಿಲು, ನಾಗರಹಾವು, ಚಿರತೆ, ಜಿಂಕೆ, ಕರಡಿ, ಚಿಪ್ಪುಹಂದಿ ಹಳದಿ ಕತ್ತಿನ ಪಿಕಳಾರ, ಹಳದಿ ಪಾದದ ಹಸಿರು ಪಾರಿವಾಳ, ಕೆಂಪು ಚಿಟ್ಟು ಕೋಳಿ‌ ಪ್ರಾಣಿಗಳ ಸಂತತಿ ಹೆಚ್ಚಾಗಿದ್ದು ಪೂರಕವಾದ ಅನುದಾನ ಬಿಡುಗಡೆ ಅರಣ್ಯವನ್ನು ರಕ್ಷಣೆ ಮಾಡಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.

ಮೇಲುಕೋಟೆ ವನ್ಯಜೀವಿಗಳ ಅಭಯಾರಣ್ಯದ ದೃಶ್ಯ
ಮೇಲುಕೋಟೆ ಅರಣ್ಯದಲ್ಲಿ ತೋಳಗಳಿಗೆ ಬೇಕಾದ ವಾತಾವರಣ ಇಲ್ಲದ ಕಾರಣ ತೋಳ ಸಂತತಿ ಕಣ್ಮರೆಯಾಗಿದೆ. ಧಾಮದ ಹೆಸರು ಬದಲಾವಣೆಯ ನಿರ್ಧಾರ ಸರ್ಕಾರದ ಮಟ್ಟದಲ್ಲೇ ನಡೆಯಬೇಕು
– ಜಗದೀಶ್ ವಲಯ ಅರಣ್ಯಾಧಿಕಾರಿ ಮೇಲುಕೋಟೆ
‘ಸೈಕಾಸ್’ ಸಸ್ಯಗಳ ತಾಣ
ಮೇಲುಕೋಟೆ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣ‌ವು ಇಡೀ ವಿಶ್ವದಲ್ಲೇ ಅತಿಹೆಚ್ಚು ಬೇಡಿಕೆ ಇರೋ ‘ಸೈಕಾಸ್’ ಸಸ್ಯದ ತಾಣವಾಗಿದೆ. ಡೈನೋಸಾರ್ ಪ್ರಾಣಿ ಜೀವಿಸಿದ್ದ ಕಾಲದಿಂದಲೂ ಇದ್ದ ಪ್ರಾಚೀನಕಾಲದ ಸಸ್ಯವಾಗಿದ್ದು ಸಾವಿರಾರು ವರ್ಷಗಳವರೆಗೂ ಜೀವಿಸುವ ಏಕೈಕ ಸಸ್ಯವಾಗಿದೆ.  ಈ ಅಪರೂಪದ ಸಸ್ಯದಿಂದಾಗಿ  ಬಹುದೊಡ್ಡ ಕಾಯಿಲೆಗಳಿಗೂ ಔಷಧಿ ಸಿಗುತ್ತದೆ ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ. ಆದ್ದರಿಂದ ವರ್ಷಕೊಮ್ಮೆ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಈ ಅರಣ್ಯಕ್ಕೆ ಆಗಮಿಸಿ ಮೂರು ನಾಲ್ಕು ದಿನ ಅರಣ್ಯದಲ್ಲಿ ಸಂಶೋಧನೆ ಮಾಡುತ್ತಾರೆ. ಮೂಲಗಳ ಪ್ರಕಾರ ಇಡೀ ರಾಜ್ಯದಲ್ಲೇ ಅತಿಹೆಚ್ಚು ಸೈಕಾಸ್ ಸಸ್ಯ ಬೆಳೆಯುವುದು ಮೇಲುಕೋಟೆ ಅರಣ್ಯದಲ್ಲಿ ಮಾತ್ರ. ಸೈಕಾಸ್ ಸಸ್ಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಜತೆಗೆ ಸೈಕಾಸ್ ಅಭಯಾರಣ್ಯವೆಂದೇ ಘೋಷಣೆ ಮಾಡಬೇಕು ಎಂದು ಪರಿಸರ ಪ್ರೇಮಿಗಳಾದ ಹರವು ದೇಗೌಡ ರಾಮಾನುಜ ಪಾರ್ಥ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.