ADVERTISEMENT

ಮಂಡ್ಯದಲ್ಲಿ ರಸ್ತೆಗುಂಡಿಗೆ ನಿವೃತ್ತ ಯೋಧ ಬಲಿ: ಆಕ್ರೋಶ

ಬಗೆಹರಿಯದ ರಸ್ತೆ ವಿವಾದ; ನಿತ್ಯವೂ ಅಪಘಾತ, ಸಾಧಕನ ಸಾವಿಗೆ ಹೊಣೆ ಯಾರು?

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 14:37 IST
Last Updated 13 ನವೆಂಬರ್ 2022, 14:37 IST
ಎಸ್‌.ಎನ್‌.ಕುಮಾರ್
ಎಸ್‌.ಎನ್‌.ಕುಮಾರ್   

ಮಂಡ್ಯ: ಕಾರೆಮನೆ ಗೇಟ್‌ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ನಿವೃತ್ತ ಯೋಧರೊಬ್ಬರ ಮೇಲೆ ಲಾರಿ ಹರಿದಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಎಸ್‌.ಎನ್‌.ಕುಮಾರ್‌ (39) ಮೃತಪಟ್ಟಿವರು. ನಿವೃತ್ತಿಯ ನಂತರ ಅವರು ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ಆಯ್ಕೆಯಾಗಿದ್ದು ಬೆಂಗಳೂರಿನಲ್ಲಿ 6 ತಿಂಗಳಿಂದ ತರಬೇತಿ ಪಡೆಯುತ್ತಿದ್ದರು. ಗ್ರಾಮಕ್ಕೆ ಬಂದಿದ್ದ ಅವರು ತಂದೆಯೊಂದಿಗೆ ಬೈಕ್‌ನಲ್ಲಿ ಮಂಡ್ಯದಿಂದ ಗ್ರಾಮಕ್ಕೆ ತೆರಳುತ್ತಿದ್ದರು.

ರಸ್ತೆಯಲ್ಲಿದ್ದ ಬೃಹತ್‌ ಗುಂಡಿಗಳನ್ನು ತಪ್ಪಿಸಲು ಹೋದ ಕುಮಾರ್‌ ಎಡಕ್ಕೆ ಬೈಕ್‌ ತಿರುಗಿಸಿದ್ದಾರೆ. ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿ ಅವರು ಕೆಳಕ್ಕೆ ಬಿದ್ದಿದ್ದಾರೆ. ಹಿಂದಿನಿಂದ ಕಾಯಿಮೊಟ್ಟೆ ತುಂಬಿಕೊಂಡು ಬರುತ್ತಿದ್ದ ಲಾರಿ ಅವರ ತಲೆಯ ಮೇಲೆ ಹರಿದಿದೆ. ಅವರು ಹೆಲ್ಮೆಟ್‌ ಧರಿಸಿದ್ದರೂ ಅದು ಛಿದ್ರಗೊಂಡು ಮಿದುಳು ಹೊರಕ್ಕೆ ಬಂದಿದೆ. ತೀವ್ರ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತಂದೆ ಗಾಯಗೊಂಡಿದ್ದಾರೆ.

ADVERTISEMENT

ಕಡೆಗೂ ಬಲಿ: ಕಾರೆಮನೆ ಗೇಟ್‌ ಬಳಿ ರಸ್ತೆಯು ಕೆರೆಯಂತಾಗಿದ್ದು ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿವೆ. ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿ ಮಾಡದ ಕಾರಣ ಅಲ್ಲಿ ನಿತ್ಯವೂ ಸಣ್ಣಪುಟ್ಟ ಅಪಘಾತಗಳು ನಡೆದು ಜನರು ಗಾಯಗೊಳ್ಳುವುದು ಸಾಮಾನ್ಯವಾಗಿತ್ತು. ಕಡೆಗೂ ವ್ಯಕ್ತಿಯೊಬ್ಬರು ರಸ್ತೆ ಗುಂಡಿಗೆ ಬಲಿಯಾಗಿದ್ದು ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಜಮೀನು ಭೂಸ್ವಾಧೀನ ಹಾಗೂ ಪರಿಹಾರ ವಿತರಣೆ ವಿಚಾರದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಜಮೀನಿನ ಮಾಲೀಕನ ನಡುವೆ ವ್ಯಾಜ್ಯವಿದ್ದು ಸಮಸ್ಯೆ ಬಗೆಹರಿದಿಲ್ಲ. ವಿವಾದಿತ ಐದಾರು ಮೀಟರ್‌ನಷ್ಟು ರಸ್ತೆಗೆ ಡಾಂಬರ್‌ ಹಾಕಿಲ್ಲ, ಕನಿಷ್ಠ ಮಣ್ಣನ್ನೂ ಹಾಕಿಲ್ಲ. ಹೀಗಾಗಿ ಅಲ್ಲಿ ಕಂದಕಗಳು ನಿರ್ಮಾಣವಾಗಿದ್ದು ವಾಹನ ಸವಾರರು ಗಾಯಗೊಳ್ಳುತ್ತಿದ್ದಾರೆ.

‘ಲೋಕೋಪಯೋಗಿ ಇಲಾಖೆ ಅಧಿಕಾರಿಗಳು 4 ವರ್ಷಗಳಿಂದ ಸಮಸ್ಯೆ ಬಗೆಹರಿಸಿ ರಸ್ತೆ ದುರಸ್ತಿ ಮಾಡಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕೋರ್ಟ್‌ ವಿವಾದ ಏನಾದರೂ ಇರಲಿ, ಕಾಲಕಾಲಕ್ಕೆ ರಸ್ತೆ ಗುಂಡಿ ಮುಚ್ಚಿದ್ದರೆ ಈ ಅಪಘಾತ ಆಗುತ್ತಿರಲಿಲ್ಲ. ಭಾನುವಾರ ನಡೆದ ಘಟನೆ ಕೊಲೆಯಾಗಿದ್ದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದರು.

ನಿವೃತ್ತ ಯೋಧ ಕುಮಾರ್‌ ಅವರು ಸಬ್‌ ಇನ್‌ಸ್ಪೆಕ್ಟರ್‌ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ದರು. ಪರೀಕ್ಷೆ ವಿವಾದವಾಗಿದ್ದ ಕಾರಣ ಮತ್ತೆ ಅವರು ಕಾನ್‌ಸ್ಟೆಬಲ್‌ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಿ, ಆಯ್ಕೆಯಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

***

ಮೆರವಣಿಗೆಯಲ್ಲಿ ಬಂದಿದ್ದ ಯೋಧ

‘ಭಾರತೀರ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿ ಗ್ರಾಮಕ್ಕೆ ಬಂದ ದಿನ ಅವರನ್ನು ಮಂಡ್ಯದಿಂದ ಸಾತನೂರು ಗ್ರಾಮದವರೆಗೆ ಮೆರೆವಣಿಗೆ ಮೂಲಕ ಕರೆತಂದಿದ್ದೆವು. ಸೇನೆಯಲ್ಲಿ ಇದ್ದಾಗ ಹಲವು ಸಂಕಷ್ಟ ಸ್ಥಿತಿ ಎದುರಿಸಿದ ಸಂದರ್ಭಗಳನ್ನು ಅವರು ಹೇಳುತ್ತಿದ್ದರು. ಅಂತಹ ಸಂಕಷ್ಟ ದಾಟಿ ಬಂದವರು ಈಗ ರಸ್ತೆಗುಂಡಿಗೆ ಬಲಿಯಾದದ್ದು ಅತ್ಯಂತ ನೋವಿನ ಸಂಗತಿ’ ಎಂದು ಸಾತನೂರು ಗ್ರಾಮಸ್ಥರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.