ADVERTISEMENT

ಮಂಡ್ಯ | ಬರಗಾಲದ ಬಜೆಟ್‌ ಮೇಲೆ ಅಪಾರ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 23:30 IST
Last Updated 11 ಫೆಬ್ರುವರಿ 2024, 23:30 IST
ಮಂಡ್ಯದಲ್ಲಿರುವ ಮೈಷುಗರ್‌ ಕಾರ್ಖಾನೆ
ಮಂಡ್ಯದಲ್ಲಿರುವ ಮೈಷುಗರ್‌ ಕಾರ್ಖಾನೆ   

ಮಂಡ್ಯ: ಬರಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ ಮೇಲೆ ಜಿಲ್ಲೆಯ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದಶಕದಿಂದಲೂ ಈಡೇರದ ಭರವಸೆಗಳು ಈಗಲಾದರೂ ಸಾಕಾರಗೊಳ್ಳುವವೇ ಎಂಬ ಕಾತರ ಹೆಚ್ಚಾಗಿದೆ.

ನಾಲೆಗಳ ಆಧುನೀಕರಣ, ಕೆರೆ ತುಂಬಿಸುವ ಯೋಜನೆ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಕಳೆದ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ಯೋಜನೆಗಳು ಕೇವಲ ಕಡತದಲ್ಲಿವೆ. ಹೊಸ ಮೈಷುಗರ್‌ ಕಾರ್ಖಾನೆ, ಹೊಸ ಉದ್ಯಮ ಸ್ಥಾಪನೆ, ಕುಡಿಯುವ ನೀರಿನ ಯೋಜನೆ, ನಗರದ ಸುತ್ತಲೂ ರಿಂಗ್‌ ರಸ್ತೆ, ನಗರಸಭೆಗೆ ಪಾಲಿಕೆ ರೂಪ ಇವೆಲ್ಲವೂ ಜನರ ಬೇಡಿಕೆಗಳಾಗಿಯೇ ಉಳಿದಿವೆ.

ಮೈಷುಗರ್‌ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ₹ 50 ಕೋಟಿ ಅನುದಾನ ನೀಡಿದೆ. ಆದರೆ ಕಾರ್ಖಾನೆಯ ಯಂತ್ರೋಪಕರಣಗಳು ಹಳೆಯದಾಗಿದ್ದು ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಅರೆಯಲು ಸಾಧ್ಯವಾಗುತ್ತಿಲ್ಲ, ಗುಣಮಟ್ಟದ ಸಕ್ಕರೆ ತಯಾರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹೊಸ ಕಾರ್ಖಾನೆ ರೂಪಿಸಲು ಅನುದಾನ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಈ ಭಾಗದ ರೈತರು ಹಾಗೂ ಮುಖಂಡರಲ್ಲಿದೆ.

ADVERTISEMENT

ಜಿಲ್ಲೆಯ ನಾಲೆಗಳು ಆಧುನೀಕರಣಗೊಳ್ಳದ ಕಾರಣ ಮಳವಳ್ಳಿ, ಮದ್ದೂರು ತಾಲ್ಲೂಕಿನ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಟೈಲ್‌ ಎಂಡ್‌ ಸಮಸ್ಯೆ ದಶಕದಿಂದ ಇದ್ದು ರೈತರು ನೀರು ಪಡೆಯಲು ಪರದಾಡುತ್ತಿದ್ದಾರೆ. 2 ಬೆಳೆ ಬೆಳೆದುಕೊಳ್ಳಲು ಸಾಕಷ್ಟು ಅವಕಾಶಗಳಿದ್ದರೂ ರೈತರು ಒಂದೇ ಬೆಳೆ ಬೆಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿಯ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತ ಮತ್ತು ಚಾಮರಾಜನಗರ ಜಿಲ್ಲೆಯ ಭರಚುಕ್ಕಿ ಜಲಪಾತಗಳ ನಡುವೆ ರೋಪ್ ವೇ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದೆ. ಹತ್ತು ವರ್ಷಗಳ ಹಿಂದೆಯೇ ರೋಪ್ ವೇ ಗೆ ಯೋಜನೆ ಸಿದ್ಧಪಡಿಸಿದ್ದರೂ ಕಾರ್ಯರೂಪಕ್ಕೆ ಬರಲಿಲ್ಲ. ಗಗನಚುಕ್ಕಿ ಜಲಪಾತದ ಬಳಿ ದೇಶವಿದೇಶಗಳಿಂದ ಬರುವ ಪ್ರವಾಸಿಗರಿಗೆ ಮೂಲ ಸೌಲಭ್ಯಗಳೂ ಇಲ್ಲದ ಪರಿಣಾಮ ಪರದಾಡುವ ಪರಿಸ್ಥಿತಿ ಇದೆ.

ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ದಿಯಾಗಬೇಕು. ಪಟ್ಟಣ ಮತ್ತು ಆಸುಪಾಸಿನ ಪ್ರವಾಸಿ ತಾಣಗಳಿಗೆ ಮೂಲ ಸೌಕರ್ಯ ಕಲ್ಪಿಸಿ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯಲು ವಿಶೇಷ ಯೋಜನೆ ರೂಪಿಸಬೇಕು. ಗ್ರಾಮೀಣ ಪ್ರದೇಶಗಳಿಗೆ ಶಾಶ್ವತ ಕುಡಿಯುವ‌‌ ನೀರಿನ ಯೋಜನೆ ಜಾರಿಗೆ ತರಬೇಕು. ಹೆದ್ದಾರಿಯಲ್ಲಿ ಅಪಘಾತ, ವಾಹನ ದಟ್ಟಣೆ ಹೆಚ್ಚುತ್ತಿದ್ದು, ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಬೇಕಾದ ಅಗತ್ಯವಿದೆ.

ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ಜನರ ಹಲವು ನಿರೀಕ್ಷೆಗಳು ಈಡೇರಲಿವೆ. ಶಿಕ್ಷಣ ಆರೋಗ್ಯ ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಯೋಜನೆಗಳು ಘೋಷಣೆಯಾಗಲಿವೆ.
ಎನ್‌. ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಪ್ರಸಿದ್ಧವಾದ ಹೊಯ್ಸಳ ದೇವಸ್ಥಾನಗಳಿದ್ದು ಅವುಗಳು ಅಭಿವೃದ್ಧಿ ಮರೀಚಿಕೆಯಾಗಿದೆ. ಬಸ್ತಿ ಗೊಮ್ಮಟ ಕ್ಷೇತ್ರ, ಭೂವರಾಹನಾಥ ಸ್ವಾಮಿ ದೇವಾಲಯ, ಪ್ರಸಿದ್ದ ತ್ರಿವೇಣಿ ಸಂಗಮ, ಕಿಕ್ಕೇರಿ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಗೋವಿಂನಹಳ್ಳಿ ಪಂಚಲಿಂಗೇಶ್ವರ, ಹೊಸಹೊಳಲು ಲಕ್ಷ್ಮಿನಾರಾಯಣ, ಸಿಂಧುಘಟ್ಟದ ನಾರಾಯಣದುರ್ಗವನ್ನು ಸಂಪರ್ಕಿಸಲು ಸಮರ್ಪಕ ರಸ್ತೆಗಳಿಲ್ಲದ ಕಾರಣ ಪ್ರವಾಸಿಗರು ಪ್ರಯಾಸ ಪಡುವಂತಾಗಿದೆ.

ಪಾಂಡವಪುರ ಉಪ ವಿಭಾಗೀಯ ಆಸ್ಪತ್ರೆಯಾಗಿರುವುದರಿಂದ ಉನ್ನತೀಕರಣಗೊಳಿಸಬೇಕಿದೆ. ಎಲ್ಲ ರೀತಿಯ ಶಸ್ತ್ರಚಿಕಿತ್ಸೆ ಹಾಗೂ ಅಗತ್ಯ ವೈದ್ಯಕೀಯ ಉಪಕರಣ ಸೌಲಭ್ಯ ಒದಗಿಸಬೇಕು. ಸರ್ಕಾರಿ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಕಾಲೇಜು, ಕಾನೂನು ಕಾಲೇಜು ತೆರೆಯಬೇಕೆಂಬುದು ಜನರ ಬಹುಕಾಲದ ಕನಸಾಗಿದೆ. ವಿ.ಸಿ.ನಾಲೆಯ ಉಪ ನಾಲೆಗಳ ಹೂಳೆತ್ತಿಸುವುದು, ಹೇಮಾವತಿ ನಾಲೆಗಳ ಹೂಳೆತ್ತಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿ ಎಲ್ಲ ಭಾಗಗಳಿಗೆ ನೀರು ಹರಿಯುವಂತೆ ಮಾಡಬೇಕು ಎಂದು ಜನರು ಒತ್ತಾಯಿಸುತ್ತಾರೆ.

ಜಿಲ್ಲೆಯಲ್ಲಿಯೇ ಬರಪೀಡಿತ ಪ್ರದೇಶ ಎಂದು ಗುರುತಿಸಿಕೊಂಡಿರುವ ನಾಗಮಂಗಲ ತಾಲ್ಲೂಕಿನಲ್ಲಿ ನೂರಾರು ಮೂಲ ಸೌಕರ್ಯಗಳ ಕೊರತೆ ಇದೆ. ಬರಪ್ರದೇಶದಲ್ಲಿ ಮೊದಲು ಕುಡಿಯುವ ನೀರಿನ ಕೊರತೆ ಈಗಾಗಲೇ ಆರಂಭವಾಗಿದೆ. ಬಿಂಡಿಗನವಿಲೆ, ಹೊಣಕೆರೆ ವ್ಯಾಪ್ತಿಯಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಹಲವೆಡೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಇದನ್ನು ತಪ್ಪಿಸಲು ಸ್ಥಳೀಯವಾಗಿ ಬೃಹತ್‌ ಯೋಜನೆ ಘೋಷಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಮದ್ದೂರು ತಾಲ್ಲೂಕು ಕೂಡ ಕೆಆರ್‌ಎಸ್‌ ಜಲಾಶಯಕ್ಕೆ ಕೊನೆಭಾಗ ಆಗಿದ್ದು ಜನರು ದಶಕದಿಂದಲೂ ಸಮಗ್ರವಾಗಿ ನೀರು ಪಡೆಯಲು ಸಾಧ್ಯವಾಗುತ್ತಿಲ್ಲ. ಹಲವು ಏತ ನೀರಾವರಿ ಯೋಜನೆಗಳು ವಿಫಲಗೊಂಡಿದ್ದು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಮದ್ದೂರು ತಾಲ್ಲೂಕಿನ ಕೈಗಾರಿಕಾ ಪ್ರದೇಶಗಳು ಹೆಸರಿಗಷ್ಟೇ ಇದ್ದು ಹೆಚ್ಚು ಉದ್ಯೋಗ ನೀಡುವಂತಹ ಯಾವುದೇ ಕಾರ್ಖಾನೆಗಳು ಚಟುವಟಿಕೆ ಆರಂಭಿಸಿಲ್ಲ. ಹೀಗಾಗಿ ಮದ್ದೂರು ತಾಲ್ಲೂಕಿನ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ರಾಜ್ಯದ ಕೃಷಿ ಸಚಿವರೇ ನಾಗಮಂಗಲದ ಶಾಸಕರೂ ಆಗಿರುವ ಕಾರಣ ಜಿಲ್ಲೆಯ ಜನರಿಗೆ ಈ ಬಜೆಟ್‌ ಮೇಲೆ ಹೆಚ್ಚು ನಿರೀಕ್ಷೆಗಳಿವೆ. 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದು ತಮ್ಮ ಭಾಗದ ಅಭಿವೃದ್ಧಿಗೆ ಹಲವು ಪ್ರಸ್ತಾವಗಳನ್ನು ಮುಖ್ಯಮಂತ್ರಿಗೆ ಸಲ್ಲಿಕೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರೇ ಹಲವು ಪ್ರಸ್ತಾವ ಸಲ್ಲಿಸಿದ್ದಾರೆ. ಈ ಬಾರಿಯ ಬಜೆಟ್‌ ಮೇಲೆ ಜಿಲ್ಲೆಯಾದ್ಯಂತ ಜನರು ಮೊದಲಿಗಿಂತಲೂ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಮೈದಾನದಂತಿರುವ ಕೆರೆಗಳು

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದು ಜಿಲ್ಲೆಯಾದ್ಯಂತ ನೀರಾರು ಕೆರೆಗಳಲ್ಲಿ ನೀರು ಖಾಲಿಯಾಗಿದ್ದು ಮೈದಾನದಂತಾಗಿವೆ. ಸರಣಿ ಕೆರೆಗಳಲ್ಲಿ ನೀರಿಲ್ಲದ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಹೆಚ್ಚಾಗಿದೆ. ಕೆಆರ್‌ಎಸ್‌ ಜಲಾಶಯದಿಂದ ಹರಿದು ಹೋಗುವ ನೀರನ್ನು ಸದುಪಯೋಗ ಮಾಡಿಕೊಂಡು ಆಯಾ ತಾಲ್ಲೂಕು ವ್ಯಾಪ್ತಿಯ ಕೆರೆ ತುಂಬಿಸಬೇಕು ಎಂಬುದು ಜನರ ಒತ್ತಾಯವಾಗಿದೆ. ಆದರೆ ಈ ಬಾರಿ ಕೆಆರ್‌ಎಸ್‌ನಲ್ಲೂ ನೀರಿಲ್ಲದ ಕಾರಣ ಕೆರೆ ತುಂಬಿಸುವ ಯೋಜನೆ ಕನಸಾಗಿಯೇ ಉಳಿದಿದೆ. ಆಪಾರ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಗಿರುವ ಹಿನ್ನೆಲೆಯಲ್ಲಿ ರೈತರು ಬೇಸಿಗೆ ಬೆಳೆ ಹಾಕುವುದರಿಂದ ಹಿಂದೆ ಸರಿದಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರನ್ನು ರಕ್ಷಣೆ ಮಾಡುವ ಯೋಜನೆಯ ಘೋಷಣೆ ಅತ್ಯಾವಶ್ಯವಾಗಿದೆ. ಈ ಸಮಸ್ಯೆ ರಾಜ್ಯದ ವಿವಿಧೆಡೆ ಇದ್ದು ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ವಿ.ವಿ ಗಳಿಗೆ ಮೂಲ ಸೌಲಭ್ಯ ಸಿಗುವುದೇ?

ಮಂಡ್ಯ ವಿಶ್ವವಿದ್ಯಾಲಯ ರೂಪುಗೊಂಡು ಹಲವು ವರ್ಷಗಳೇ ಕಳೆಯುತ್ತಿದ್ದರೂ ಇಲ್ಲಿಯವರೆಗೂ ಮೂಲ ಸೌಲಭ್ಯ ದೊರೆತಿಲ್ಲ. ಸ್ವತಂತ್ರ ವಿವಿ ಸ್ಥಾನಮಾನ ಹೊಂದಿದ್ದರೂ ಎಲ್ಲದಕ್ಕೂ ಮಂಡ್ಯ ವಿವಿ ಮೈಸೂರು ವಿವಿಯನ್ನೇ ಅವಲಂಬಿಸಿದೆ. ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು ಪರೀಕ್ಷೆ ನಡೆಸುವುದಕ್ಕೂ ವಿವಿ ಸಿಬ್ಬಂದಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಹೊಸ ಕೋರ್ಸ್‌ ಆರಂಭವಾಗಿದ್ದರೂ ಅದಕ್ಕೆ ಬೇಕಾದ ಸೌಲಭ್ಯಗಳಿಲ್ಲ ಕಾರಣ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೈಸೂರು ವಿವಿಯ ತೂಬಿನಕೆರೆ ಅಧ್ಯಯನ ಕೇಂದ್ರಕ್ಕೂ ಸೌಲಭ್ಯಗಳಿಲ್ಲದ ಕಾರಣ ಅದು ಮುಚ್ಚಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಜೊತೆಗೆ ಮೈಸೂರು ವಲಯದ 8 ಜಿಲ್ಲೆಗಳನ್ನು ಒಳಗೊಂಡಂತ ಐತಿಹಾಸಿಕ ವಿ.ಸಿ.ಫಾರಂ ಅನ್ನು ಸಮಗ್ರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವನ್ನಾಗಿ ಘೋಷಣೆ ಮಾಡಬೇಕು ಎಂದು ರೈತ ಮುಖಂಡರು ಹಾಗೂ ಕೃಷಿ ವಿಜ್ಞಾನಿಗಳು ಒತ್ತಾಯ ಮಾಡಿದ್ದಾರೆ.

ಯಾರು ಏನಂದರು?

ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಹೊಯ್ಸಳ ಕಾಲದ ದೇವಾಲಯ ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಅವುಗಳ ಅಭಿವೃದ್ಧಿಯಾಗದೆ ಅಜ್ಞಾತವಾಗಿಯೇ ಉಳಿದಿವೆ. ಹೇಮಗಿರಿ ಸೇರಿದಂತೆ ಕಾವೇರಿ ಹೇಮಾವತಿ ನದಿ ತೀರದ ಪುಣ್ಯಕ್ಷೇತ್ರಗಳ ಅಭಿವೃದ್ಧಿಯಾಗಿಲ್ಲ. ಮುಖ್ಯಮಂತ್ರಿಗಳು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಬೃಹತ್‌ ಯೋಜನೆ ಘೋಷಣೆ ಮಾಡಬೇಕು.– ಲಕ್ಷ್ಮಿ ಶಶಿಧರ್‌ ಕೆ.ಆರ್‌.ಪೇಟೆ

ಮದ್ದೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ ಸೋಮನಹಳ್ಳಿ ಹಾಗೂ ಗೆಜ್ಜೆಲಗೆರೆ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನಷ್ಟು ಉದ್ಯಮಗಳು ಸ್ಥಾಪನೆಯಾಗಬೇಕು. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗವಕಾಶಗಳು ಸಿಗಲಿವೆ. ಶಿವಪುರದಲ್ಲಿರುವ ಸ್ವಾತಂತ್ರ್ಯ ಸ್ಮಾರಕವಾದ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಬೇಕು.– ಪ್ರದೀಪ್ ಮದ್ದೂರು

ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಕೃಷಿ ಭೂಮಿ ಫಲವತ್ತತೆ ಹಾಳಾಗುತ್ತಿದ್ದು ಆಹಾರ ಉತ್ಪಾದನೆಗೆ ತೊಡಕಾಗಿದೆ. ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲು ಸರ್ಕಾರ ನೀಡಲು ವಿಶೇಷ ಯೋಜನೆ ಘೋಷಣೆ ಮಾಡಬೇಕು. ಕುಡಿಯುವ ನೀರಿನ ಯೋಜನೆಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಸರ್ಕಾರ ಪ್ರೋತ್ಸಾಹಿಸಬೇಕು.–ಕೆಂಪರಾಜು ಯತ್ತಂಬಾಡಿ

ಪ್ರಜಾವಾಣಿ ಬಳಗ: ಎಂ.ಎನ್‌.ಯೋಗೇಶ್‌, ಬಲ್ಲೇನಹಳ್ಳಿ ಮಂಜುನಾಥ್‌, ಗಣಂಗೂರು ನಂಜೇಗೌಡ, ಟಿ.ಕೆ.ಲಿಂಗರಾಜು, ಎಂ.ಆರ್‌.ಅಶೋಕ್‌ ಕುಮಾರ್‌, ಹಾರೋಹಳ್ಳಿ ಪ್ರಕಾಶ್‌, ಉಲ್ಲಾಸ್‌, ಚೇತನ್‌

ಸಂತೇಬಾಚಹಳ್ಳಿ ಸಮೀಪದ ಅಘಲಯ ಕೆರೆ ನೀರಿಲ್ಲದೇ ಮೈದಾನದಂತಾಗಿರುವುದು
ಮಂಡ್ಯದಲ್ಲಿರುವ ಮೈಷುಗರ್‌ ಕಾರ್ಖಾನೆ
ಮಂಡ್ಯ ವಿಶ್ವವಿದ್ಯಾಲಯದ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.