ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಇಳಿಕೆ

ಸಂಚಾರ ನಿಯಮ ಉಲ್ಲಂಘನೆ ಮೇಲೆ ಪೊಲೀಸರ ಹದ್ದಿನ ಕಣ್ಣು; ಐಟಿಎಂಎಸ್‌ ಕ್ಯಾಮೆರಾ ಅಳವಡಿಕೆ

ಸಿದ್ದು ಆರ್.ಜಿ.ಹಳ್ಳಿ
Published 24 ಜೂನ್ 2024, 0:56 IST
Last Updated 24 ಜೂನ್ 2024, 0:56 IST
ಬೆಂಗಳೂರು– ಮೈಸೂರು ಹೆದ್ದಾರಿ
ಬೆಂಗಳೂರು– ಮೈಸೂರು ಹೆದ್ದಾರಿ   

ಮಂಡ್ಯ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಪೊಲೀಸ್‌ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಪಘಾತಗಳ ಸಂಖ್ಯೆ ಶೇ 57ರಷ್ಟು ಇಳಿಕೆಯಾಗಿದೆ.

ಪೊಲೀಸ್ ಇಲಾಖೆಯ ಅಂಕಿ–ಅಂಶದ ಪ್ರಕಾರ, 2023ರಲ್ಲಿ ಜನವರಿಯಿಂದ ಮೇವರೆಗೆ 288 ಅಪಘಾತಗಳು ಸಂಭವಿಸಿ, 100 ಮಂದಿ ಮೃತಪಟ್ಟು, 301 ಮಂದಿ ಗಾಯಗೊಂಡಿದ್ದರು. 2024ರಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ 125 ಅಪಘಾತಗಳು ಸಂಭವಿಸಿ, 31 ಮಂದಿ ಸಾವಿಗೀಡಾಗಿದ್ದು, 167 ಮಂದಿ ಗಾಯಗೊಂಡಿದ್ದಾರೆ. 

ಮರಣ ಪ್ರಮಾಣ ಶೇ 69ರಷ್ಟು ಮತ್ತು ಗಾಯಾಳುಗಳ ಪ್ರಮಾಣ ಶೇ 45ರಷ್ಟು ಇಳಿಕೆಯಾಗಿದೆ. ಬೆಂಗಳೂರು–ಮೈಸೂರು ಹೆದ್ದಾರಿ ನಿರ್ಮಾಣವಾದ ನಂತರ ಪ್ರಯಾಣದ ಅವಧಿ 3 ಗಂಟೆಯಿಂದ 90 ನಿಮಿಷಕ್ಕೆ ಇಳಿಕೆಯಾಗಿದೆ. ಆದರೆ, ಸಂಚಾರ ನಿಯಮ ಉಲ್ಲಂಘನೆ ಮತ್ತು ಅತಿವೇಗದ ಚಾಲನೆಯಿಂದ ಈ ಹೆದ್ದಾರಿಯು ಅಪಘಾತಗಳ ತಾಣವಾಗಿ ಮಾರ್ಪಟ್ಟಿತ್ತು. 

ADVERTISEMENT

ಡೆತ್‌ ಫ್ರೀ ಝೋನ್‌: ಬೆಂಗಳೂರು–ಮೈಸೂರು ಹೆದ್ದಾರಿಯನ್ನು ‘ಡೆತ್‌ ಫ್ರೀ ಝೋನ್‌’ ಆಗಿ ಮಾಡಲು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್‌ಕುಮಾರ್‌ ಅವರು ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸುಗಮ ಸಂಚಾರ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದ್ದಾರೆ. 

ಐ.ಟಿ.ಎಂ.ಎಸ್‌ ಅಳವಡಿಕೆ:ಬೆಂಗಳೂರು–ಮೈಸೂರು ಹೆದ್ದಾರಿಯ ಆಯ್ದ 10 ಸ್ಥಳಗಳಲ್ಲಿ ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಐ.ಟಿ.ಎಂ.ಎಸ್‌) ಕ್ಯಾಮೆರಾಗಳನ್ನು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಐ.ಟಿ.ಎಂ.ಎಸ್‌ ಕ್ಯಾಮೆರಾಗಳು ಸಂಚಾರ ಉಲ್ಲಂಘನೆಯನ್ನು ಸೂಕ್ಷ್ಮವಾಗಿ ದಾಖಲಿಸುವ ಸರ್ವರ್‌ಗಳನ್ನು ಹೊಂದಿವೆ. ಕಂಟ್ರೋಲ್‌ ರೂಂನಲ್ಲಿ ನಿರಂತರ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. 

‘ಹೆದ್ದಾರಿಯಲ್ಲಿ ದೀಪಗಳ ಅಳವಡಿಕೆ, ಸಂಚಾರ ಸೂಚನಾ ಫಲಕಗಳು, ಸರ್ವಿಸ್‌ ರಸ್ತೆಯಿಂದ ಹೆದ್ದಾರಿಗೆ ನುಗ್ಗದಂತೆ ತಂತಿಬೇಲಿಯನ್ನು ಹಾಕಿರುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಸಂಚಾರ ನಿಯಮ ಉಲ್ಲಂಘಿಸಿದ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ನೀಡಿದ ದೂರು ಆಧರಿಸಿ ಕ್ರಮ ಕೈಗೊಂಡಿದ್ದೇವೆ’ ಎನ್ನುತ್ತಾರೆ ಮಂಡ್ಯ ಜಿಲ್ಲೆಯ ಹೆಚ್ಚುವರಿ ಎಸ್ಪಿ ತಿಮ್ಮಯ್ಯ. 

ಐಟಿಎಂಎಸ್‌ ಕ್ಯಾಮೆರಾ ಅಳವಡಿಸಿದ್ದುನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 22 ದಿನಗಳಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 2300 ಪ್ರಕರಣ ದಾಖಲಾಗಿವೆ. ಕಟ್ಟುನಿಟ್ಟಿನ ಕ್ರಮದಿಂದಾಗಿ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ

–ಎನ್‌.ಯತೀಶ್‌ ಎಸ್‌ಪಿ ಮಂಡ್ಯ

ವಿರುದ್ಧ ದಿಕ್ಕಿನಲ್ಲಿ ಸಂಚಾರ: ಪ್ರಕರಣ ದಾಖಲು

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್‌ ಪ್ಲಾಜಾದಲ್ಲಿ ಸುಂಕ ಕಟ್ಟುವುದನ್ನು ತಪ್ಪಿಸಲು ಹೆದ್ದಾರಿಯಲ್ಲಿ ಹಿಂತಿರುಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಸಂಚಾರ ನಿಯಮ ಉಲ್ಲಂಘಿಸಿದ 3 ಸಾರಿಗೆ ಸಂಸ್ಥೆ ಬಸ್‌ ಮತ್ತು 17 ಖಾಸಗಿ ವಾಹನಗಳ ಚಾಲಕರ ವಿರುದ್ಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.