ಮದ್ದೂರು: ಈ ಹಿಂದೆ ಪಂಚಾಯಿತಿ ಅಧ್ಯಕ್ಷರಾಗಿದ್ದ ಸುಂದರಮ್ಮ ಹಾಗೂ ಜಯಲಕ್ಷ್ಮಮ್ಮ ಅವಧಿಯಲ್ಲಿ ಆಗಿನ ಪಿಡಿಓ ಹೇಮಾ ಜತೆಗೂಡಿ ಸುಮಾರು ₹80 ಲಕ್ಷಕ್ಕೂ ಹೆಚ್ಚು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಗುರುವಾರ ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಪಂಚಾಯಿತಿ ಕಚೇರಿ ಮುಂದೆ ಸದಸ್ಯರು ಹಾಗೂ ಗ್ರಾಮದ ಮುಖಂಡರು ಪ್ರತಿಭಟನೆ ನಡೆಸಿದರು.
ಈ ವೇಳೆ ಪಂಚಾಯಿತಿ ಸದಸ್ಯೆ ದಿವ್ಯಾ ರಾಮಚಂದ್ರಶೆಟ್ಟಿ ಮಾತನಾಡಿ, ‘ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸುಂದರಮ್ಮ ಹಾಗೂ ಜಯಲಕ್ಷ್ಮಮ್ಮ ಅವರು 2001, 2022 ಹಾಗೂ 2023ರ ಅಧಿಕಾರ ಅವಧಿಯಲ್ಲಿ ಕಾಮಗಾರಿ ಮಾಡದೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ತಿದ್ದಿ ಲಕ್ಷಾಂತರ ಹಣ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಕಾಮಗಾರಿಗೆ ಸಂಬಂಧಿಸಿದಂತೆ ನಕಲಿ ಬಿಲ್ ಸೃಷ್ಟಿಯಾಗಿದೆ. ಸದಸ್ಯರ ಗಮನಕ್ಕೆ ತರದೇ, ಒಪ್ಪಿಗೆ ಪಡೆಯದೇ ಕ್ರಿಯಾ ಯೋಜನೆ ಸಿದ್ದಪಡಿಸಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಿದ್ದು ಪ್ರಶ್ನಿಸಲು ಹೋದರೆ ಜಾತಿ ನಿಂದನೆ ಕೇಸ್ ಹಾಕುವುದಾಗಿ ಎದರಿಸಿದ್ದಾರೆ ಎಂದು ದೂರಿದರು.
14 ನೇ, 15ನೇ ಅನುದಾನವನ್ನು ಹಾಗೂ ನರೇಗಾ ಹಣ ಕೂಡಾ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಅಂಗವಿಕಲರ ಶೌಚಾಲಯ ನಿರ್ಮಾಣಕ್ಕಾಗಿ ₹6 ಲಕ್ಷ ಬಿಲ್ ಮಾಡಿ ನಿರ್ಮಾಣವನ್ನೇ ಮಾಡಿಲ್ಲ ಹಾಗೂ ಸುಂದರಮ್ಮ ಮಗ ಮನು ಎಂಬುವರಿಗೆ ಸುಮಾರು ₹35 ಲಕ್ಷಕ್ಕೂ ಹೆಚ್ಚು ಬಿಲ್ ಮಾಡಲಾಗಿದೆ ಎಂದರು.
ಅಕ್ರಮಕ್ಕೆ ಸಂಬಂಧಿಸಿದ ಬಿಲ್‌ಗಳ ಬಗ್ಗೆ ಮಾಹಿತಿಯನ್ನು ಇ,ಒ ಹಾಗೂ ಜಿಲ್ಲಾ ಪಂಚಾಯಿತಿ ಸಿ ಇ ಒ ಅವರಿಗೆ ನೀಡಿ ದೂರು ನೀಡಿದ್ದೇವೆ ಎಂದ ಅವರು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಸಿ ಘೋಷಣೆ ಕೂಗಿ ಪ್ರತಿಭಟಿಸಲಾಯಿತು.
ಪ್ರತಿಭಟನೆ ನೇತೃತ್ವವನ್ನು ಪಂಚಾಯಿತಿ ಸದಸ್ಯರಾದ ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ದಿವ್ಯಾ ರಾಮಚಂದ್ರಶೆಟ್ಟಿ, ಜಯಮ್ಮ, ನಟರಾಜು, ಸವಿತಾ ಮಹದೇಶ್, ಶಿವಸ್ವಾಮಿ, ಮುಖಂಡರಾದ ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.