ADVERTISEMENT

ಮಂಡ್ಯ | ಬರೆ ಎಳೆದ ಕಾವೇರಿ ಪ್ರಾಧಿಕಾರ; ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 15:57 IST
Last Updated 19 ಜನವರಿ 2024, 15:57 IST
<div class="paragraphs"><p>ಕಾವೇರಿ ನೀರು</p></div>

ಕಾವೇರಿ ನೀರು

   

ಮಂಡ್ಯ: ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು ಮತ್ತೆ ತಮಿಳುನಾಡಿಗೆ 998 ಕ್ಯುಸೆಕ್‌ ನೀರು ಹರಿಸಬೇಕು ಎಂದು ಆದೇಶ ನೀಡುವ ಮೂಲಕ ಜಿಲ್ಲೆಯ ರೈತರಿಗೆ, ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಯುತ್ತಿರುವ 137ನೇ ದಿನದ ಧರಣಿಯಲ್ಲಿ ಶುಕ್ರವಾರ ಪಾಧಿಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ADVERTISEMENT

ಪ್ರಾಧಿಕಾರದ ರಾಜ್ಯದ ವಿರುದ್ಧ ನಿರಂತರವಾಗಿ ಆದೇಶ ಮಾಡುತ್ತಿದೆ. ವಾಸ್ತವವಾಗಿ ಅಣೆಕಟ್ಟೆಯಲ್ಲಿ ನೀರಿಲ್ಲ, ಮಳೆಯಿಲ್ಲ, ಬೆಳೆಯಿಲ್ಲ ಎಂಬುದನ್ನೇ ಪ್ರಾಧಿಕಾರ ಮರೆತಿದೆ. ನಮ್ಮ ರಾಜ್ಯದ ಕಾನೂನು ತಂಡ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ವೈಫಲ್ಯ ಕಾಣುತ್ತಿದೆ. ನೀರು ನಿರ್ವಹಣಾ ಸಮಿತಿ ಹಾಗೂ ಕಾವೇರಿ ನದಿ ನೀರಿನ ಪ್ರಾಧಿಕಾರ ಎರಡೂ ಸತ್ತು ಹೋಗಿವೆ ಎಂದು ಆರೋಪಿಸಿದರು.

ಕಳೆದ ವರ್ಷ ಚುನಾವಣೆಗೂ ಮುನ್ನ ಸಾವಿರಾರು ಜನರನ್ನು ಸೇರಿಸಿಕೊಂಡು ಮೇಕೆದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ಮಾಡಿದರು. ಈಗ ಅವರೇ ಅಧಿಕಾರದಲ್ಲಿದ್ದರೂ ಯೋಜನೆಯನ್ನು ಮರೆತಿದ್ದಾರೆ. ನಿರಂತರವಾಗಿ ಕೆಆರ್‌ಎಸ್‌ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದ್ದರೂ ಅವರು ಬಾಯಿ ಬಿಡುತ್ತಿಲ್ಲ ಎಂದು ಆರೋಪಿಸಿದರು.

ಸಮಿತಿಯ ಪದಾಧಿಕಾರಿಗಳಾದ ಸುನಂದಾ ಜಯರಾಂ, ಕೆ.ಬೋರಯ್ಯ, ಎಸ್.ನಾರಾಯಣ್, ನಾಗರಾಜು, ನಾಗೇಂದ್ರ, ಲಕ್ಷ್ಮಮ್ಮ ಗೆಜ್ಜಲಗೆರೆ, ಹುರುಗಲವಾಡಿ ರಾಮಯ್ಯ, ಮಂಜುಳಾ, ಜವರಪ್ಪ, ಬೋರಲಿಂಗಯ್ಯ, ಫಯಾಜ್, ಜಯಸ್ವಾಮಿ, ಮಲ್ಲೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.