ADVERTISEMENT

ಮಂಡ್ಯ | ಜಿಲ್ಲೆಯಾದ್ಯಂತ ಉತ್ತಮ ಮಳೆ; ಪೂರ್ವ ಮುಂಗಾರು ಬಿತ್ತನೆ ಚುರುಕು

​ಪ್ರಜಾವಾಣಿ ವಾರ್ತೆ
Published 20 ಮೇ 2024, 7:16 IST
Last Updated 20 ಮೇ 2024, 7:16 IST
ನಾಗಮಂಗಲ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಪಟ್ಟಣ ಸಮೀಪದಲ್ಲಿ ರೈತರು ಜಮೀನು ಹದಗೊಳಿಸುತ್ತಿರುವುದು
ನಾಗಮಂಗಲ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಪಟ್ಟಣ ಸಮೀಪದಲ್ಲಿ ರೈತರು ಜಮೀನು ಹದಗೊಳಿಸುತ್ತಿರುವುದು   

ಮಂಡ್ಯ: ಜಿಲ್ಲಾಯಾದ್ಯಂತ ಮಳೆ ಬಿರುಸು ಪಡೆದುಕೊಂಡಿದ್ದು ರೈತರು ಪೂರ್ವ ಮುಂಗಾರು ಬಿತ್ತನೆಯಲ್ಲಿ ತೊಡಗಿದ್ದಾರೆ. ಬರದಿಂದ ಬೆಂಗಾಡಾಗಿದ್ದ ಇಳೆ ಮಳೆಗೆ ತಂಪಾಗಿದ್ದು ರೈತರು ಭೂತಾಯಿಗೆ ಹಸಿರು ಸೀರೆಯುಡಿಸುತ್ತಿದ್ದಾರೆ.

ಕಳೆದೊಂದು ವರ್ಷದಿಂದ ಮಳೆ ಇಲ್ಲದೆ ರೈತರು ಬೆಳೆಯನ್ನೇ ಮಾಡಿರಲಿಲ್ಲ. ಕೊಳವೆ ಬಾವಿ ಇದ್ದವರು ಮಾತ್ರ ಬೆಳೆ ಮಾಡಿದ್ದರು. ಆದರೆ ಭೀಕರ ಬರಕ್ಕೆ ಕೊಳವೆ ಬಾವಿಗಳೂ ಬತ್ತಿ ಹೋದ ಕಾರಣ ಭೂಮಿ ಬರಡಾಗುವ ಸ್ಥಿತಿ ತಲುಪಿತ್ತು. ಇಂತಹ ಸಂದರ್ಭದಲ್ಲಿ ಬಂದ ಮಳೆಯಿಂದಾಗಿ ಎಲ್ಲೆಡೆ ನೀರು ಹರಿಯುತ್ತಿದ್ದು ರೈತರಲ್ಲಿ ಸಂತಸ ಕಡಲಿನಂತಾಗಿದೆ.

ಕಳೆದ ವರ್ಷ ಬಿತ್ತನೆ ಇಲ್ಲದ ಕಾರಣ ರೈತರು ಬಿತ್ತನೆ ಬೀಜವನ್ನು ಮನೆಯಲ್ಲೇ ಸಂಗ್ರಹಿಸಿ ಇಟ್ಟುಕೊಂಡಿದ್ದರು. ಈಗ ಬಿತ್ತನೆಗೆ ಸಕಾಲವಾಗಿದ್ದು, ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಬಿತ್ತನೆಗೂ ಮೊದಲು ಅಲ್ಪಾವಧಿಯಲ್ಲಿ ಬರುವ ದ್ವಿದಳ ಧಾನ್ಯಗಳ ಬತ್ತನೆ ಎಲ್ಲಡೆ ನಡೆಯುತ್ತಿದೆ.

ADVERTISEMENT

ಎಳ್ಳು, ಅಲಸಂದೆ, ಉದ್ದು, ಹೆಸರು, ನೆಲಗಡಲೆ, ತೊಗರಿ ಬಿತ್ತನೆ ಭರದಿಂದ ಸಾಗಿದೆ. ಕಳೆದೊಂದು ವರ್ಷದಿಂದ ಹೊಲ ಉಳುಮೆ ಮಾಡಲು ಸಾಧ್ಯವಾಗಿರಲಿಲ್ಲ. ಹಲವರು ಈಗ ಮೊದಲು ಹೊಲ ಉಳುಮೆಗೆ ಆದ್ಯತೆ ನೀಡಿದ್ದಾರೆ. ಬಹುತೇಕ ರೈತರು ಹೊಲ ಹಸನು ಮಾಡುವತ್ತ ಚಿತ್ತ ಹರಿಸಿದ್ದಾರೆ. ಇನ್ನೂ ಕೆಲವರು ಮೊದಲು ಬಿತ್ತನೆ ಮಾಡಿ ನಂತರ ಉಳುಮೆ ಮಾಡುತ್ತಿದ್ದಾರೆ.

'ನೆಲ ಚೆನ್ನಾಗಿ ನೀರು ಕುಡಿದಿದ್ದು ಮೊದಲೇ ಬಿತ್ತನೆ ಮಾಡಿ ನಂತರ ಉಳುಮೆ ಮಾಡಿದರೂ ಒಳ್ಳೆಯದು. ಕಳೆ ಗೊಬ್ಬರವಾಗಲಿದ್ದು ಬೀಜ ಚೆನ್ನಾಗಿ ಹುಟ್ಟಿಕೊಳ್ಳುತ್ತಿದೆ' ಎಂದು ರೈತರೊಬ್ಬರು ಹೇಳಿದರು.

ಹಿಂದಾದ ಬಿತ್ತನೆ: ಮಳೆಯಾಶ್ರಿತ ಪ್ರದೇಶವಾದ ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲ್ಲೂಕು‌ ರೈತರಿಗೆ ಪೂರ್ವ ಮುಂಗಾರು ಬಿತ್ತನೆ ಕೊಂಚ ತಡವಾಗಿದೆ ಎಂಬ ಕೊರಗಿದೆ. ಹಿನ್ನಡೆಯಾದರೂ ಸರಿ, ಬಿತ್ತನೆ ನಿಲ್ಲಿಸಬಾರದು ಎಂಬ ಕಾರಣದಿಂದ ಬಿತ್ತನೆ ಮುಂದುವರಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲೇ ಬಿತ್ತನೆ ಪೂರ್ಣಗೊಳ್ಳಬೇಕಾಗಿತ್ತು. ಈಗ ಮೇ ಮುಗಿಯುತ್ತಾ ಬಂದಿದ್ದು ಬೆಳೆ ಹಿಂದೆ ಬೀಳುವ ಸಾಧ್ಯತೆ ಇದೆ. ಈಗ ದ್ವಿದಳ ಧಾನ್ಯಗಳ ಬಿತ್ತನೆ ಮಾಡಿದರೆ ಆಗಸ್ಟ್ ವೇಳೆಗೆ ಬೆಳೆ ಬರುತ್ತದೆ. ಇದರಿಂದ ಮುಂಗಾರು ಬಿತ್ತನೆಗೆ ತೊಂದರೆ ಉಂಟಾಗುತ್ತದೆ ಎಂಬ ಕಾರಣದಿಂದ ಕೆಲ ರೈರು ಪೂರ್ವ ಮುಂಗಾರು ಬಿತ್ತನೆಯಿಂದ ದೂರ ಉಳಿದಿದ್ದಾರೆ. ಆದರೂ ಜೋಳ ಸೇರಿದಂತೆ ಮೇವಿನ ಬೆಳೆಗಳ ಬಿತ್ತನೆ ಮಾಡುತ್ತಿದ್ದಾರೆ.

ಶೇ 0.7ರಷ್ಟು ಸಾಧನೆ: ಈಗಷ್ಟೇ ಬಿತ್ತನೆ ಕಾರ್ಯ ಆರಂಭವಾಗಿದ್ದು ಒಟ್ಟಾರೆ ಗುರಿಯಲ್ಲಿ ಅತ್ಯಲ್ಪ‌ ಸಾಧನೆಯಾಗಿದೆ. 1,92,693 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದ್ದು‌ ಇಲ್ಲಿಯವರೆಗೆ 1,273 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಕಳೆದ‌ ವರ್ಷ ಇದೇ ಅವಧಿಯಲ್ಲಿ ಶೇ 3.3ರಷ್ಟು‌ ಮಾತ್ರ ಬಿತ್ತನೆ ಮಾಡಲಾಗಿತ್ತು.

ಅಲಸಂದೆ ಹೆಚ್ಚು ಬಿತ್ತನೆ: ಜಿಲ್ಲೆಯಲ್ಲಿ ಅಲಸಂದೆ‌ ಬಿತ್ತನೆ ಬೀಜಕ್ಕೆ ಹೆಚ್ಚು ಬೇಡಿಕೆ ಇದೆ. 226 ಕ್ವಿಂಟಲ್ ಸಂಗ್ರಹ ಇದೆ, 200 ಕ್ವಿಂಟಲ್‌ ಬೇಡಿಕೆ ಇದ್ದು ಇಲ್ಲಿಯವರೆಗೆ 126 ಕ್ವಿಂಟಲ್ ವಿತರಣೆ ಮಾಡಲಾಗಿದೆ. ಹೆಸರು 20, ಉದ್ದು 25, ನೆಲಗಡಲೆ 50, ತೊಗರಿ 6 ಕ್ವಿಂಟಲ್ ಸಂಗ್ರಹವಿದೆ.‌ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದೊರೆಯುವ ವ್ಯವಸ್ಥೆ ಮಾಡಲಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಅಲಸಂದೆ 570 ಹೆಕ್ಟೇರ್, ಹೆಸರು 100 ಹೆಕ್ಟೇರ್, ಉದ್ದು 80 ಹೆಕ್ಟೇರ್ ಮತ್ತು 60 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ. ತಾಲ್ಲೂಕಿಗೆ 12 ಕ್ವಿಂಟಲ್ ಅಲಸಂದೆ ಬಿತ್ತನೆ ಬೀಜ ತರಿಸಲಾಗಿದೆ.

ಮಳವಳ್ಳಿ ತಾಲ್ಲೂಕಿನ ಹಲಗೂರು, ಕಸಬಾ, ಪೂರಿಗಾಲಿ ಹಾಗೂ ಕಿರುಗಾವಲು ವಲಯಗಳ ರೈತರು ನಮ್ಮ ಜಮೀನುಗಳ ಉಳುಮೆಯಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ಭತ್ತ, ರಾಗಿ, ಮುಸುಕಿನ ಜೋಳ ಹಾಕಲು ರೈತರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಕೃಷಿ ಇಲಾಖೆಯು ಸಹ ರೈತರ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಪೂರೈಕೆ ಮಾಡಲು ಬಿತ್ತನೆ ಬೀಜಗಳ ಸಂಗ್ರಹಕ್ಕೆ ಮುಂದಾಗಿದೆ.

ಕಿರುಗಾವಲು ಹಾಗೂ ಕಸಬಾ ಭಾಗಕ್ಕೆ ತಲಾ 750 ಕ್ವಿಂಟಲ್, ಪೂರಿಗಾಲಿ  600 ಕ್ವಿಂಟಲ್, ಹಲಗೂರು ಭಾಗಕ್ಕೆ 100 ಕ್ವಿಂಟಲ್ ಭತ್ತದ ಬಿತ್ತನೆ ಬೀಜ, ನಾಲ್ಕು ವಲಯಗಳಿಂದ ಸುಮಾರು 125 ಕ್ವಿಂಟಲ್‌ನಷ್ಟು ರಾಗಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ.

ನಾಗಮಂಗಲ ತಾಲ್ಲೂಕಿನಲ್ಲಿ ಕಳೆದ ವರ್ಷ ವ್ಯಾಪಕ ಬರಗಾಲದಿಂದ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿದ್ದ ಕಾರಣ ರೈತರು ಆತಂಕಕ್ಕೀಡಾಗಿದ್ದರು. ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ಬೆಳೆ ರೈತರ ಕೈಹಿಡಿಯುವ ಭರವಸೆ ಮೂಡಿದೆ.

ಅಲ್ಲದೆ ಹೇಮಾವತಿ ನದಿ ಪಾತ್ರದಲ್ಲಿ ಹೇಮಾವತಿ ನಾಲೆಗಳಲ್ಲಿ ನೀರಿನ ಹರಿಯುವಿಕೆ ಕಡಿಮೆಯಾದ ಪರಿಣಾಮ ರೈತರು ಬೆಳೆ ಬೆಳೆದಿಲ್ಲ. ಈ ಬಾರಿ ಹೆಚ್ಚು ಬೆಳೆ ಬೆಳೆಯಲು ಉತ್ಸುಕರಾಗಿದ್ದು ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಮಳವಳ್ಳಿ, ಮದ್ದೂರು, ಮಂಡ್ಯ ತಾಲ್ಲೂಕುಗಳಲ್ಲೂ ಪೂರ್ವ ಮುಂಗಾರು ಬಿತ್ತನೆ ಭರದಿಂದ ಸಾಗಿದೆ.

ಪಾಂಡವಪುರ ತಾಲ್ಲೂಕಿನ ಅಂತನಹಳ್ಳಿ ಗ್ರಾಮದಲ್ಲಿ  ಹೊಲ ಉಳುಮೆ ಮಾಡಿ ಹಸನುಗೊಳಿಸಿರುವುದು
ಹಳ್ಳಿಗಳಲ್ಲಿ ಮನೆಮಾಡಿದ ಕೃಷಿ ಸಂಭ್ರಮ ಬಿತ್ತನೆ ಬೀಜ, ಗೊಬ್ಬರ ಖರೀದಿ ಚುರುಕು ಹೊಲ ಹಸನು ಮಾಡುವತ್ತ ರೈತರ ಚಿತ್ತ
ಹೊಲ ಪಾಳು ಬಿಡಬೇಡಿ; ಜೆಡಿ
‘ಜಿಲ್ಲೆಯ ಹೆಚ್ಚು ರೈತರು ಈಚೆಗೆ ಕೃಷಿ ಭೂಮಿಯನ್ನು ಪಾಳು ಬಿಡುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಈಗಾಗಲೇ ಶೇ 25ರಷ್ಟು ಜಮೀನು ಬೀಳು–ಜವಳಾಗಿದೆ. ಉತ್ತಮ ಮಳೆಯಾಗುತ್ತಿದ್ದು ರೈತರು ಭೂಮಿಯನ್ನು ಪಾಳು ಬಿಡಬಾರದು. ಉಳುಮೆ ಮಾಡಿ ಏನಾದರೂ ಒಂದು ಬೆಳೆ ಮಾಡಬೇಕು’ ಎಂದು ಕೃಷಿ ಜಂಟಿ ನಿರ್ದೇಶಕ ವಿ.ಎಸ್‌.ಅಶೋಕ್‌ ಹೇಳಿದರು. ‘ಮುಂಗಾರು ಬಿತ್ತನೆ ತಡವಾಗಿದ್ದರೂ ಅಲ್ಪಾವಧಿ ಬೆಳೆಗಳನ್ನು ಹಾಕಲು ಅಡ್ಡಿ ಇಲ್ಲ. ಹೂವು ತರಕಾರಿ ಸೇರಿದಂತೆ ಕಡೇಪಕ್ಷ ಮೇವು ಬೆಳೆಗಳನ್ನಾದರೂ ಬಿತ್ತನೆ ಮಾಡಬೇಕು. ಭೂಮಿಯನ್ನು ಪಾಳು ಬಿಟ್ಟರೆ ಮಣ್ಣು ಕೊಚ್ಚಿಕೊಂಡು ಸವಕಳಿಯಾಗುವ ಅಪಾಯವಿದೆ. ಹೀಗಾಗಿ ರೈತರು ಮೊದಲು ಹೊಲ ಉಳುಮೆಗೆ ಆದ್ಯತೆ ಕೊಡಬೇಕು’ ಎಂದರು. ‘ಈ ಬಾರಿ ಬಿತ್ತನೆ ಬೀಜ ರಸಗೊಬ್ಬರಕ್ಕೆ ಯಾವುದೇ ತೊಂದರೆ ಇಲ್ಲ. ಕಳೆದ ಬಾರಿ ಬಂದ ರಸಗೊಬ್ಬರದ ಸಂಗ್ರಹವೂ ಇದ್ದು ರೈತರಿಗೆ ಅಗತ್ಯವಾದ ಗೊಬ್ಬರ ಪೂರೈಕೆ ಮಾಡಲಾಗುವುದು’ ಎಂದರು.
ವಾರದಲ್ಲಿ 6.2 ಸೆಂ.ಮೀ ಮಳೆ
ಜಿಲ್ಲೆಯಾದ್ಯಂತ ವಾರದೊಳಗೆ ವಾಡಿಕೆ ಮಳೆಗಿಂತಲೂ ಹೆಚ್ಚುವರಿ ಮಳೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಸಂತಸ ತರಿಸಿದೆ. 7 ದಿನದಲ್ಲಿ 6.2 ಸೆಂ.ಮೀ ಮಳೆಯಾಗಿದೆ ವಾಡಿಕೆ 2.26 ಸೆಂ.ಮೀ ಮಳೆಗೆ ಪ್ರತಿಯಾಗಿ ಹೆಚ್ಚುವರಿಯಾಗಿ 4 ಸೆ.ಮೀ ಮಳೆ ಸುರಿದಿದೆ. ಮೇ 1ರಿಂದಲ ಇಲ್ಲಿಯವರೆಗೆ 10.5 ಸೆಂ.ಮೀ.ಮಳೆಯಾಗಿದ್ದು ಹೆಚ್ಚುವರಿಯಾಗಿ 8.5 ಸೆಂ.ಮೀ.ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2 ಸೆಂ.ಮೀ ಮಳೆಯಾಗಿದೆ.

ಕೃಷಿ ಯಂತ್ರೋಪಕರಣ ಕೊಡಿ ಕೆ.ಆರ್.ಪೇಟೆ ತಾಲ್ಲೂಕಿನಾದ್ಯಂತ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ಬರಕ್ಕೆ ಬಯಲು ಪ್ರದೇಶದಂತಾಗುತ್ತಿದ್ದ ಭೂಮಿ ಹಸಿರು ರೂಪ ಪಡೆಯುತ್ತಿದೆ. ರೈತರಿಗೆ ಅಗತ್ಯವಾದ ಕೃಷಿ ಸಾಧನೋಪಕರಣಗಳ ಪೂರೈಕೆಗೆ ಕೃಷಿ ಇಲಾಖೆ ಗಮನ ಹರಿಸಬೇಕು. ಬಿತ್ತನೆ ಬೀಜ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಬೇಕು.

–ಹೊನ್ನೇಗೌಡ ಅಕ್ಕಿ ಮಂಚನಹಳ್ಳಿ ಕೆ.ಆರ್‌.ಪೇಟೆ

ಅಲ್ಪಾವಧಿ ಬೆಳೆಯಿಂದ ಹಣ ಕಳೆದ ಏಳೆಂಟು ತಿಂಗಳಿಂದ ಮಳೆ ಇಲ್ಲದೇ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ ಇದೀಗ ಮುಂಗಾರು ಆರಂಭವಾಗಿದ್ದು ರೈತರಲ್ಲಿ ಸಂತಸ ತರಿಸಿದೆ. ಮಂಗಾರು ಕೃಷಿ ಆರಂಭವಾಗುವ ಮೊದಲು ಎಳ್ಳು ಅಲಸಂದೆ ಹೆಸರು ಮುಂತಾದ ಅಲ್ಪಾವಧಿ ಬೆಳೆ ಬೆಳೆದುಕೊಂಡರೆ ಆರ್ಥಿಕವಾಗಿ ಸದೃಢರಾಗಬಹುದು.

–ಜಯಮ್ಮ ರೈತ ಮಹಿಳೆ ಮಳವಳ್ಳಿ

ಹೂವು ಕೃಷಿಗೆ ಆದ್ಯತೆ ಹೊಲ ಉತ್ತು ಸಿದ್ಧಮಾಡಿಕೊಂಡಿದ್ದೇವೆ ನಮ್ಮೂರಲ್ಲಿ ಅಲಸಂದೆ ಬಿತ್ತನೆ. ಸೇವಂತಿಗೆ ಸಸಿ ನೆಡುತ್ತೇವೆ. ಮಳೆರಾಯ ಈ ಬಾರಿ ನಮ್ಮ ಕೈಹಿಡಿಯುತ್ತಾನೆ ಎಂಬ ನಂಬಿಕೆ ಇದೆ. ಹೂವಿನ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ.

– ತಿಮ್ಮಮ್ಮ ಅಂತನಹಳ್ಳಿ ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.