ಮಂಡ್ಯ: ನಾಗಮಂಗಲ ಪಟ್ಟಣದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಈಚೆಗೆ ನಡೆದ ಗಲಭೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ ಎಂಬ ಆರೋಪದ ಮೇರೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಾಗಮಂಗಲ ಗಲಭೆಯು ನಿಯಂತ್ರಣಕ್ಕೆ ಬಂದಿದ್ದರೂ, ಎಲ್ಲೋ ನಡೆದಿರುವ ಘಟನೆಯ ಚಿತ್ರಗಳನ್ನು ನಾಗಮಂಗಲ ಪಟ್ಟಣದಲ್ಲಿ ನಡೆದಿದೆ ಎಂದು ಬಿಂಬಿಸಿ ಸಮಾಜದಲ್ಲಿ ದೊಂಬಿ, ಗಲಭೆಗೆ ಪ್ರಚೋದನೆ ಉಂಟು ಮಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ದೂರಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರು ಗಣೇಶ ಮೂರ್ತಿಯನ್ನು ತಬ್ಬಿ ಹಿಡಿದುಕೊಂಡು ಹೋಗುತ್ತಿರುವ, ಪೊಲೀಸ್ ವಾಹನದಲ್ಲಿ ಮೂರ್ತಿಯನ್ನು ಇಟ್ಟಿರುವ ಫೋಟೊಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೋಭಾ ಕರಂದ್ಲಾಜೆ ಹಂಚಿಕೊಂಡಿದ್ದರು. ‘ಕಲ್ಲುತೂರಿ, ಬೆಂಕಿ ಹಚ್ಚಿದವರನ್ನು ರಕ್ಷಿಸಿ, ಗಣೇಶ ಮೂರ್ತಿಯನ್ನು ಬಂಧಿಸಲಾಗಿದೆ’ ಎಂದು ಸುಳ್ಳು ಮಾಹಿತಿಯನ್ನು ಪೋಸ್ಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಆರ್.ಅಶೋಕ್ ಅವರು ಎಲ್ಲೋ ನಡೆದಿರುವ ಎರಡು ವಿಡಿಯೊ ತುಣುಕುಗಳನ್ನು ಪೋಸ್ಟ್ ಮಾಡಿ, ನಾಗಮಂಗಲ ಗಲಭೆ ವೇಳೆ ಮೂವರು ಕಿಡಿಗೇಡಿಗಳು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಪೋಸ್ಟ್ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಪಟ್ಟಣ ಠಾಣೆಯ ಪೊಲೀಸ್ ಸಿಬ್ಬಂದಿ ರಮೇಶ್ ನೀಡಿದ ದೂರಿನ ಮೇರೆಗೆ ನಾಗಮಂಗಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.