ನಾಗಮಂಗಲ: ಸೇವಂತಿಗೆ ಸೇರಿದಂತೆ ವಿವಿಧ ಬಗೆಯ ಹೈಬ್ರಿಡ್ ತಳಿಯ ಹೂವಿನ ಬೇಸಾಯ ಮಾಡಿ ಲಾಭ ಗಳಿಸುವ ಮೂಲಕ ಶಿವನಹಳ್ಳಿ ಯುವ ರೈತ ಎಸ್.ಜೆ. ಮಂಜೇಗೌಡ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ.
ತಾಲ್ಲೂಕಿನ ಶಿವನಹಳ್ಳಿ ಗ್ರಾಮದಲ್ಲಿರುವ ತಮ್ಮ 10 ಎಕರೆ ಜಮೀನಿನಲ್ಲಿ ಮಂಜೇಗೌಡ ಅವರು ಪುಷ್ಪ ಕೃಷಿಯನ್ನು 25 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ನಾಲ್ಕು ಕೊಳವೆ ಬಾವಿಗಳಿಂದ ಗ್ರಾಮದ ಸುತ್ತ ತುಂಡುತುಂಡಾಗಿ ಹಂಚಿಕೆಯಾಗಿರುವ ಜಮೀನಿಗೆ ಪೈಪ್ ಲೈನ್ ಮಾಡಿಕೊಂಡು, ಹೂವು ಮತ್ತು ತರಕಾರಿ ಬೇಸಾಯ ಮಾಡುತ್ತಿದ್ದಾರೆ.
ನೀರಿನ ಕೊರತೆಯಾಗದಂತೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಪುಷ್ಪ ಕೃಷಿ ಜೊತೆಗೂ ಇತರೆ ಬೆಳೆಗಳಿಗೂ ಒತ್ತು ನೀಡಿರುವುದು ವಿಶೇಷ.
ಮಾರಿಗೋಲ್ಡ್, ಗುಲಾಬಿ, ಮಿರಾಬಲ್ ಗುಲಾಬಿ, ಸೇವಂತಿಗೆ ಸೇರಿದಂತೆ ವಿವಿಧ ತಳಿಗಳಾದ ಐಶ್ವರ್ಯ, ಕುಪನ್, ಸೆಂಟ್ ಎಲ್ಲೋ, ಪೂರ್ಣಿಮಾ ಹೈಬ್ರೀಡ್ ಹೂವುಗಳನ್ನು ನಿರಂತರವಾಗಿ ಬೆಳೆಯುತ್ತಾರೆ. ಇವರು ಬೆಳೆಯುವ ಹೂವುಗಳಲ್ಲಿ ಸೆಂಟ್ ಎಲ್ಲೋ, ಪೂರ್ಣಿಮಾ ತಳಿಯ ಹೂವುಗಳಿಗೆ ಹೆಚ್ಚು ಬೇಡಿಕೆ ಇದೆ. ಹೂವಿನ ಆದಾಯದಿಂದಲೇ ಜಮೀನು, ಟ್ರ್ಯಾಕ್ಟರ್ ಖರೀದಿ ಮಾಡಿ, ಕೈತುಂಬ ಆದಾಯ ಗಳಿಸುತ್ತಿದ್ದಾರೆ.
ಹೂವು ಮತ್ತು ತರಕಾರಿ ಬೆಳೆಯಲು ವಾರ್ಷಿಕ ₹3 ಲಕ್ಷ ಖರ್ಚು ಮಾಡುತ್ತಾರೆ. ಇವರಿಗೆ ಕಾರ್ಮಿಕರು ಮತ್ತು ಇತರೆ ಎಲ್ಲಾ ಖರ್ಚನ್ನು ಕಳೆದು ₹6 ಲಕ್ಷ ಆದಾಯ ಸಿಗುತ್ತಿದೆ. ಅವಿಭಕ್ತ ಕುಟುಂಬದಲ್ಲಿ ಒಟ್ಟು 15 ಜನರಿದ್ದು, ಎಲ್ಲರೂ ಸಹ ಇವರ ಕೃಷಿ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
‘ಸ್ಥಳೀಯ ಮಾರುಕಟ್ಟೆಗೆ ಹೂ ಪೂರೈಸಲು ಕುಟುಂಬದ ಸದಸ್ಯರೇ ಹೂ ಕಟ್ಟಿಕೊಟ್ಟು ನೆರವಾಗಿದ್ದಾರೆ. ಕೃಷಿ ಸಾಧನೆ ಗಮನಿಸಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಗತಿಪರ ರೈತ ಪ್ರಶಸ್ತಿ, ಉತ್ತಮ ರೈತ ಪ್ರಶಸ್ತಿ ಸೇರಿದಂತೆ ಹಲವು ಸಂಘ– ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ’ ಎಂದು ಹೆಮ್ಮೆಯಿಂದ ಮಂಜೇಗೌಡ ಹೇಳುತ್ತಾರೆ.
ಬೀನ್ಸ್, ಎಲೆ ಕೋಸು, ಟೊಮೆಟೊ, ಕ್ಯಾಪ್ಸಿಕಂ, ಬಜ್ಜಿ ಮೆಣಸಿನಕಾಯಿ, ಸಾಂಬರ್ ಸೌತೆ, ಸುನಾಮಿ, ಸೌತೆಕಾಯಿ, ಕಲ್ಲಂಗಡಿ, 450 ತೆಂಗು ಬೆಳೆದಿದ್ದಾರೆ. ಜತೆಗೆ ಕೋಳಿ, ಹಸು ಸಾಕಣೆಯನ್ನೂ ಮಾಡುತ್ತಿದ್ದಾರೆ. ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡು, ನೀರಿನ ಬರ ಬಾರದ ರೀತಿ ನೋಡಿಕೊಂಡಿದ್ದಾರೆ.
ಹೂವಿನ ಬೇಸಾಯದ ಜೊತೆ ಮಿಶ್ರ ಬೇಸಾಯ ಮಾಡಿದರೆ ಉತ್ತಮ ಆದಾಯ ಪಡೆಯಬಹುದು. ಮಿಶ್ರಬೆಳೆ ಬೆಳೆಯಲ್ಲಿ ಯಶಸ್ಸು ಸಾಧಿಸಿರುವ ಎಸ್.ಜೆ.ಮಂಜೇಗೌಡ ಅವರ ಕೃಷಿ ಪ್ರೀತಿ ರೈತರಿಗೆ ಮಾದರಿಯುವರಾಜ್ ಕೃಷಿ ಅಧಿಕಾರಿ ನಾಗಮಂಗಲ
ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು ಮತ್ತು ಮಾರುಕಟ್ಟೆ ಹೇಗೆ ಕಂಡುಕೊಳ್ಳಬೇಕು ಎಂಬುದನ್ನು ಅರಿತುಕೊಂಡರೆ ಯಶಸ್ಸು ಕಟ್ಟಿಟ್ಟಬುತ್ತಿ. ಶ್ರದ್ಧೆಯಿಂದ ಕೃಷಿ ಮಾಡಿದರೆ ಭೂತಾಯಿ ಕೈಹಿಡಿಯುತ್ತಾಳೆಎಸ್.ಜೆ. ಮಂಜೇಗೌಡ ಯುವ ರೈತ ಶಿವನಹಳ್ಳಿ
Quote -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.