ಭಾರತೀನಗರ: ಪೂಜಾ ಕುಣಿತ, ಡೊಳ್ಳು, ಕಂಸಾಳೆ, ವೀರಗಾಸೆ... ಹೀಗೆ ಜಾನಪದ ಕುಣಿತಗಳಲ್ಲೂ ಸೈ ಎನಿಸಿಕೊಂಡಿರುವ ಸುಂದರೇಶ ಅವರಿಗೆ ಕಲೆಗಳೆಂದರೆ ಪಂಚಪ್ರಾಣ.
ತನ್ನ ಕುಣಿತದಿಂದಲೇ ನಾಡಿನಾದ್ಯಂತ ಹೆಸರು ಮಾಡಿರುವ ಸುಂದರೇಶ ಅವರು ಸಮೀಪದ ಅರೆಚಾಕನಹಳ್ಳಿ ಗ್ರಾಮದವರು. ಚಿಕ್ಕ ವಯಸ್ಸಿಗೇ ಹಲವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಜನಾನುರಾಗಿಯಾಗಿದ್ದಾರೆ. ಜಾನಪದ ಕುಣಿತವೆಂದರೆ ಅಲ್ಲಿ ‘ಅರೆಚಾಕನಹಳ್ಳಿ ಸುಂದರೇಶ’ ಇದ್ದೇ ಇರುತ್ತಾರೆ. ಚಿಕ್ಕವಯಸ್ಸಿನಲ್ಲೇ ಎತ್ತರದ ಸಾಧನೆ ಅವರದು.
ಸುಂದರೇಶ ಅವರು ಕುಣಿತ ಅಲ್ಲದೇ ತಮಟೆ ಬಡಿಯುವುದರಲ್ಲೂ ಪ್ರಖ್ಯಾತಿ. ತಮಟೆ ಕುಣಿಕೆ ಹೆಗಲಿಗೇರಿಸಿ ತಮಟೆ ಬಡಿಯುತ್ತಿದ್ದರೆ ಅದರ ಚಂದಕ್ಕೆ ಮನಸೋಲದವರಿಲ್ಲ. ಅವರ ಮನಮೋಹಕ ಪೂಜಾ, ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕದವರಿಲ್ಲ. ನಾಡಿನ ಎಲ್ಲಾ ಉತ್ಸವಗಳಲ್ಲೂ ಇವರ ವೈವಿಧ್ಯಮಯ ಜಾನಪದ ಪ್ರದರ್ಶನ ಇದ್ದೇ ಇರುತ್ತದೆ.
ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ಮಟ್ಟದ ಯುವಜನ ಮೇಳ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸತತ 5 ಬಾರಿ ಚರ್ಮವಾದ್ಯ ಮೇಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಹೆಸರುವಾಸಿಯಾಗಿದ್ದಾರೆ. ರಾಜ್ಯ ಹಾಗೂ ಅಂತರ ರಾಜ್ಯ ವಿಶ್ವವಿದ್ಯಾಲಯ ಮಟ್ಟದ ಯುವ ಜನೋತ್ಸವ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸತತ 3 ಬಾರಿ ಪ್ರಥಮ ಬಹುಮಾನ ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ.
ದಸರಾ, ಹಂಪಿ ಉತ್ಸವಗಳಲ್ಲಿ ತಮ್ಮ ಕಲಾ ಪ್ರದರ್ಶನ ಮೆರೆದಿದ್ದಾರೆ. ಒಡಿಶಾ, ದೆಹಲಿ ಸೇರಿದಂತೆ ವಿವಿಧೆಡೆ ಜನಪದ ಕುಣಿತದ ಸೊಬಗನ್ನು ಪಸರಿಸಿದ್ದಾರೆ. ಅಲ್ಲದೇ ನೂರಾರು ಯುವಕರಿಗೆ ಜನಪದ ಕುಣಿತದ ತರಬೇತಿ ನೀಡಿ, ಅವರಿಂದ ಹಲವು ವೇದಿಕೆಗಳಲ್ಲಿ ಪ್ರದರ್ಶನ ಕೊಡಿಸಿ, ಉತ್ತಮ ಜನಪದ ಗುರುಗಳಾಗಿ ರೂಪುಗೊಂಡಿದ್ದಾರೆ.
ಸ್ವತಃ ಇವರೇ ಚರ್ಮ ವಾದ್ಯಗಳನ್ನು ತಯಾರು ಮಾಡುವ ಕಲೆಯನ್ನು ಕಲಿತುಕೊಂಡಿದ್ದಾರೆ. ತಮಟೆ, ನಗಾರಿ, ಪಾರಸಿ, ಅರೆ, ಹೆಬ್ಬಾರೆಗಳನ್ನು ಮಾಡಿಕೊಡುತ್ತಾರೆ. ಸುಂದರೇಶ ಕುಣಿತದಲ್ಲಷ್ಟೇ ಖ್ಯಾತಿ ಹೊಂದಿಲ್ಲ. ಜಾನಪದದ ಅಧ್ಯಯನದಲ್ಲೂ ಹಾಗೂ ವ್ಯವಸಾಯದಲ್ಲೂ ಪ್ರತಿಭೆ ತೋರಿದ್ದಾರೆ.
ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ಜಾನಪದ ಪದವಿ ಪಡೆದು, ಮೈಸೂರು ವಿಶ್ವ ವಿದ್ಯಾಲಯದಲ್ಲಿ ಎಂ.ಎ, ಜಾನಪದದಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿ ಚಿನ್ನದ ಪದಕ ಗಳಿಸಿದ್ದಾರೆ. ಪ್ರಸ್ತುತ ಮೈಸೂರು ವಿಶ್ವ ವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಡಾ.ನಂಜಯ್ಯ ಹೊಂಗನೂರು ಅವರ ಮಾರ್ಗದರ್ಶನದಲ್ಲಿ ‘ಮಂಡ್ಯ ಜಿಲ್ಲೆಯ ಜನಪದ ವಾದ್ಯಗಳು’ ಎಂಬ ವಿಷಯದಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುತ್ತಿದ್ದಾರೆ.
ಪಿತ್ರಾರ್ಜಿತವಾಗಿ ಬಂದಿರುವ 1 ಎಕರೆ ಜಮೀನಿನ ಜೊತೆಗೆ ಬೇರೆಯವರ 2 ಎಕರೆ ಜಮೀನನ್ನು ಭೋಗ್ಯಕ್ಕೆ ಪಡೆದು ರಾಗಿ, ಕಬ್ಬು ಬೆಳೆಯುತ್ತಿದ್ದಾರೆ. ಜೊತೆಜೊತೆಗೆ ಹೈನುಗಾರಿಕೆಯಲ್ಲೂ ತೊಡಗಿದ್ದಾರೆ. ತನ್ನ 9 ವರ್ಷದ ಪುತ್ರ ಉಲ್ಲಾಸ್ ಅವರಿಗೆ ಈಗಲೇ ಜನಪದ ನೃತ್ಯ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ. ಪತ್ನಿ ಕೆ.ಎಸ್.ಸವಿತಾ, 7 ವರ್ಷದ ಪುತ್ರಿ ಎಸ್. ಕೃತಿಕಾ ಸುಂದರೇಶ ಅವರ ಸಾಧನೆಗೆ ಸ್ಫೂರ್ತಿಯಾಗಿದ್ದಾರೆ. ಅವರ ಸಂಪರ್ಕಕ್ಕೆ ಮೊ: 9980306603.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.