ಶ್ರೀರಂಗಪಟ್ಟಣ: ಸೋಮವಾರ ಮುಂಜಾನೆ ನಿಧನರಾದ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಹಲವು ವರ್ಷಗಳ ಕಾಲ ಇಲ್ಲಿಗೆ ಸಮೀಪದ ಗಂಜಾಂನಲ್ಲಿ ಆಡಿ ಬೆಳೆದಿದ್ದಾರೆ.
ಪ್ರೊ.ವೆಂಕಟಸುಬ್ಬಯ್ಯ ಅವರ ತಂದೆ ತಿಮ್ಮಣ್ಣಯ್ಯ ಮೈಸೂರು ಅರಮನೆಯ ವಿದ್ವಾಂಸರಾಗಿದ್ದರು. ಗಂಜಾಂನ ಕರಡಿ ಮಾರಮ್ಮ ದೇವಾಲಯದ ಪಕ್ಕದ ಹೆಂಚಿನ ಮನೆಯಲ್ಲಿ ತಿಮ್ಮಣ್ಣಯ್ಯ ಅವರು ಪತ್ನಿ ಸುಬ್ಬಮ್ಮ ಮತ್ತು ಮಕ್ಕಳ ಜತೆ ವಾಸವಾಗಿದ್ದರು.
ವೆಂಕಟಸುಬ್ಬಯ್ಯ ಅವರು ತಮ್ಮ ತಾಯಿಯ ತವರು ಕೈಗೋನಹಳ್ಳಿ ಯಲ್ಲಿ ಹುಟ್ಟಿದರೂ ನಾಲ್ಕಾರು ವರ್ಷ ಗಂಜಾಂನಲ್ಲೇ ಇದ್ದರು. ನಂತರ ಮೈಸೂರಿಗೆ ಅವರ ಕುಟುಂಬ ಸ್ಥಳಾಂತರವಾಯಿತು.
ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು 2004ರಲ್ಲಿ ಪಟ್ಟಣದಲ್ಲಿ ನಡೆದ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆ ಕಾರ್ಯಕ್ರಮದಲ್ಲಿ, ಗಂಜಾಂನಲ್ಲಿ ತಾವು ಕಳೆದ ತಮ್ಮ ಬಾಲ್ಯದ ದಿನಗಳನ್ನು ಅವರು ಮೆಲುಕು ಹಾಕಿದ್ದರು. ಕಾವೇರಿ ನದಿಯಲ್ಲಿ ಈಜಾಟ, ತೋಟಗಳಿಗೆ ನುಗ್ಗಿ ಸೀಬೆ, ಮಾವು, ಸಪೋಟ ತಿನ್ನುತ್ತಿದ್ದ ಪ್ರಸಂಗಗಳನ್ನು ಹಂಚಿಕೊಂಡಿದ್ದರು. ದೊಡ್ಡ ಗೋಸಾಯಿಘಾಟ್, ಚಿಕ್ಕ ಗೋಸಾಯಿಘಾಟ್, ಚಮನ್ ಬಯಲು ಪ್ರದೇಶಗಳಲ್ಲಿ ಅಡ್ಡಾಡಿದ ಕ್ಷಣಗಳನ್ನು ಜನರಿಗೆ ಕಥೆಯಂತೆ ವರ್ಣಿಸಿದ್ದರು.
ಇದಾದ ಕೆಲವು ವರ್ಷಗಳ ಬಳಿಕ ದೊಡ್ಡ ಗೋಸಾಯಿಘಾಟ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಕಸಾಪ ತಾಲ್ಲೂಕು ಘಟಕದ ಅಂದಿನ ಅಧ್ಯಕ್ಷ ಸಿ.ಪುಟ್ಟಸ್ವಾಮಿ ಪ್ರೊ. ಜಿ.ವೆಂಕಟಸುಬ್ಬಯ್ಯ ಅವರನ್ನು ಕರೆ ತಂದಿದ್ದರು. ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಪ್ರೊ.ಜೀವಿ ಅವರನ್ನು ಪಟ್ಟಣಕ್ಕೆ ಕರೆಸಿ ‘ಪೌರ ಸನ್ಮಾನ’ ನೀಡಲಾಗಿತ್ತು. ‘ಊರಿನ ಮುಖ್ಯ ಬೀದಿಗಳಲ್ಲಿ ಪೂರ್ಣಕುಂಭ ಸಹಿತ ಸಂಭ್ರಮದ ಮೆರವಣಿಗೆ ಮಾಡಿ ಗೌರವಿಸಿದ್ದೆವು. ಅಂದು ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು’ ಎಂದು ಸಿ. ಪುಟ್ಟಸ್ವಾಮಿ ಹೇಳುತ್ತಾರೆ.
‘ಪ್ರೊ.ಜಿ. ವೆಂಕಟಸಬ್ಬಯ್ಯ ಅವರು ಘನ ವಿದ್ವಾಂಸರಾಗಿದ್ದು, ತಮ್ಮ ಪಾಂಡಿತ್ಯದ ಕಾರಣಕ್ಕೆ ನಾಡಿನಾದ್ಯಂತ ಹೆಸರಾಗಿದ್ದಾರೆ. ತಮ್ಮ ಹೆಸರಿನ ಜತೆಗೆ ಗಂಜಾಂ ಊರಿನ ಹೆಸರನ್ನೂ ಸ್ಥಾಯಿಗೊಳಿಸಿದ್ದಾರೆ. ಅವರು ನಮ್ಮೂರಿನವರು ಎಂಬುದು ಹೆಮ್ಮೆಯ ವಿಚಾರ. ಅವರ ಜತೆ ಕೆಲವು ದಿನಗಳಾದರೂ ಒಡನಾಟ ಹೊಂದಿದ್ದೆ ಎಂಬುದು ಖುಷಿಯ ಸಂಗತಿ. ಅವು ನನ್ನ ಜೀವನದ ಅವಿಸ್ಮರಣೀಯ ದಿನಗಳೂ ಹೌದು’ ಎಂದು ಹಿರಿಯ ಸಾಹಿತಿ ಗಂಜಾಂನ ಪ್ರೊ.ಎಂ.ಕರಿಮುದ್ದೀನ್ ಸ್ಮರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.