ADVERTISEMENT

ಆನೆ ಕಾಡಿಗಟ್ಟಲು ಕಾರ್ಯಾಚರಣೆ

ಸಿದ್ದಾಪುರ: ಅತ್ತಿಮಂಗಲ ವ್ಯಾಪ್ತಿಯ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಹಿಂಡು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 2:34 IST
Last Updated 20 ಆಗಸ್ಟ್ 2021, 2:34 IST
ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿರುವ ಕಾಡಾನೆ ಹಿಂಡು (ವಿಡಿಯೊ ಚಿತ್ರ). ಗುಹ್ಯ ಗ್ರಾಮದ ಎಂ.ಎಸ್. ವೆಂಕಟೇಶ್ ಅವರ ಗದ್ದೆಯನ್ನು ಕಾಡಾನೆಗಳು ತುಳಿದುಹಾಕಿರುವುದು
ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿರುವ ಕಾಡಾನೆ ಹಿಂಡು (ವಿಡಿಯೊ ಚಿತ್ರ). ಗುಹ್ಯ ಗ್ರಾಮದ ಎಂ.ಎಸ್. ವೆಂಕಟೇಶ್ ಅವರ ಗದ್ದೆಯನ್ನು ಕಾಡಾನೆಗಳು ತುಳಿದುಹಾಕಿರುವುದು   

ಸಿದ್ದಾಪುರ: ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ 15ಕ್ಕೂ ಹೆಚ್ಚು ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯ ನೆಲ್ಯಹುದಿಕೇರಿ, ವಾಲ್ನೂರು ತ್ಯಾಗತ್ತೂರು, ಅಭ್ಯತ್ ಮಂಗಲ, ಅತ್ತಿಮಂಗಲ ಸೇರಿದಂತೆ ಸುತ್ತಮುತ್ತಲ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟು, ದಾಂದಲೆ ನಡೆಸುತ್ತಿದ್ದರಿಂದ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಗುರುವಾರ ಬೆಳಿಗ್ಗೆ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ತಂಡ ಕಾರ್ಯಾಚರಣೆ ನಡೆಸಿತು. ಅತ್ತಿಮಂಗಲ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ರಸ್ತೆ ದಾಟಿಸಿ, ಅರಣ್ಯಕ್ಕೆ ಅಟ್ಟಲು ಸಿಬ್ಬಂದಿ ಮುಂದಾದರು. ಕಾಡಾನೆಗಳು ಒಂದು‌ ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಿದ್ದು, ಇಲಾಖೆ ಸಿಬ್ಬಂದಿ ಕೂಡ ಪಟಾಕಿ ಸಿಡಿಸಿ ದುಬಾರೆ ರಕ್ಷಿತಾರಣ್ಯಕ್ಕೆ ಅಟ್ಟಲು ಪ್ರಯತ್ನಿಸಿದರು. ಆದರೆ, ತೋಟದಲ್ಲಿಯೇ ಇವೆ.

ADVERTISEMENT

‘ಮರಿಗಳು ಇರುವುದರಿಂದ ಕಾಡಾನೆಗಳ ನಿಧಾನವಾಗಿ ಹೋಗುತ್ತಿವೆ. ಈಗಾಗಲೇ ನದಿ ಸಮೀಪದವರೆಗೆ ಹೋಗಿವೆ, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಕಾಡಾನೆಗಳು ನದಿ ದಾಟುತ್ತಿಲ್ಲ. ಶುಕ್ರವಾರ ಕಾವೇರಿ ನದಿ ದಾಟಿಸಿ ದುಬಾರೆ ಅರಣ್ಯಕ್ಕೆ ಅಟ್ಟಲಾಗುವುದು’ ಎಂದು ಕೂಡಕಂಡಿ ಸುಬ್ರಾಯ ಮಾಹಿತಿ ನೀಡಿದರು.

‘ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಬೇಕು’ ಎಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎ.ಸಿ.ಎಫ್ ನೆಹರೂ, ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ರವಿ ಉತ್ನಾಲ್, ಸಿಬ್ಬಂದಿಗಳಾದ ಸತೀಶ್, ನವೀನ್, ಪೊನ್ನಪ್ಪ, ಅಪ್ಪಸ್ವಾಮಿ, ಜಗದೀಶ್, ಹಿರಣ್, ತಿಲಕ್, ಆಸಿಫ್, ಚಾಲಕ ವಾಸು ಪಾಲ್ಗೊಂಡಿದ್ದರು.

ಮುಂದುವರಿದ ಹಾವಳಿ: ಹಲವು ದಿನಗಳಿಂದ ಗುಹ್ಯ ಗ್ರಾಮದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ನಿರಂತರವಾಗಿ ರೈತರ ಜಮೀನುಗಳಿಗೆ ದಾಳಿ ಮಾಡುತ್ತಿವೆ.‌ ಗುಹ್ಯ ಗ್ರಾಮದ ವಕೀಲರಾದ ಎಂ.ಎಸ್. ವೆಂಕಟೇಶ್, ಹೊಸೋಕ್ಲು ಕುಟುಂಬಸ್ಥರ ತೋಟದಲ್ಲಿ ಬಾಳೆ, ಅಡಿಕೆ, ಕಾಫಿ ಗಿಡಗಳನ್ನು ತುಳಿದು ನಾಶಗೊಳಿಸಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.