ADVERTISEMENT

ಸರ್ಕಾರ ತೆಗೆಯುವವರೆಗೂ ವಿರಮಿಸಲಾರೆ: ಎಚ್‌.ಡಿ ದೇವೇಗೌಡ

ಕಣ್ಣೀರು ನಮ್ಮ ವಂಶಕ್ಕೆ ಬಂದ ಬಳವಳಿ: ಎಚ್.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 23:40 IST
Last Updated 8 ನವೆಂಬರ್ 2024, 23:40 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ   

ಪಾಂಡವಪುರ: ‘ನನ್ನ 62 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ರಾಜ್ಯ ಸರ್ಕಾರವನ್ನು ನೋಡಿಲ್ಲ. ರಾಜ್ಯದ ಉಳಿವಿಗಾಗಿ ಶಕ್ತಿಮೀರಿ ಹೋರಾಡುವೆ. ಈ ಸರ್ಕಾರವನ್ನು ತೆಗೆಯುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.

‘ಕೊನೆಯುಸಿರು ಇರುವವರೆಗೂ ರಾಜಕೀಯ ಹೋರಾಟ ಮಾಡುತ್ತೇನೆ. ಇದು ದೇವೇಗೌಡನ ಹುಟ್ಟುಗುಣ. ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತ ಎಂದಿಗೂ ಹೇಳಿಲ್ಲ. ಈಗ ನಿಖಿಲ್‌ ಗೆಲುವಿಗಾಗಿ ಹೋರಾಟ ಮಾಡ್ತಿದ್ದೀನಿ’ ಎಂದು ಹೇಳಿದರು. 

ತಾಲ್ಲೂಕಿನ ಎಲೆಕೆರೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಒಡೆತನದ ಎಸ್‌.ಟಿ.ಜಿ. ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಸತಿ ನಿಲಯವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ದೇವೇಗೌಡ, ಕುಮಾರಸ್ವಾಮಿ ಮತ್ತು ನಿಖಿಲ್ ಕಣ್ಣೀರು ಹಾಕುತ್ತಾರೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ನೋವಾದಾಗ ಹೃದಯ ಮರುಗುತ್ತೆ. ಆಗ ಕಣ್ಣೀರು ಬರುತ್ತೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ’ ಎಂದರು.

‘ಕೊತ್ವಾಲ್ ರಾಮಚಂದ್ರನ ಬಳಿ ನೂರು ರೂಪಾಯಿಗೆ ಕೆಲಸ ಪ್ರಾರಂಭಿಸಿದ ಡಿ.ಕೆ.ಶಿವಕುಮಾರ್ ಅವರು ರೈತರು ಮತ್ತು ನಾಡಿನ ಜನತೆಗಾಗಿ ಯಾವತ್ತಾದರೂ ಕಣ್ಣೀರು ಹಾಕಿದ್ದನ್ನು ನೋಡಿದ್ದೀರಾ? ನೆಹರು, ಇಂದಿರಾ ಗಾಂಧಿ ಅಧ್ಯಕ್ಷರಾಗಿದ್ದ ಪಕ್ಷದಲ್ಲಿ ಅಧ್ಯಕ್ಷರಾಗಿರುವ ಅವರು ಕಣ್ಣೀರು ಹಾಕ್ತಾರಾ’ ಎಂದು ಕೇಳಿದರು.

‘ಡಿ.ಕೆ.ಶಿವಕುಮಾರ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ ವ್ಯಕ್ತಿತ್ವವನ್ನು ಹೋಲಿಸುವುದು ಬೇಡ. ರಾಮನಗರವನ್ನು ಕುಮಾರಸ್ವಾಮಿ ಜಿಲ್ಲೆಯನ್ನಾಗಿ ಘೋಷಿಸಿದರು. ಈಗ ಅದನ್ನು ಬೆಂಗಳೂರಿಗೆ ಸೇರಿಸಿದರೆ ಅನುಕೂಲವಾಗುತ್ತದೆ ಎಂದು ಶಿವಕುಮಾರ್ ಹೇಳುತ್ತಿದ್ದಾರೆ. ಅವರ ತಲೆಯಲ್ಲಿ ಏನೇನು ಇದೆಯೋ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.