ಮಳವಳ್ಳಿ (ಮಂಡ್ಯ): ಕಳೆದ ಒಂದೂವರೆ ವರ್ಷದಿಂದ ನೀರಿಲ್ಲದೇ ಭಣಗುಡುತ್ತಿದ್ದ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಗಗನಚುಕ್ಕಿ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ.
ಜಲಪಾತದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಭಾನುವಾರದಿಂದ ಪ್ರವಾಸಿಗರ ದಂಡು ಹರಿದುಬರುತ್ತಿದೆ.
ಕಾವೇರಿ ಕೊಳ್ಳದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಗಗನಚುಕ್ಕಿ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ.
ಜಲಪಾತದ ಸೊಗಸನ್ನು ಕಣ್ತುಂಬಿಕೊಳ್ಳಲು ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರ ದಂಡೇ ಜಲಪಾತದತ್ತ ಹರಿದು ಬರುತ್ತಿದೆ.
ಎತ್ತರದಿಂದ ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತ ಹಾಗೂ ಕಲ್ಲು ಬಂಡೆಗಳ ನಡುವೆ ಭೋರ್ಗರೆಯುವ ಕೊಳ್ಳೇಗಾಲದ ಭರಚುಕ್ಕಿ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಎರಡೂ ಜಲಧಾರೆಗಳು ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಗಡಿಯಂಚಿನಲ್ಲೇ ಇವೆ.
ಕೊಡಗಿನ ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ನದಿಯು ಬೆಟ್ಟಗುಡ್ಡ, ಕಾಡುಮೇಡುಗಳ ಮೂಲಕ ಸಾಗಿ ಶಿವನಸಮುದ್ರ ತಲುಪುತ್ತಿದ್ದಂತೆಯೇ ಧುಮುಕಿ ಗಗನಚುಕ್ಕಿಯಾಗಿ, ಬಳಿಕ ಭರಚುಕ್ಕಿಯಾಗಿ ಹರಿಯುತ್ತದೆ.
ಈ ದೃಶ್ಯ ವೈಭವವು ನೋಡುಗರನ್ನು ರೋಮಾಂಚನಗೊಳಿಸುತ್ತದೆ.
ಶಿವನ ಸಮುದ್ರದಲ್ಲಿ ಕಾವೇರಿ ನದಿ ಸುಮಾರು 419 ಅಡಿ ಎತ್ತರದಿಂದ ಕಂದಕಕ್ಕೆ ಧುಮುಕುತ್ತದೆ. ಬಂಡೆಯ ಮೇಲಿಂದ ಭೋರ್ಗರೆಯುವ ಕಾವೇರಿಯ ಸೊಬಗನ್ನು ಹಿನ್ನೆಲೆಯಾಗಿರಿಸಿಕೊಂಡು ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.