ಮಂಡ್ಯ: ‘ದೇವಾಲಯಗಳ ನಾಡು’ ನಾಗಮಂಗಲದಲ್ಲಿ ನಡೆದ ಗಲಭೆ ಪ್ರಕರಣ ಎರಡು ಕೋಮುಗಳ ವ್ಯಾಪಾರಿಗಳ ಬದುಕನ್ನು ಬೀದಿಗೆ ದೂಡಿದೆ. ಕೋಮುದ್ವೇಷದ ಸಂಕೋಲೆಗೆ ಸಿಲುಕಿದ ಯುವಕರ ಕುಟುಂಬಸ್ಥರು ಕಣ್ಣೀರು ಸುರಿಸುವಂತಾಗಿದೆ. ಪರಿಸ್ಥಿತಿ ಮೇಲ್ನೋಟಕ್ಕೆ ಬೂದಿ ಮುಚ್ಚಿದ ಕೆಂಡದಂತಿದೆ.
ಇಲ್ಲಿ ಹಲವು ವರ್ಷಗಳ ಹಿಂದೆ ಗಣೇಶ ಹಬ್ಬದಲ್ಲಿ ಮುಸ್ಲಿಮರೂ ಬಂದು ಪೂಜೆ ಮಾಡಿಸುತ್ತಿದ್ದರು. ಸೌಹಾರ್ದದ ಪ್ರತೀಕವಾಗಿದ್ದ ಹಬ್ಬವು ಕಿಡಿಗೇಡಿಗಳ ಕೃತ್ಯದಿಂದಾಗಿ ಜನರ ನೆಮ್ಮದಿಯನ್ನೇ ಕಸಿದಿದೆ. ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಪೊಲೀಸರು ಪಟ್ಟಣಕ್ಕೆ ಸರ್ಪಗಾವಲು ಹಾಕಿದ್ದಾರೆ.
ಮುಜೀಬ್ ಎಂಬ ವ್ಯಾಪಾರಿ ₹25 ಲಕ್ಷ ವೆಚ್ಚದಲ್ಲಿ ಇಟ್ಟಿದ್ದ ಪಾತ್ರೆ ಅಂಗಡಿ ಕಣ್ಣ ಮುಂದೆಯೇ ಹಾನಿಗೊಂಡಿದೆ. ಹಾನಿಗೊಂಡ ಅಂಗಡಿ ಮುಂದೆ ಕುಳಿತಿದ್ದ ಅವರು ‘ಬ್ಯಾಂಕಿನ ಸಾಲ ತೀರಿಸುವುದು ಹೇಗೆ’ ಎಂದು ಮರುಗಿದರು. ‘ವಿಷ ಕುಡಿಯುವುದೇ ಉಳಿದಿರುವ ದಾರಿ’ ಎಂದು ರೋದಿಸಿದರು.
‘ಬಟ್ಟೆ ಶೋರೂಂಗೆ ಬೆಂಕಿ ಹಚ್ಚುತ್ತಾರೆಂಬ ವಿಷಯ ತಿಳಿದು ಓಡಿ ಬಂದೆ. ಯುವಕರು ಬಾಟಲಿ, ಮಾರಕಾಸ್ತ್ರ ಹಿಡಿದು ದಾಳಿಗೆ ಮುಂದಾದರು. ಪೊಲೀಸರೇ ಹೆದರಿ ಓಡಲು ಶುರು ಮಾಡಿದರು. ಪ್ರಾಣ ಉಳಿದರೆ ಸಾಕೆಂದು ನಾನೂ ಓಡಿದೆ., 7 ಕಾರ್ಮಿಕರೊಂದಿಗೆ ಬೀದಿಗೆ ಬಿದ್ದಿದ್ದೇನೆ’ ಎಂದು ಸಾಗರ ಟೆಕ್ಸ್‌ಟೈಲ್ ಮಾಲೀಕ ಭೀಮರಾಜ್ ಕಣ್ಣೀರು ಹಾಕಿದರು.
ಘಟನೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ, ಮಾಜಿ ಸಚಿವ ಸಿ.ಟಿ.ರವಿ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಗಲಭೆಯಲ್ಲಿ ನಷ್ಟ ಹೊಂದಿದ ಅಂಗಡಿ ಮಾಲೀಕರ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಲಿಸಿದರು. ‘ತಾಲ್ಲೂಕಿನ ಪರಿಸ್ಥಿತಿ ಶಾಂತವಾಗಿತ್ತು. ನೆನ್ನೆ ಇಂಥ ಘಟನೆ ಜರುಗಿರುವುದು ಬೇಸರದ ಸಂಗತಿಯಾಗಿದೆ. ಯಾವುದೇ ಒಂದು ಕೋಮಿಗೆ ಪ್ರಾಮುಖ್ಯ ನೀಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ’ ಎಂದು ಹೇಳಿದರು.
ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದೇ ತಪ್ಪಾ?: ‘27 ವರ್ಷಗಳಿಂದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದೇವೆ. ಬೇರೆ ಕೋಮಿನವರು ಮಾಡಿದ ತಪ್ಪಿಗೆ, ಮೂರ್ತಿ ಕೂರಿಸಿದ್ದವರನ್ನೇ ಏಕೆ ಪೊಲೀಸರು ಬಂಧಿಸಿದ್ದಾರೆ? ಮನೆಗಳಿಗೆ ಪೊಲೀಸರು ಮಧ್ಯರಾತ್ರಿ ಒಂದು ಗಂಟೆಗೆ ನುಗ್ಗಿದ್ದು ಏಕೆ? ಎಂದು ಬದ್ರಿಕೊಪ್ಪಲು ಮಹಿಳೆಯರು ಕೋಪವ್ಯಕ್ತಪಡಿಸಿದ್ದಾರೆ.
ಎರಡು ಕೋಮಿನವರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ‘ಬಂಧಿಸಿರುವ ಅಮಾಯಕ ಹುಡುಗರನ್ನು ಬಿಟ್ಟುಬಿಡಿ, ಅವರದ್ದೇನೂ ತಪ್ಪಿಲ್ಲ’ ಎಂದು ಗೋಗರೆದರು.
ಬೆರಳಚ್ಚು ತಂಡ ಭೇಟಿ: ಬೆರಳಚ್ಚು ತಂಡ ಭೇಟಿ ನೀಡಿ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದೆ. ಬೆಂಕಿ ಹಚ್ಚಿದ್ದು ಯಾರು? ಪೆಟ್ರೋಲ್ ಬಾಂಬ್ ಹಾಕಿದ್ದು ಯಾರು? ನಿಷೇಧಿತ ಸ್ಫೋಟಕವೇ? ಸ್ಫೋಟಕ ಬಳಸಲಾಗಿದೆಯೇ? ಎಂದು ಶೋಧ ನಡೆಸಿದೆ. ಸುಟ್ಟು ಕರಕಲಾದ ಅಂಗಡಿಗಳಿಗೆ ಪೊಲೀಸರೊಂದಿಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದೆ.
ಎಡಿಜಿಪಿ, ಐಜಿ, ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮುಖ್ಯವೃತ್ತ, ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಪೊಲೀಸರು ವಾಹನಗಳ ಮೂಲಕ ಗಸ್ತು ತಿರುಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.