ADVERTISEMENT

ಬೆಳಕವಾಡಿ ರಸ್ತೆಯ ಬದಿಯಲ್ಲಿ ಸುರಿದ ಕಸದ ರಾಶಿ

ಪ್ರಜಾವಾಣಿ ವಿಶೇಷ
Published 11 ಅಕ್ಟೋಬರ್ 2024, 6:45 IST
Last Updated 11 ಅಕ್ಟೋಬರ್ 2024, 6:45 IST
   

ಬೆಳಕವಾಡಿ: ಗ್ರಾಮದಲ್ಲಿ ಕಾಣುವ ಕಸದ ರಾಶಿಗಳು, ಹೂಳು ತುಂಬಿದ ಚರಂಡಿಗಳು, ಎಲ್ಲೆಂದರಲ್ಲಿ ಬೆಳೆದುನಿಂತಿರುವ  ಗಿಡಗಂಟಿಗಳು, ಹೆಚ್ಚುತ್ತಿರುವ ಹಾವು ಚೇಳಿನ ಕಾಟ, ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ...

ಹೌದು, ಬೋಪ್ಪೇಗೌಡನಪುರ (ಬಿ.ಜಿ.ಪುರ) ಹೋಬಳಿಯ ಬೆಳಕವಾಡಿ ಗ್ರಾಮ ಪಂಚಾಯಿತಿಯು ‘ಎ’ ಗ್ರೇಡ್ ಪಂಚಾಯಿತಿಗಳಲ್ಲಿ ಒಂದಾಗಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಒಟ್ಟು 6 ವಾರ್ಡ್‌ಗಳಿಂದ 18 ಸದಸ್ಯರ ಬಲ ಹೊಂದಿದೆ. ಇಷ್ಟಿದ್ದರೂ ಸ್ವಚ್ಛತೆ ಕಾಣದೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಪ್ರತಿ ವಾರ್ಡ್‌ಗಳಲ್ಲಿಯೂ ಕಸದ ರಾಶಿ ತುಂಬಿ ತುಳುಕುತ್ತಿದೆ. ಹೂಳು ತುಂಬಿದ ಚರಂಡಿಯಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣವಾಗಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚುವ ಆತಂಕ ಕಾಡಿದೆ. ಟಿ.ನರಸೀಪುರ, ಕೊಳ್ಳೇಗಾಲ, ಮಳವಳ್ಳಿ
ಮುಖ್ಯರಸ್ತೆ ಬದಿ ಜಂಗಮಯ್ಯನ ಕಟ್ಟೆ ಹಾಗೂ ಆದರ್ಶ ಶಾಲೆ ರಸ್ತೆಯ ಬಳಿ ಜನರು ಕಸ ವಿಲೇವಾರಿ ಮಾಡುತ್ತಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಗ್ರಾಮದ ಯುವಕರು.

ADVERTISEMENT

ರಾಶಿ ಬಿದ್ದಿರುವ ಕಸದ ಗುಡ್ಡೆಯನ್ನು ಕರಗಿಸುವ ಕೆಲಸ ಸಂಬಂಧಪಟ್ಟವರು ಮಾಡುತ್ತಿಲ್ಲ. ಇದನ್ನು ಯಾವಾಗ ತೆರವು ಮಾಡಿ ಸ್ವಚ್ಛ ಮಾಡುತ್ತಾರೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಬೀದಿ ನಾಯಿಗಳು ಕಸದ ರಾಶಿಯನ್ನು ಕಚ್ಚಿ ಎಳೆದಾಡಿ ರಸ್ತೆಯ ನಡುವೆ ಬಿಸಾಡುತ್ತವೆ, ಇದರಿಂದ ವಾಹನ ಸವಾರರಿಗೆ  ಕಿರಿಕಿರಿ ಆಗುತ್ತಿದೆ. ಕಸ ಕೊಳೆತು ಗಬ್ಬುನಾರುತ್ತಿದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ವಾಯುವಿಹಾರಿಗಳಿಗೂ ತೊಂದರೆಯಾಗಿದೆ ಎಂದು ಮುಖಂಡ ಆನಂದ್‌ ಆರೋಪಿಸುತ್ತಾರೆ.

3ನೇ ವಾರ್ಡಿನಲ್ಲಿ ರಸ್ತೆಗಳೆಲ್ಲಾ ಗುಂಡಿ ಬಿದ್ದು ಹಾಳಾಗಿವೆ. ಮಳೆಗಾಲದಲ್ಲಿ ಗುಂಡಿ ತುಂಬಾ ನೀರು ತುಂಬಿಕೊಂಡಿರುತ್ತದೆ. ಇದರಿಂದ ಕೆಸರು ಗದ್ದೆಯಾಗಿ ಸಾರ್ವಜನಿಕರು ತಿರುಗಾಡುವುದಕ್ಕೂ ತೊಂದರೆ ಆಗುತ್ತದೆ. ಈ ಎಲ್ಲ ಸಮಸ್ಯೆಗಳು ನಮ್ಮ ಗ್ರಾಮ
ಪಂಚಾಯಿತಿ ವ್ಯಾಪ್ತಿಗೆ ಒಳಪಡುವುದರಿಂದ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ವಹಿಸಬೇಕು ಎಂದು ಗ್ರಾಮದ ಯುವಕರಾದ ಪ್ರಶಾಂತ್, ಪ್ರಕಾಶ್ ಒತ್ತಾಯವಾಗಿದೆ.

ಸಮರ್ಪಕ ಕಸ ನಿರ್ವಹಣೆ ಜೊತೆಗೆ ರಸ್ತೆಯ ಗುಂಡಿ ಮುಚ್ಚುವ ಕೆಲಸ ಹಾಗೂ ಚರಂಡಿ ಸ್ವಚ್ಛತೆ ಅಗತ್ಯವಾಗಿ ಆಗಬೇಕು. ಸಮಸ್ಯೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿರುವುದರಿಂದ 
ತುರ್ತಾಗಿ ಗ್ರಾಮದ ಸಮಸ್ಯೆ ಬಗೆಹರಿಸದಿದ್ದರೆ ಪಂಚಾಯಿತಿಗೆ ಬೀಗ ಹಾಕಿಸುತ್ತೇವೆ ಎಂದು ಗ್ರಾಮದ ಮುಖಂಡರಾದ ಶಿವಮೂರ್ತಿ, ಮಹೇಶ್, ರವೀಶ್, ಶಿವು, ರವಿ ಎಚ್ಚರಿಕೆ ನೀಡಿದರು.

ಬೆಳಕವಾಡಿ ಗ್ರಾಮದ ಸಮಸ್ಯೆಯ ಅರಿವಿದೆ, ಈ ತಿಂಗಳಲ್ಲಿ ಸಭೆಯಲ್ಲಿ ಅಧಿಕಾರಿಗಳು ಮತ್ತು ಸದಸ್ಯರ ಜೊತೆ ಚರ್ಚಿಸಿ ಚರಂಡಿ ಸ್ವಚ್ಛತೆ ಕಾರ್ಯಕ್ಕೆ ಕ್ರಮ ವಹಿಸುವೆ
ವೆಂಕಟಪ್ಪ, ಅಧ್ಯಕ್ಷ, ಗ್ರಾ.ಪಂ.ಬೆಳಕವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.