ADVERTISEMENT

ಬೇಬಿಬೆಟ್ಟದ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಕುರಿಗಾಹಿಗೆ ಪತ್ತೆಯಾಯ್ತು ಸ್ಫೋಟಕಗಳು

ಬೇಬಿಬೆಟ್ಟ: ಕುರಿಗಾಹಿಗಳ ಕಣ್ಣಿಗ ಬಿದ್ದ ಸ್ಪೋಟಕ; ಶೋಧ ನಡೆಸಿದ್ದ ಸ್ಫೋಟಕ, ನಿಷ್ಕ್ರೀಯ ದಳದ ಅಧಿಕಾರಿಗಳ ತಂಡ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 9:46 IST
Last Updated 10 ಆಗಸ್ಟ್ 2021, 9:46 IST
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು   

ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಸೋಮವಾರ ಮತ್ತಷ್ಟು ಸ್ಫೋಟಕಗಳು ಕುರಿಗಾಹಿಗಳ ಕಣ್ಣಿಗೆ ಬಿದ್ದಿದೆ.

ಬನ್ನಂಗಾಡಿ ಗ್ರಾಮದ ವ್ಯಾಪ್ತಿಯ ಸರ್ವೇ ನಂ.24ರ ಗೋಮಾಳದಲ್ಲಿ 92 ಜಿಲೆಟಿನ್ ಟ್ಯೂಬ್‌ಗಳು, ಹಾಗೂ 50 ಮೀಟರ್ ಉದ್ದದ ಮೆಗ್ಗಾರ್ ಬ್ಲಾಸ್ಟ್‌ಗೆ ಬಳಸುವ ವಾಹಕ (ತಂತಿ) ಕುರಿಗಾಹಿಗಳ ಕಣ್ಣಿಗೆ ಬಿದ್ದಿದೆ. ತಕ್ಷಣ ಕಾರ್ಯೋನ್ಮುಖರಾದ ಕೆಆರ್‌ಎಸ್ ಪೊಲೀಸರು ಸ್ಥಳಕ್ಕೆ ತೆರಳಿ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಬಿಡಿಡಿಎಸ್‌ ತಂಡ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತೆರಳಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಸ್ಫೋಟಕ ವಸ್ತುಗಳ ಪತ್ತೆಗಾಗಿ ಕಳೆದ ಮೂರು ದಿನಗಳ ಕಾಲ ಸ್ಫೋಟಕ ಮತ್ತು ನಿಷ್ಕ್ರೀಯ ದಳದ ಅಧಿಕಾರಿಗಳ ತಂಡವು ಶೋಧ ನಡೆಸಿ, ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಿ ಕಾರ್ಯಾಚರ‌ಣೆಯನ್ನು ಮುಕ್ತಾಯಗೊಳಿಸಿದ್ದರು. ಬೇಬಿಬೆಟ್ಟ ಗಣಿಗಾರಿಕೆ ಪ್ರದೇಶದ ಚಿನಕುರಳಿ, ಹೊನಗಾನಹಳ್ಳಿ, ರಾಗಿಮುದ್ದನಹಳ್ಳಿ, ಶಿಂಡಭೋಗನಹಳ್ಳಿ ವ್ಯಾಪ್ತಿಯ ಕ್ವಾರಿ ಮತ್ತು ಕ್ರಷರ್‌ಗಳಲ್ಲಿ ನಿರಂತರ ಶೋಧ ಕಾರ್ಯ ನಡೆಸಿದ್ದರು. ಆದರೆ, ಶೋಧ ಕಾರ್ಯದಲ್ಲಿ ಮೊದಲನೇ ದಿನ ಹಲವು ಸ್ಫೋಟಕಗಳು ಪತ್ತೆಯಾಗಿದ್ದವು. ಎರಡನೇ ದಿನ ಮತ್ತು ಮೂರನೇ ದಿನ ಸ್ಫೋಟಕಗಳು ನಿರೀಕ್ಷಿತ ಮಟ್ಟದಲ್ಲಿ ಪತ್ತೆಯಾಗಿರಲಿಲ್ಲ. ಹೀಗಾಗಿ ಬೆಂಗಳೂರು, ಮೈಸೂರು, ಹಾಸನ ಮತ್ತು ಮಂಡ್ಯದಿಂದ ಬಂದಿದ್ದ ಸ್ಫೋಟಕ ಪತ್ತೆ ದಳ ವಾಪಾಸಾಗಿತ್ತು.

ಅವರು ಶೋಧ ನಡೆಸದೆ ಹಲವು ಸ್ಥಳಗಳಲ್ಲಿ ಸೋಮವಾರ ಸ್ಫೋಟಕಗಳು ಕುರಿಗಾಹಿಗಳ ಕಣ್ಣಿಗೆ ಬಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದವು. ಸ್ಫೋಟಕ ಪತ್ತೆ ದಳದ ಕಾರ್ಯವೈಖರಿಯ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ನೆಪ ಮಾತ್ರಕ್ಕೆ ಶೋಧ ನಡೆಸುವು ದನ್ನು ಬಿಟ್ಟು ಪ್ರಾಮಾಣಿಕವಾಗಿ ಶೋಧ ಕಾರ್ಯ ನಡೆಸಿದರೆ ಸಾವಿರಗಟ್ಟಳೆ ಸ್ಫೋಟಕಗಳು ಪತ್ತೆಯಾಗುತ್ತವೆ. ಮತ್ತಷ್ಟು ಶೋಧ ನಡೆಯಬೇಕಿದೆ ಎಂದು ಗಣಿಗಾರಿಕೆ ಪ್ರದೇಶದ ಸುತ್ತಲಿನ ಗ್ರಾಮಗಳು ಜನರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.