ನಾಗಮಂಗಲ: ಎರಡು ವರ್ಷಗಳಲ್ಲಿ ಕಡಿಮೆ ಮಳೆಯಾಗಿದ್ದರಿಂದ ಸೊರಗಿದ್ದ ದುಮ್ಮಸಂದ್ರ ಅಣೆಕಟ್ಟೆ ಮತ್ತು ಅಡವೀಕಟ್ಟೆ ಜಲಪಾತಗಳು ಈ ಬಾರಿ ಉತ್ತಮ ಮಳೆಯಿಂದಾಗಿ ಸೊಕ್ಕಿ ಹರಿದು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ.
ಮಳೆಗಾಲದ ಪ್ರಾರಂಭದಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ದುಮ್ಮಸಂದ್ರ ಅಣೆಕಟ್ಟೆ ಮತ್ತು ಅಡವೀಕಟ್ಟೆ ಜಲಪಾತಗಳು ಒಂದೆರಡು ವಾರದಿಂದ ಹಾಲ್ನೊರೆಯೊಂದಿಗೆ ಧುಮ್ಮಿಕ್ಕುತ್ತಿವೆ. ಸ್ಥಳೀಯರು ಮತ್ತು ಹೊರ ಪ್ರದೇಶಗಳ ಪ್ರವಾಸಿಗರ ವೀಕ್ಷಣೆಯ ತಾಣಗಳಾಗಿ ಬದಲಾಗಿವೆ.
ಮಳೆಯ ಪ್ರಮಾಣ ಕಡಿಮೆಯಾದಂತೆ ಇವುಗಳ ಸೊಬಗೂ ನಿಧಾನವಾಗಿ ಕಡಿಮೆಯಾಗುವುದು ವಾಡಿಕೆ. ಪಟ್ಟಣದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ದುಮ್ಮಸಂದ್ರ ಗ್ರಾಮದ ಬಳಿ ವೀರವೈಷ್ಣವಿ ನದಿಗೆ 150 ಉದ್ದ ಮತ್ತು 20 ಅಡಿಗೂ ಎತ್ತರದ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದ್ದು, ಜಲಾಶಯದಲ್ಲಿ ನೀರು ಹೆಚ್ಚಾದಾಗ ಹೊರ ಹರಿಯುವ ಹರಿಯುವ ಹಾಲ್ನೊರೆಯನ್ನು ನೋಡಲು ಎರಡು ಕಣ್ಣುಗಳು ಸಾಲದು.
ಬೆಂಗಳೂರು– ಮಂಗಳೂರು ಹೆದ್ದಾರಿಯ ವಡೇರಹಳ್ಳಿ ಗ್ರಾಮದ ಮಾರ್ಗದಿಂದ 3 ಕಿ.ಮೀ ಪ್ರಯಾಣವಾಗುತ್ತದೆ. ಜೊತೆಗೆ ಅಣೆಕಟ್ಟೆಯ ಉದ್ದಕ್ಕೂ ಬೆಳ್ನೊರೆ ಹರಡಿರುವುದನ್ನು ಕಣ್ತುಂಬಿಕೊಳ್ಳಲು ಹೊರಜಿಲ್ಲೆ, ಬೆಂಗಳೂರಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ವಿಶೇಷವಾಗಿದೆ.
ಪಟ್ಟಣದಿಂದ ಚೀಣ್ಯ ಮಾರ್ಗವಾಗಿ ಸುಮಾರು 20 ಕಿ.ಮೀ ದೂರದ ಅಡವೀಕಟ್ಟೆ ಸಮೀಪ ಇರುವ ಜಲಪಾತವು ಬೇಸಿಗೆಯಲ್ಲಿ ಬತ್ತಿ ಹೋಗಿ ಕಣ್ಮರೆಯಾಗುತ್ತದೆ. ಈ ಬಾರಿ ಮಳೆಗಾಲದಲ್ಲಿ ಉತ್ತಮ ಮಳೆಯಾಗಿದ್ದು, ಕಿರಿದಾದ ಹಳ್ಳದಲ್ಲಿ 25ರಿಂದ 30 ಅಡಿ ಎತ್ತರದಿಂದ ಧುಮ್ಮಿಕ್ಕುವ ದಬದಬೆ ನಿಸರ್ಗ ಪ್ರಿಯರನ್ನು ಆಕರ್ಷಿಸುತ್ತಿದೆ.
ಜಲಪಾತದ ಬಗ್ಗೆ ಮಾಹಿತಿ ಇರುವ ಸ್ಥಳೀಯರು ಮತ್ತು ಪ್ರವಾಸಿಗರು ಕುಟುಂಬದೊಂದಿಗೆ ಭೇಟಿ ನೀಡಿ ನೀರಿನಲ್ಲಿ ಆಟವಾಡುತ್ತಾ ಜಲಪಾತದ ಸೊಬಗನ್ನು ಸವಿಯುತ್ತಿದ್ದಾರೆ. ಜೊತೆಗೆ ಮಳೆಯ ಪ್ರಮಾಣ ಕಡಿಮೆಯಾದಂತೆ ಜಲಪಾತ ಕಣ್ಮರೆಯಾಗುತ್ತದೆ.
‘ಪ್ರಚಾರ ಬೇಕಿದೆ’
‘ನಾನು ನಾಗಮಂಗಲ ಪಟ್ಟಣದ ನಿವಾಸಿಯಾಗಿದ್ದು ಗೆಳೆಯ ನೀಡಿದ ಮಾಹಿತಿಯಂತೆ ಅಡವೀಕಟ್ಟೆ ಜಲಪಾತಕ್ಕೆ ಭೇಟಿ ನೀಡಿದ್ದೇನೆ. ಮಲೆನಾಡಿನ ಯಾವುದೇ ಜನಪಾತಕ್ಕೂ ಕಡಿಮೆಯಿಲ್ಲ ಎನಿಸುತ್ತದೆ. ಮಾಹಿತಿಯ ಕೂರತೆಯಿದೆ. ಪ್ರಚಾರ ಮಾಡಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ’ ಎಂದು ಸಾಫ್ಟ್‌ವೇರ್ ಉದ್ಯೋಗಿ ಶಿವಕುಮಾರ್ ಹೇಳಿದರು.
ಮೂಲ ಸೌಕರ್ಯ– ಅನಾಸ್ಥೆ
ಮಳೆಗಾಲದಲ್ಲಿ ತಾಲ್ಲೂಕಿನ ಪ್ರವಾಸಿ ಸ್ಥಳಗಳಾಗಿರುವ ಅಡವೀಕಟ್ಟೆ ಜಲಪಾತದ ಕಡೆಗೆ ಗ್ರಾಮಪಂಚಾಯಿತಿ ಅಧಿಕಾರಿಗಳು ಚುನಾಯಿತರು ಗಮನಹರಿಸಿಲ್ಲ. ಮೂಲ ಸೌಕರ್ಯಗಳು ಅಗತ್ಯ ಪ್ರಚಾರಗಳಿಂದ ವಂಚಿತವಾಗಿದೆ. ಜಲಪಾತದ ಕುರಿತು ಪ್ರಚಾರದ ಕೊರತೆಯಿಂದ ಎಷ್ಟೋ ಸ್ಥಳೀಯರಿಗೆ ಇದರ ಪರಿಚಯವೇ ಇಲ್ಲ. ಮುಖ್ಯ ರಸ್ತೆಯಿಂದ ಜಲಪಾತಕ್ಕೆ ತಲುಪಲು 300ರಿಂದ500 ಮೀಟರ್ ರಸ್ತೆ ಕೆಸರುಮಯವಾಗಿದ್ದು ಕಾಲ್ನಡಿಗೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿಯಿದೆ. ರಸ್ತೆಯಲ್ಲೂ ಗಿಡಗಂಟಿ ಬೆಳೆದು ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ದುಮ್ಮಸಂದ್ರ ಅಣೆಕಟ್ಟೆಗೆ ಗ್ರಾಮದ ಕಡೆಯಿಂದ ಬರುವ ರಸ್ತೆ ಬಹುತೇಕ ಪೂರ್ಣವಾಗಿದ್ದು ಅಣೆಕಟ್ಟೆಯ ಬಳಿಯ ಕೆಲ ಮೀಟರ್ ಮಾತ್ರ ರಸ್ತೆಯಾಗಬೇಕಿದೆ. ಬೆಂಗಳೂರು –ಮಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಅಣೆಕಟ್ಟೆಗೆ ಬರುವ ಮಾರ್ಗದಲ್ಲಿ ವಡೇರಹಳ್ಳಿವರೆಗೆ ರಸ್ತೆಯಿದ್ದು ಮುಂದೆ ಸಾಗಿದರೆ ಕೆಸರುಮಯ ರಸ್ತೆಯಿದೆ. ವಾಹನಗಳಲ್ಲಿ ಬಂದವರು ಡ್ಯಾಂ ತಲುಪಲು ಪರದಾಡುವ ಪರಿಸ್ಥಿತಿಯಿದೆ. ‘ನಮ್ಮ ಗ್ರಾಮದ ಬಳಿ ಒಂದೊಳ್ಳೆ ಪ್ರವಾಸಿತಾಣವಿದ್ದರೂ ತಲುಪಲು ಉತ್ತಮವಾದ ರಸ್ತೆಯಿಲ್ಲ. ಅಧಿಕಾರಿಗಳು ರಸ್ತೆ ಅಭಿವೃದ್ಧಿಪಡಿಸದಿದ್ದರೆ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತೇವೆ’ ಎಂದು ವಡೇರಹಳ್ಳಿ ಗ್ರಾಮದ ಯುವಕರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.