ಮಳವಳ್ಳಿ: ಸಾವಿರಾರು ಎಕರೆ ಸರ್ಕಾರಿ ಜಮೀನನ್ನು ತಾಲ್ಲೂಕಿನಾದ್ಯಂತ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವುದಕ್ಕೆ ಸಂಬಂಧಿಸಿ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿ, ಎಂಟು ದಿನದೊಳಗೆ ವರದಿ ನೀಡುವಂತೆ ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಮಿತಿ ಅಧ್ಯಕ್ಷರಾಗಿ ಕಂದಾಯ ಆಯುಕ್ತಾಲಯದ ವಿಶೇಷ ಜಿಲ್ಲಾಧಿಕಾರಿ ಸಂಗಪ್ಪ, ಸದಸ್ಯ ಕಾರ್ಯದರ್ಶಿಯಾಗಿ ಮಂಡ್ಯ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಕವಿತಾ ರಾಜಾರಾಂ, ಎಚ್.ಡಿ.ರಾಜೇಶ್, ಎಸ್.ಎಲ್. ನಯನಾ, ಎಂ.ಆರ್.ಶಕುಂತಳಾ, ವೈ.ಎಸ್.ಸುಬ್ರಹ್ಮಣ್ಯ, ಗಣಪತಿ ಶಾಸ್ತ್ರಿ, ವೈ.ವಿಶ್ವೇಶ್ವರ ರೆಡ್ಡಿ ಅವರನ್ನು ಸದಸ್ಯರಾಗಿದ್ದಾರೆ.
ತಾಲ್ಲೂಕಿನ ವಿವಿಧೆಡೆ ಗೋಮಾಳ, ಹುಲ್ಲುಬನ್ನಿ, ಗುಂಡುತೋಪು ಸೇರಿದಂತೆ ಸಾವಿರಾರು ಎಕರೆ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಖಾತೆ ಸೃಷ್ಟಿಸಿ ಬಲಾಢ್ಯರಿಗೆ ಖಾತೆ ಮಾಡಿಕೊಟ್ಟಿದ್ದು, ತನಿಖೆ ನಡೆಸಬೇಕೆಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹಾಗೂ ಸಾರ್ವಜನಿಕರು ದೂರು ನೀಡಿದ್ದರು.
ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ನೌಕರರು ಶಾಮೀಲಾಗಿ ಖಾಸಗಿ ವ್ಯಕ್ತಿಗಳಿಗೆ ಹಕ್ಕು ಬದಲಾವಣೆ ಮಾಡುವ ದುರುದ್ದೇಶದಿಂದ ಪೋಡಿ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಈಗಾಗಲೇ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ, ಅದರ ಅನ್ವಯ ಜುಲೈ 24ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆದಿದೆ.
ಐದು ವರ್ಷಗಳಲ್ಲಿ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ರಾಜಕೀಯ ಪಕ್ಷಗಳ ಹಿಂಬಾಲಕರಿಗೆ ಹಾಗೂ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿ, ಅಕ್ರಮ ಖಾತೆ ಮಾಡಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿರುವ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಜುಲೈ 26 ರಂದು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 12(2), ಕಲಂ 195 ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ರ ಕಲಂ 8ರ ಅಡಿಯಲ್ಲಿ ಅಧಿಕಾರಿಗಳನ್ನು ನೇಮಿಸಿ ವಿಶೇಷ ತನಿಖಾ ತಂಡ ರಚಿಸಿದೆ.
2023ರ ವಿಧಾನಸಭೆ ಚುನಾವಣೆಗೂ ಮುನ್ನ, ಸರ್ಕಾರಿ ಭೂಮಿ ಅಕ್ರಮ ಪರಭಾರೆ ಬಗ್ಗೆ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಸಾರ್ವಜನಿಕವಾಗಿ ಪ್ರಸ್ತಾಪಿಸಿ, ಸುದ್ದಿಗೋಷ್ಠಿ ನಡೆಸಿ ಕೆಲವು ದಾಖಲಾತಿಗಳನ್ನು ಬಿಡುಗಡೆ ಮಾಡಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಶಾಸಕರಾದ ನಂತರ ಕೆಡಿಪಿ ಸಭೆಯಲ್ಲೂ ಚರ್ಚಿಸಿ, ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
‘ಅಧಿಕಾರಿಗಳ ವಿರುದ್ಧ ಮಾತ್ರ ತನಿಖೆಗೆ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಒತ್ತಡ ತಂದ ರಾಜಕೀಯ ಪಕ್ಷಗಳ ಹಿಂಬಾಲಕರು, ಮಧ್ಯವರ್ತಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಬೇಕು’ ಎಂಬುದು ಕೆಲವು ಮುಖಂಡರು ಹಾಗೂ ಅಧಿಕಾರಿಗಳ ಒತ್ತಾಯ.
ಗೋಮಾಳ, ಹುಲ್ಲುಬನ್ನಿ, ಗುಂಡುತೋಪು ಅಕ್ರಮ ಪರಭಾರೆ ಶಾಸಕ ನರೇಂದ್ರ ಸ್ವಾಮಿ ಸೇರಿದಂತೆ ಹಲವರು ದೂರು 8 ದಿನದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚನೆ
ಸಾವಿರಾರು ಎಕರೆ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗಲು ಕಾರಣರಾದ ಅಧಿಕಾರಿಗಳನ್ನು ವಜಾ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಬೇಕುಪಿ.ಎಂ. ನರೇಂದ್ರಸ್ವಾಮಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.