ಮಂಡ್ಯ: ‘ಸಕ್ಕರೆ ನಾಡಿನಲ್ಲಿ ಡಿ.20,21,22ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯದಾದ್ಯಂತ ಚರ್ಚೆಯಾಗಿ, ಮಾದರಿ ಸಮ್ಮೇಳನವಾಗಬೇಕು. ನುಡಿಹಬ್ಬದ ಯಶಸ್ಸಿಗೆ ಸರ್ಕಾರದ ಸಂಪೂರ್ಣ ಸಹಕಾರವಿರುತ್ತದೆ’ ಎಂದು ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸಮ್ಮೇಳನದ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಸಭೆಯಲ್ಲಿ ಮಾತನಾಡಿ, ‘1974 ಮತ್ತು 1994ರಲ್ಲಿ ಇಲ್ಲಿ ಸಮ್ಮೇಳನ ನಡೆದಿತ್ತು. 2024ರ ಸಮ್ಮೇಳನವನ್ನು ಸರ್ಕಾರ, ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಎಲ್ಲ ಕನ್ನಡ ಮನಸುಗಳು ಒಗ್ಗೂಡಿ ಯಶಸ್ವಿಗೊಳಿಸಬೇಕು’ ಎಂದರು.
‘ಸಮ್ಮೇಳನಕ್ಕಾಗಿ ಸ್ವಾಗತ ಸಮಿತಿ ಸೇರಿದಂತೆ 28 ಸಮಿತಿಗಳನ್ನು ರಚಿಸಿ, ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಸರಿಪಡಿಸಬೇಕು. ನಾಡಿನಾದ್ಯಂತ ಜಿಲ್ಲೆಯ ಕೀರ್ತಿ ಬೆಳಗುವಂತೆ ನಾಳೆಯಿಂದಲೇ ಕಾರ್ಯೋನ್ಮುಖರಾಗಬೇಕು. ಭಿನ್ನಾಭಿಪ್ರಾಯ ಬದಿಗೊತ್ತಿ ಶ್ರಮಿಸಬೇಕು’ ಎಂದರು.
‘ಸಮ್ಮೇಳನದ ಕನ್ನಡ ಜ್ಯೋತಿ ರಥ ಯಾತ್ರೆಯು ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಸಮ್ಮೇಳನದ ಪ್ರಾಮುಖ್ಯತೆ ತಿಳಿಸುವ ಜತೆಗೆ ಜನರನ್ನೂ ಆಹ್ವಾನಿಸಲಿದೆ. ರಥದ ಮಾದರಿ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜು ತಿಳಿಸಿದರು.
‘ಕ್ರಿಸ್‌ಮಸ್ ರಜೆಯ ಸಂದರ್ಭದಲ್ಲೇ ಸಮ್ಮೇಳನ ನಡೆಯುವುದರಿಂದ ವಿದೇಶ, ಹೊರರಾಜ್ಯ ಮತ್ತು ನಾಡಿನ ಮೂಲೆ ಮೂಲೆಗಳಲ್ಲಿರುವ ಕನ್ನಡ ಮನಸುಗಳು ಬರಲು ಅನುಕೂಲವಾಗಲಿದೆ. ಹಿಂದೆ ಎಂದೂ ಇಂಥ ಸಮ್ಮೇಳನ ನಡೆದಿಲ್ಲವೆಂಬಂತೆ, ಐತಿಹಾಸಿಕ, ದಾಖಲೆಯ ಸಮ್ಮೇಳನವಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.