ಮಂಡ್ಯ: ‘ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಗೌರಿ–ಗಣೇಶ ಹಬ್ಬ ಪ್ರಮುಖವಾಗಿದೆ. ಈ ಹಬ್ಬದ ದಿನದಂದು ಮಹಿಳೆಯರಿಗೆ ಬಾಗಿನ ನೀಡುವ ಕಾರ್ಯ ಮಹತ್ತರವಾದ ಹಾಗೂ ಪುಣ್ಯದ ಕೆಲಸ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗೌರಿ– ಗಣೇಶ ಹಬ್ಬದ ದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಮಹಿಳೆಯರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕುಟುಂಬದಲ್ಲಿ ಹೆಣ್ಣು ಸಂಸಾರದ ಕಣ್ಣು ಆಗಿರುತ್ತಾರೆ. ಅವರನ್ನು ಗೌರವಿಸುವ ಮನೋಭಾವ ಮುಖ್ಯವಾಗಬೇಕು. ಹೆಣ್ಣು ಮಕ್ಕಳನ್ನು ಪಡೆದ ತಂದೆತಾಯಿಗಳು ತುಂಬಾ ಪುಣ್ಯವಂತರಾಗಿರುತ್ತಾರೆ. ಯಾವುದೇ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದೆ ಎಂದರೆ ಅಲ್ಲಿ ಸಂತೋಷ ಎಂಬುದು ಸಮೃದ್ಧಿಯಾಗಿರುತ್ತದೆ. ಯಾವುದೇ ಕ್ಷೇತ್ರ ಇರಲಿ ಅಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ’ ಎಂದರು.
‘ಕನ್ನಡ ಭಾಷೆಗೆ ಗೌರವ ಸಿಗಬೇಕು. ನಾನು ಮುಂಬೈಯಲ್ಲಿದ್ದಾಗಲೇ ಕನ್ನಡಪರ ಕೆಲಸ ಮಾಡುತ್ತಾ ಬಂದಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದದಿಂದ ಮಂಡ್ಯ ಜಿಲ್ಲೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶ ಕಂಡಿದ್ದೇನೆ, ಈ ಅಧಿಕಾರವನ್ನು ಜಿಲ್ಲೆಯ ಅಭಿವೃದ್ಧಿಗೆ ಮೀಸಲಿಟ್ಟಿರುತ್ತೇನೆ, ಜೊತೆಗೆ ಜನರ ಪರವಾಗಿ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂರಾರು ಮಹಿಳೆಯರಿಗೆ ದೇವಿಕಾ ನಾರಾಯಣಗೌಡ ಹಾಗೂ ಇವರ ಕುಟುಂಬದ ವತಿಯಿಂದ ಬಾಗಿನ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ವಿಭಾಗೀಯ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ.ವಿಜಯ್‌ಕುಮಾರ್, ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ಯಶೋಧಾ, ಮುಖಂಡರಾದ ವಿದ್ಯಾ ನಾಗೇಂದ್ರ, ಚಂದಗಾಲು ಶಿವಣ್ಣ, ಸಿದ್ದರಾಮಯ್ಯ, ನಿಶ್ಚಿತಾ, ಸುಜಾತಾ ಕೃಷ್ಣ, ಪ.ನ.ಸುರೇಶ್, ನಾಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.