ADVERTISEMENT

ಮಂಡ್ಯ | ‘ಗೃಹಲಕ್ಷ್ಮಿ’ ನೋಂದಣಿ ಗೊಂದಲ: ಆಧಾರ್‌ ತಿದ್ದುಪಡಿ, ಮಹಿಳೆಯರ ಪರದಾಟ

‘ಗೃಹಲಕ್ಷ್ಮಿ’ ನೋಂದಣಿ ಗೊಂದಲ, ಆಧಾರ್‌ಗೆ ಸೇರ್ಪಡೆಯಾಗದ ಮೊಬೈಲ್‌ ಸಂಖ್ಯೆ, ಸರತಿ ಸಾಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 14:28 IST
Last Updated 28 ಜುಲೈ 2023, 14:28 IST
ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿ ಮಂಡ್ಯದ ಬಿಎಸ್‌ಎನ್‌ಎಲ್‌ ಕಚೇರಿ ಮುಂದೆ ನಸುಕಿನಲ್ಲಿಯೇ ಸಾಲುಗಟ್ಟಿ ನಿಂತಿರುವ ಜನರು
ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿ ಮಂಡ್ಯದ ಬಿಎಸ್‌ಎನ್‌ಎಲ್‌ ಕಚೇರಿ ಮುಂದೆ ನಸುಕಿನಲ್ಲಿಯೇ ಸಾಲುಗಟ್ಟಿ ನಿಂತಿರುವ ಜನರು   

ಮಂಡ್ಯ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಜಿಲ್ಲೆಯಾದ್ಯಂತ ಆಧಾರ್‌ ಸೇವಾ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಬದಲಾದ ಮೊಬೈಲ್‌ ಸಂಖ್ಯೆಯನ್ನು ಆಧಾರ್‌ ಕಾರ್ಡ್‌ಗೆ ಸೇರಿಸುವುದು ಅನಿವಾರ್ಯವಾಗಿದ್ದು ಸಾವಿರಾರು ಮಹಿಳೆಯರು ಆಧಾರ್‌ ಸೇವಾ ಕೇಂದ್ರ ಅರಸಿ ಬರುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಆಧಾರ್‌ ಸೇವಾ ಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆ ಉಂಟಾಗಿದ್ದು ಮಹಿಳೆಯರು ಪರದಾಡುತ್ತಿದ್ದಾರೆ. ಸೇವಾ ಕೇಂದ್ರಗಳ ಬಳಿ ನಸುಕಿನ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈಗ ಸೀಮಿತ ಕೇಂದ್ರಗಳಲ್ಲಿ ಮಾತ್ರ ಆಧಾರ್‌ ನೋಂದಣಿ, ತಿದ್ದುಪಡಿ ಕಾರ್ಯ ನಡೆಯುತ್ತಿದ್ದು ದೂರದ ಹಳ್ಳಿಗಳಿಂದ ಬಂದ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ನಗರದ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ 3 ಕೌಂಟರ್‌ಗಳಲ್ಲಿ ಆಧಾರ್‌ ಸೇವಾ ಚಟುವಟಿಕೆಗಳು ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯ ಜನರು ಇಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಹಳ್ಳಿಗಳಿಂದ ಬರುವ ಮಹಿಳೆಯರು ಪುಟಾಣಿ ಮಕ್ಕಳನ್ನು ಜೊತೆಯಲ್ಲೇ ಕರೆದುಕೊಂಡು ಬರುತ್ತಿದ್ದಾರೆ. ಮಳೆ, ಚಳಿಯ ನಡುವೆಯೂ ಆಧಾರ್‌ ತಿದ್ದುಪಡಿ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ.

ADVERTISEMENT

‘ಗೃಹಲಕ್ಷ್ಮಿ’ ನೋಂದಣಿಯಾಗಲು ಆಧಾರ್‌ ಕಾರ್ಡ್‌ಗೆ ಮೊಬೈಲ್‌ ಸಂಖ್ಯೆ ಸೇರ್ಪಡೆಯಾಗಿರಬೇಕು. ಆದರೆ ಬಹುತೇಕ ಗ್ರಾಮೀಣ ಮಹಿಳೆಯರು ತಮ್ಮ ಹಳೆಯ ಮೊಬೈಲ್ ಸಂಖ್ಯೆ ಬದಲು ಮಾಡಿಕೊಂಡಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ನೋಂದಣಿ ವೇಳೆ ಒಟಿಪಿ ಹಳೆಯ ಮೊಬೈಲ್‌ ಸಂಖ್ಯೆಗೆ ಹೋಗುತ್ತಿದ್ದು ನೋಂದಣಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಧಾರ್‌ ಕಾರ್ಡ್‌ಗೆ ಮಹಿಳೆಯರ ಹೊಸ ಸಂಖ್ಯೆ ಸೇರ್ಪಡೆ ಮಾಡುವುದು ಅನಿವಾರ್ಯವಾಗಿದೆ.

ಬಿಎಸ್‌ಎನ್‌ಎಲ್‌ ಕಚೇರಿ ಬೆಳಿಗ್ಗೆ 10 ಗಂಟೆಗೆ ಬಾಗಿಲು ತೆರೆಯುತ್ತದೆ. ಬೆಳಿಗ್ಗೆ 5 ಗಂಟೆಯಿಂದಲೂ ಜನರು ಕಾಯುತ್ತಾ ಕುಳಿತುಕೊಳ್ಳುತ್ತಾರೆ. ತಿಂಡಿ, ನೀರು ಎಲ್ಲವನ್ನೂ ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರತಿ ಸಾಲಿನಲ್ಲಿ ನಿಲ್ಲುವ ವಿಚಾರಕ್ಕೆ ಜನರ ನಡುವೆ ಜಗಳಗಳು ನಡೆಯುತ್ತಿವೆ. ಇದಾವುದೂ ಪೊಲೀಸರು ಹಾಗೂ ಜಿಲ್ಲಾಡಳಿತದ ಗಮನಕ್ಕೆ ಬಾರದಿರುವುದು ದುರದೃಷ್ಟಕರ ಎಂದು ಜನರು ಆರೋಪಿಸುತ್ತಾರೆ. ಮಂಡ್ಯ ತಾಲ್ಲೂಕು ವ್ಯಾಪ್ತಿಯ 18 ಕೇಂದ್ರಗಳಲ್ಲಿ ನೋಂದಣಿ ನಡೆಯುತ್ತಿದ್ದು ಎಲ್ಲಾ ಕೇಂದ್ರಗಳಲ್ಲೂ ಜನಜಾತ್ರೆ ಸೇರುತ್ತಿದೆ.

ಜಿಲ್ಲೆಯಾದ್ಯಂತ 79 ಕೇಂದ್ರಗಳಲ್ಲಿ ಆಧಾರ್‌ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದೆ. ಆದರೆ ಹಲವು ಬ್ಯಾಂಕ್‌ಗಳಲ್ಲಿ ಚಟುವಟಿಕೆ ನಡೆಸದ ಕಾರಣ ಜನರ ನೂಕುನುಗ್ಗಲು ಉಂಟಾಗುತ್ತಿದೆ. ನಗರದ ಕೇಂದ್ರ ಅಂಚೆ ಕಚೇರಿ ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪದಲ್ಲಿ ಸಮರ್ಪಕವಾಗಿ ಆಧಾರ್‌ ಸೇವೆ ನೀಡುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ ಜನಜಂಗುಳಿ ಜಾಸ್ತಿಯಾಗಲು ಇದೂ ಪ್ರಮುಖ ಕಾರಣವಾಗಿದೆ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬ್ಯಾಂಕ್‌ ಆಫ್‌ ಬರೋಡ, ಸೌತ್‌ ಇಂಡಿಯನ್‌ ಬ್ಯಾಂಕ್‌ ಶಾಖೆಗಳಲ್ಲಿ ಶುಕ್ರವಾರ ನೂರಾರು ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ಹೆದ್ದಾರಿ ಬದಿಯಾಗಿರುವ ಕಾರಣ ನಿಲ್ಲುವುದಕ್ಕೂ ಜಾಗವಿಲ್ಲದೇ ಮಹಿಳೆಯರು ಪರದಾಡುತ್ತಿದ್ದರು. ಸ್ಥಳದಲ್ಲೇ ತಿಂಡಿ ತಂದು ತಿನ್ನುತ್ತಿದ್ದರು, ಪುಟಾಣಿ ಮಕ್ಕಳು ಕೂಡ ಜೊತೆಯಲ್ಲೇ ಇದ್ದವು. ಬ್ಯಾಂಕ್‌ ಸಿಬ್ಬಂದಿ ಯಾರನ್ನೂ ಒಳಗೆ ಸೇರಿಸದ ಕಾರಣ ಮಹಿಳೆಯರು ತೊಂದರೆ ಅನುಭವಿಸಿದರು.

‘ನಾನು ದುದ್ದ ಗ್ರಾಮದಿಂದ ಬೆಳಿಗ್ಗೆ 5 ಗಂಟೆಗೇ ಬಂದು ನಿಂತಿದ್ದೇನೆ, ಟೋಕನ್‌ ಕೊಟ್ಟಿದ್ದಾರೆ. ಸಂಜೆ 4 ಗಂಟೆಯಾದರೂ ನನ್ನ ಮೊಬೈಲ್‌ ಸಂಖ್ಯೆ ತಿದ್ದುಪಡಿ ಆಗಿಲ್ಲ. ಆಧಾರ್‌ ಕಾರ್ಡ್‌ ತಿದ್ದುಪಡಿಯಾಗದಿದ್ದರೆ ಗೃಹಲಕ್ಷ್ಮಿ ಹಣ ಬರುವುದಿಲ್ಲ’ ಎಂದು ಮಹಿಳೆಯೊಬ್ಬರು ಆತಂಕ ವ್ಯಕ್ತಪಡಿಸಿದರು.

ಸೌತ್‌ ಇಂಡಿಯನ್‌ ಬ್ಯಾಂಕ್‌ ಶಾಖೆ ಎದುರು ಜನಜಂಗುಳಿ
ಅಪಾರ ಸಂಖ್ಯೆಯ ಮಹಿಳೆಯರು ಒಮ್ಮೆಲೇ ಬರುತ್ತಿರುವ ಕಾರಣ ಸಮಸ್ಯೆಯಾಗುತ್ತಿದೆ. ಸರ್ವರ್‌ ಸಮಸ್ಯೆ ಬಗೆಹರಿದಿದ್ದು ಸದ್ಯ ಎಲ್ಲಾ ಕಡೆ ಆಧಾರ್‌ ಸೇವೆ ನಿರಂತರವಾಗಿ ನಡೆಯುತ್ತಿದೆ
– ಟಿ.ವಿ.ವೇಣುಗೋಪಾಲ್‌ ಜಿಲ್ಲಾ ಆಧಾರ್‌ ಸಂಯೋಜಕ
100 ಮಂದಿ ಮಾತ್ರ ನೋಂದಣಿ ಪ್ರತಿ
ಆಧಾರ್‌ ಸೇವಾ ಕೇಂದ್ರದಲ್ಲಿ ಗರಿಷ್ಠ 150 ಮಂದಿಗೆ ಸೇವೆ ನೀಡಲು ಅನುಮತಿ ಇದೆ. ಆದರೆ ನಿತ್ಯವೂ ಸರ್ವರ್‌ ಸಮಸ್ಯೆ ಸೇರಿದಂತೆ ತಾಂತ್ರಕ ತೊಂದರೆಗಳು ಕಾಡುತ್ತಿರುವ ಕಾರಣ 100ಕ್ಕಿಂತಲೂ ಹೆಚ್ಚು ಜನರಿಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. 150 ಮಂದಿಗೆ ಟೋಕನ್‌ ಕೊಟ್ಟರೂ ಬಾಕಿ ಉಳಿದ 50 ಜನರು ವಾಪಸ್‌ ಮನೆಗೆ ಹೋಗುತ್ತಿದ್ದಾರೆ ಅವರು ಮತ್ತೆ ಮಾರನೇ ದಿನ ಬರುವುದು ಅನಿವಾರ್ಯವಾಗಿದೆ. ಕೆಲವು ಸೇವಾ ಕೇಂದ್ರಗಳಲ್ಲಿ ಪ್ರತಿ ಫಲಾನುಭವಿಯಿಂದಲೂ ₹ 100– 200 ವಸೂಲಿ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.