ADVERTISEMENT

ಮಂಡ್ಯ| ನಾನೂ ರಾಮನ ಭಕ್ತ, ನನಗೂ ಹನುಮ ಧ್ವಜ ಕೊಡಿ: ಶಾಸಕ ಗಣಿಗ ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 15:23 IST
Last Updated 4 ಫೆಬ್ರುವರಿ 2024, 15:23 IST
ಗಣಿಗ ರವಿಕುಮಾರ್
ಗಣಿಗ ರವಿಕುಮಾರ್   

ಮಂಡ್ಯ: ‘ಹೊರಗಿನಿಂದ ಬಂದ ಕೆಲ ಕಿಡಿಗೇಡಿಗಳು ಕೆರಗೋಡು ಗ್ರಾಮಕ್ಕೆ ಬೆಂಕಿ ಇಡಲು ಯತ್ನಿಸುತ್ತಿದ್ದಾರೆ. ದಯವಿಟ್ಟು ಯಾರೂ ಫೆ.7 ಮತ್ತು ಫೆ. 9ರಂದು ಮಂಡ್ಯ ಬಂದ್ ಮಾಡಬೇಡಿ’ ಎಂದು ಶಾಸಕ ಗಣಿಗ ರವಿಕುಮಾರ್ ಕೋರಿದರು.

ಇಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು‌, ‘ಮಂಡ್ಯಕ್ಕೆ ಸಂಬಂಧವೇ ಇಲ್ಲದವರು ಇಲ್ಲಿಯ ಜನರಿಗೆ ವಿಷ ಹಾಕಿದ್ದಾರೆ. ಮನೆಗಳಿಗೆ ಬೆಂಕಿ ಬಿದ್ದರೆ ಅವರಾರೂ ಆರಿಸಲು ಬರುವುದಿಲ್ಲ. ನಿಮ್ಮ ಕೈಮುಗಿದು ಬೇಡಿಕೊಳ್ಳುತ್ತೇನೆ ಶಾಂತವಾಗಿರಿ. ಮಂಡ್ಯ ಕ್ಷೇತ್ರದ ಶಾಂತಿ, ಸಾಮರಸ್ಯ ಹಾಳಾಗಲು ಬಿಡುವುದಿಲ್ಲ’ ಎಂದರು.

‘ಫೆ.7ರಂದು ಪ್ರಗತಿಪರ ಸಂಘಟನೆಗಳು, ಫೆ.9 ಬಿಜೆಪಿ–ಸಂಘ ಪರಿವಾರ ಬಂದ್‌ಗೆ ಕರೆ ನೀಡಿವೆ. ಯಾರೂ ನಮ್ಮೂರು ಬಂದ್ ಮಾಡಬೇಡಿ, ಇದರಿಂದ ಏನಾದರೂ‌ ತೊಂದರೆ ನಾವೇ ನೋವು ಅನಿಭವಿಸಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

‘ತಾಲ್ಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಭೂಮಂಡಲ ಆರಾಧನಾ ಕೇಂದ್ರ ನಿರ್ಮಾಣಗೊಳ್ಳುತ್ತಿದ್ದು ಬರಾಕ್ ಒಬಾಮಾ, ದಲೈ‌ಲಾಮಾ‌ ಬರುತ್ತಿದ್ದಾರೆ. ಅದಕ್ಕೆ‌ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಂದ್ ಭದ್ರತೆ ‌ಕಾರಣಕ್ಕೆ ಅವರ ಭೇಟಿ ರದ್ದಾಗುವ ಸಾಧ್ಯತೆ ಇದೆ. ಹೀಗಾಗಿ ಬಂದ್ ಆಚರಣೆ ಕೈಬಿಡಿ’ ಎಂದು ಮನವಿ ಮಾಡಿದರು.

‘ಕೆಲವು ಪುಂಡರು ನನ್ನ ವಿರುದ್ಧ ಸುಳ್ಳುಗಳನ್ನೇ ಹರಡಿಸುತ್ತಿದ್ದಾರೆ. ಹೀಗಾಗಿ ನಾನು‌ ಕೆರಗೋಡು‌ ಗ್ರಾಮಕ್ಕೆ ತೆರಳಿ ಶಾಂತಿ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದರು.

‘ನಾನೂ ರಾಮ ಹನುಮ ಭಕ್ತ. ನಿತ್ಯ ದೇವರ ಪೂಜೆ ಮಾಡುತ್ತೇನೆ. ಮಂಡ್ಯದಲ್ಲಿ ಅದ್ದೂರಿಯಾಗಿ ಧಾರ್ಮಿಕ ಉತ್ಸವ ಆಚರಣೆ ಮಾಡುತ್ತಿದ್ದೇನೆ. ಹನುಮ ಧ್ವಜವನ್ನು ತಂದು ಕೊಡಿ, ನಾನೂ ಹಾರಿಸುತ್ತೇನೆ. ಆದರೆ ಯಾರೂ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸಬೇಡಿ’ ಎಂದು ಹೇಳಿದರು.

‘ಮನೆ ಮನೆಗೆ ಹನುಮಧ್ವಜ ಕಟ್ಟುವುದನ್ನು ನಾವು ತಡೆಯಲ್ಲ. ಅದನ್ನು ತಡೆಯಲಿ ಎಂದೇ ಕೆಲವರು ಪ್ರಚೋದನೆ ನೀಡುತ್ತಿದ್ದಾರೆ. ಚುನಾವಣೆ ಹಿನ್ನೆಲೆ‌‌ಯಲ್ಲಿ ವಿನಾಕಾರಣ ಪ್ರಚೋದಿಸುತ್ತಿದ್ದಾರೆ. ಗ್ರಾಮಸ್ಥರು ಸಮಧಾನವಾಗಿದ್ದಾರೆ. ಅಲ್ಲಿ ಶಾಂತಿ ಇದೆ. ಆದರೆ 7 ಜನ ಮಾತ್ರ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ಹಿನ್ನೆಲೆ ನಮಗೆಲ್ಲ ಗೊತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.