ADVERTISEMENT

ಜನ ಆಶೀರ್ವದಿಸಿದರೆ ಮತ್ತೆ ಸಿಎಂ ಆಗುವೆ: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ ಸರ್ಕಾರ ಶೀಘ್ರ ಪತನ: ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 13:57 IST
Last Updated 19 ಅಕ್ಟೋಬರ್ 2024, 13:57 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಮಂಡ್ಯ: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ 2028ರವರೆಗೆ ಅಧಿಕಾರದಲ್ಲಿರುವುದಿಲ್ಲ. ಆ ಪಕ್ಷದ ಶಾಸಕರಲ್ಲೇ ಅಸಮಾಧಾನ ಸ್ಫೋಟಿಸಿದೆ. ಜನ ಆಶೀರ್ವದಿಸಿದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ. ನಾನು ಜ್ಯೋತಿಷಿಯಲ್ಲ, ಜನ ಅವಕಾಶ ನೀಡುವ ವಿಶ್ವಾಸವಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

ನಗರದಲ್ಲಿ ಶನಿವಾರ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ‘ನನಗೆ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಬೇರೆಯವರ ಹಂಗಿನಲ್ಲಿ ಕೆಲವು ತಿಂಗಳು ಅಧಿಕಾರ ಮಾಡಿದ್ದೇನೆ. ನನ್ನ ಆಡಳಿತವನ್ನು ಜನ ನೋಡಿದ್ದಾರೆ. ಮುಂದಿನ ದಿನಗಳಲ್ಲಿ ಪೂರ್ಣ ಬಹುಮತದ ಸರ್ಕಾರ ರಚಿಸುವ ನಂಬಿಕೆಯಿದೆ’ ಎಂದರು. 

‘ಸಾರ್ವಜನಿಕರ ತೆರಿಗೆ ಹಣ ಲೂಟಿಯಾಗುತ್ತಿದೆ. ಸರ್ಕಾರದ ಆಸ್ತಿಗಳು ಕಬಳಿಕೆಯಾಗುತ್ತಿವೆ. ಅದಕ್ಕೆ ಕಡಿವಾಣ ಹಾಕಿದರೆ, ಕಾಂಗ್ರೆಸ್‌ನವರು ತಿಂಗಳಿಗೆ ₹2 ಸಾವಿರ ಕೊಡುತ್ತಿದ್ದಾರಲ್ಲ, ಅದರ ಬಲದಾಗಿ ಜನರಿಗೆ ತಿಂಗಳಿಗೆ ₹10 ಸಾವಿರ ಸಂಪಾದನೆ ಮಾಡುವ ಆರ್ಥಿಕ ಶಕ್ತಿ ತುಂಬಬಹುದು. ಕಾಂಗ್ರೆಸ್‌ ಸರ್ಕಾರದ ಆಡಳಿತ ನೋಡಿ ಜನ ಬೇಸತ್ತಿದ್ದಾರೆ. ನಾವು ಸರ್ಕಾರವನ್ನು ತೆಗೆಯುವುದಿಲ್ಲ. ಜನರೇ ತೆಗೆಯುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ADVERTISEMENT

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರು ಮುತ್ತಿಗೆ ಹಾಕಿದ ಕುರಿತು ಪ್ರತಿಕ್ರಿಯಿಸಿ, ‘ಇದಕ್ಕಾಗಿಯೇ ನಾನು ರಾಜ್ಯದಲ್ಲಿ ಸರ್ಕಾರ ಇದೆಯೇ ಅಂದಿದ್ದು. 15 ಸಾವಿರ ಹುದ್ದೆಗಳು ಖಾಲಿ ಇದೆ ಎನ್ನುತ್ತಾರೆ. ಆದರೆ 70 ಹುದ್ದೆ ತುಂಬಿಸಲು ಹೊರಟಿದ್ದಾರೆ. ಕಲ್ಯಾಣ ಕರ್ನಾಟಕದ ಬಗ್ಗೆ ಮುಖ್ಯಮಂತ್ರಿ ದೊಡ್ಡ ಭಾಷಣ ಮಾಡಿದರು. ಆದರೆ ಯಾವ ರೀತಿ ಅವರನ್ನು ನಡೆಸಿಕೊಳ್ಳುತ್ತಿದ್ದಾರೆ. ಯಾವ ಬದ್ಧತೆ ಇಟ್ಟುಕೊಂಡಿದ್ದಾರೆ ಎಂಬುದು ಕಾಣುತ್ತಿದೆ’ ಎಂದು ‌ಹೇಳಿದರು.

‘ನ್ಯಾಯಾಲಯದ ಆದೇಶದ ಮೇರೆಗೆ ಮೈಸೂರಿನ ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ತನಿಖೆ ಪ್ರಾರಂಭವಾಗಿದೆ. ಅಂತಿಮವಾಗಿ ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು’ ಎಂದರು.

‘ಜೆಡಿಎಸ್‌ ತುಂಬಿದ ಶಕ್ತಿ ದೆಹಲಿ ನಾಯಕರಿಗೆ ಗೊತ್ತು’ ‘ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚಿಸಲು ಆಗಲ್ಲ. ಜೆಡಿಎಸ್‌ ಯಾವ ರೀತಿ ಶಕ್ತಿ ತುಂಬಿದೆ ಎಂಬುದು ದೆಹಲಿ ನಾಯಕರಿಗೆ ಗೊತ್ತಿದೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಅವರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದರು.  ‘ಚನ್ನಪಟ್ಟಣ ಸೇರಿ ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಯೇ ನಿಲ್ಲುತ್ತಾರೆ ಎಂದು ನಾನು ಹೇಳಿದ್ದೇನೆಯೇ ಹೊರತು ಜೆಡಿಎಸ್ ಅಭ್ಯರ್ಥಿಯನ್ನು ಹಾಕುತ್ತೇನೆಂದಿಲ್ಲ. ತ್ಯಾಗದ ಬಗ್ಗೆ ಮಾತನಾಡುವವರು ತಮ್ಮ ಆತ್ಮವನ್ನು ಪ್ರಶ್ನಿಸಿಕೊಳ್ಳಬೇಕು. ಮೈತ್ರಿಗೆ ಅಡ್ಡಿಯಾಗಬಾರದು ಎಂದು ನಡೆದುಕೊಳ್ಳುತ್ತಿದ್ದೇನೆ’ ಎಂದರು. ‘ಎಲ್ಲವನ್ನೂ ಸುಗಮವಾಗಿ ಮಾಡಬೇಕೆಂದುಕೊಂಡಿದ್ದೇವೆ. ಯಾರೂ ಯಾರ ಮೇಲೂ ದಬ್ಬಾಳಿಕೆ ಮಾಡಲು ಆಗಲ್ಲ. ಪ್ರೀತಿ ವಿಶ್ವಾಸದಿಂದ ಚುನಾವಣೆ ನಡೆಸಬೇಕು. ವಿಶ್ವಾಸಕ್ಕೆ ಧಕ್ಕೆಯಾಗಬಾರದು. ಅದನ್ನು ಎರಡೂ ಪಕ್ಷಗಳ ನಾಯಕರು ಮನವರಿಕೆ ಮಾಡಿಕೊಳ್ಳಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.