ADVERTISEMENT

ಎಚ್‌ಡಿಕೆ ಅಭಿನಂದನಾ ಸಮಾರಂಭ 16ಕ್ಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 16:09 IST
Last Updated 13 ಜೂನ್ 2024, 16:09 IST
ಸಿ.ಎಸ್‌.ಪುಟ್ಟರಾಜು
ಸಿ.ಎಸ್‌.ಪುಟ್ಟರಾಜು   

ಮಂಡ್ಯ: ಜೆಡಿಎಸ್‌ ವತಿಯಿಂದ ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸನ್ಮಾನ ಹಾಗು ಕೃತಜ್ಞತಾ ಸಮಾರಂಭವನ್ನು ಜೂನ್ 16ರಂದು ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮಂಡ್ಯ ಜಿಲ್ಲೆಯ ಬಗ್ಗೆ ಅರಿವಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡುವ ಮೂಲಕ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಅವರು ಜಿಲ್ಲೆಯ ಮಗನಾಗಿ ಕೆಲಸ ಮಾಡುತ್ತಾರೆ ಎಂದರು.

ADVERTISEMENT

ನಾಲೆಗೆ ನೀರು ಹರಿಸಿ:

ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ನಾಲೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಾಲೆಗಳಿಗೆ ನೀರು ಬಿಡದೆ ರೈತರನ್ನು ವಂಚಿಸಲಾಗಿದೆ. ಕೂಡಲೇ ನಾಲೆಗಳಿಗೆ ನೀರು ಬಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದರು. 

ಮಂಡ್ಯ ಜಿಲ್ಲೆ ಪ್ರಬುದ್ಧತೆಯಿಂದ ಮತ ಚಲಾಯಿಸಿದ್ದಾರೆ. ಅನೇಕ ತಪ್ಪು ಮಾಡಿರುವ ಕಾರಣ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಎಚ್‌ಡಿಕೆ ಅವರನ್ನು ತೇಜೋವಧೆ ಮಾಡಿದ್ದಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಚ್.ಟಿ. ಮಂಜು, ಮಾಜಿ ಶಾಸಕರಾದ ಅನ್ನದಾನಿ, ಸುರೇಶ್ ಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ. ರಮೇಶ್, ಮುಖಂಡರಾದ ಬಿ.ಆರ್. ರಾಮಚಂದ್ರ, ಅಮರಾವತಿ ಚಂದ್ರಶೇಖರ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.