ADVERTISEMENT

ಈಡೇರದ ಸಚಿವರ ‘ಹೆಲಿರೈಡ್‌’ ಆಸೆ

ಹೆಲಿರೈಡ್‌ಗೆ ಹಸಿರು ನಿಶಾನೆ ತೋರಿದ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 16:10 IST
Last Updated 29 ಸೆಪ್ಟೆಂಬರ್ 2019, 16:10 IST
ಆಗಸದಲ್ಲಿ ಹಾರಾಟ ನಡೆಸಲು ಅವಕಾಶ ಸಿಗದೆ ಹೆಲಿಕಾಪ್ಟರ್‌ನಿಂದ ಕೆಳಗಿಳಿದ ಸಿ.ಟಿ.ರವಿ ಹಾಗೂ ಅವರ ಬೆಂಬಲಿಗರು
ಆಗಸದಲ್ಲಿ ಹಾರಾಟ ನಡೆಸಲು ಅವಕಾಶ ಸಿಗದೆ ಹೆಲಿಕಾಪ್ಟರ್‌ನಿಂದ ಕೆಳಗಿಳಿದ ಸಿ.ಟಿ.ರವಿ ಹಾಗೂ ಅವರ ಬೆಂಬಲಿಗರು   

ಮೈಸೂರು: ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿ, ಆಗಸದಿಂದ ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ತವಕದಲ್ಲಿದ್ದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ಶನಿವಾರ ನಿರಾಸೆ ಆಯಿತು.

ದಸರಾ ಉತ್ಸವದ ಪ್ರಯುಕ್ತ, ಹೆಲಿರೈಡ್‌ಗೆ ಚಾಲನೆ ನೀಡಲೆಂದು ಸಚಿವರು ಶನಿವಾರ ಮಧ್ಯಾಹ್ನ ಲಲಿತಮಹಲ್‌ ಹೆಲಿಪ್ಯಾಡ್‌ಗೆ ಬಂದಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ಸಚಿವರು ಹಾಗೂ ಅವರ ಬೆಂಬಲಿಗರು ಹೆಲಿಕಾಪ್ಟರ್‌ ಹತ್ತಿ ಕುಳಿತರು. ಬಳಿಕ, ಕೆಳಗಿಳಿದು ಪ್ರಯಾಣಿಕರಿಗೆ ಶುಭಕೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆನಂತರ ಅವರೆಲ್ಲ ಮತ್ತೆ ಹೆಲಿಕಾಪ್ಟರ್‌ನಲ್ಲಿ ಹತ್ತಿ ಕುಳಿತಾಗ ನಿರಾಸೆ ಕಾದಿತ್ತು. ಅದಕ್ಕೆ ಕಾರಣ ಸಚಿವರ ಸುರಕ್ಷತೆಗಾಗಿನ ನಿಯಮಗಳ ಪಾಲನೆ.

ADVERTISEMENT

‘ಕ್ಯಾಬಿನೆಟ್‌ ದರ್ಜೆಯ ಸಚಿವರು, ಗಣ್ಯ ಹಾಗೂ ಅತಿಗಣ್ಯ ವ್ಯಕ್ತಿಗಳು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವುದಾದರೆ, ಆ ಹೆಲಿಕಾಪ್ಟರ್‌ಗಳು ಎರಡು ಎಂಜಿನ್‌ ಸೌಲಭ್ಯ ಹೊಂದಿರಬೇಕು. ಆದರೆ, ಪ್ರವಾಸಿಗರ ‘ಹೆಲಿರೈಡ್‌’ಗಾಗಿ ವ್ಯವಸ್ಥೆ ಮಾಡಿರುವ ಎರಡೂ ಹೆಲಿಕಾಪ್ಟರ್‌ಗಳು ಒಂದೇ ಎಂಜಿನ್‌ ಹೊಂದಿರುವಂತಹವು. ಇವುಗಳಲ್ಲಿ ಸಚಿವರು ಹಾರಾಟ ನಡೆಸಬೇಕಾದರೆ ಜಿಲ್ಲಾಧಿಕಾರಿಯಿಂದ ವಿಶೇಷ ಅನುಮತಿ ಪಡೆಯಬೇಕು. ಅದಲ್ಲದೇ ಅವರು ನೀಡಿದ್ದ ಎರಡು ಗಂಟೆಯ ಅವಧಿಯೂ ಈಗ ಮುಗಿದಿದೆ. ಮತ್ತೆ, ಅನುಮತಿ ಪಡೆಯಬೇಕು’ ಎಂದು ಏವಿಯೇಷನ್‌ ಕಂಪನಿ ಪ್ರತಿನಿಧಿ ತಿಳಿಸಿದರು.‌

ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ‘ಜನಸಾಮಾನ್ಯರ ಸುರಕ್ಷತೆಯೂ ಮುಖ್ಯವಲ್ಲವೇ? ಅವರಿಗೂ ಎರಡು ಎಂಜಿನ್‌ ಇರುವ ಹೆಲಿಕಾಪ್ಟರ್‌ ಒದಗಿಸಬೇಕಲ್ಲವೇ’ ಎಂದು ಪ್ರಶ್ನಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೈಯಕ್ತಿಕವಾಗಿ ಹಾರಾಟ ನಡೆಸಲು ನಾನು ಸಿದ್ಧನಿದ್ದೇನೆ. ನನಗೆ ಯಾವುದೇ ಭಯವಿಲ್ಲ. ಆದರೆ, ವಿಮಾನಯಾನ ಸಚಿವಾಲಯದ ನಿಯಮಗಳನ್ನೂ ಗೌರವಿಸಬೇಕು’ ಎಂದು ಹೇಳಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾರ್ದನ್, ‘ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳಿಗೆ ಎರಡು ಎಂಜಿನ್‌ ಹೊಂದಿರುವ ಹೆಲಿಕಾಪ್ಟರ್‌ಗಳಲ್ಲಿ ಮಾತ್ರವೇ ಪ್ರಯಾಣಿಸಬೇಕು ಎಂದು ನಾಗರಿಕ ವಿಮಾನ ಯಾನ ನಿರ್ದೇಶನಾಲಯ (ಡಿಜಿಸಿಎ)ದ ನಿಯಮಗಳು ಹೇಳುತ್ತವೆ ಎಂದು ಏವಿಯೇಷನ್‌ ಕಂಪನಿ ಪ್ರತಿನಿಧಿ ತಿಳಿಸಿದ್ದಾರೆ. ಈ ಕುರಿತ ನಿಯಮಗಳ ಪ್ರತಿಯನ್ನು ಪರಿಶೀಲಿಸಲಾಗುವುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.