ADVERTISEMENT

ಕೆರಗೋಡು: ಹೊಸದಾಗಿ ತ್ರಿವರ್ಣ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 21 ಮೇ 2024, 14:07 IST
Last Updated 21 ಮೇ 2024, 14:07 IST
ಕೆರಗೋಡು ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ಮಂಗಳವಾರ ಹೊಸದಾಗಿ ತ್ರಿವರ್ಣ ಧ್ವಜರೋಹಣ ನೆರವೇರಿಸಲಾಯಿತು
ಕೆರಗೋಡು ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ಮಂಗಳವಾರ ಹೊಸದಾಗಿ ತ್ರಿವರ್ಣ ಧ್ವಜರೋಹಣ ನೆರವೇರಿಸಲಾಯಿತು   

ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮದ ರಂಗಮಂದಿರದ ಎದುರು ಸ್ಥಾಪಿಸಲಾಗಿರುವ 108 ಅಡಿ ಧ್ವಜಸ್ತಂಭದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ಮಂಗಳವಾರ ಹೊಸದಾಗಿ ತ್ರಿವರ್ಣ ಧ್ವಜ ಹಾರಿಸಲಾಯಿತು.

ಗೌರಿಶಂಕರ ಸೇವಾಟ್ರಸ್ಟ್‌ ಹಾರಿಸಿದ್ದ ಹನುಮ ಧ್ವಜವನ್ನು ಫೆ.28ರಂದು ತಾಲ್ಲೂಕು ಆಡಳಿತ ತೆರವುಗೊಳಿಸಿ ರಾಷ್ಟ್ರಧ್ವಜ ಹಾರಿಸಿತ್ತು. ಅದಕ್ಕೆ ಬಿಜೆಪಿ, ಜೆಡಿಎಸ್‌, ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಸದಸ್ಯರು ತೀವ್ರವಾಗಿ ಖಂಡಿಸಿದ್ದರು. ಅಲ್ಲಿ ಮತ್ತೆ ಹನುಮ ಧ್ವಜ ಹಾರಿಸಬೇಕು ಎಂದು ಒತ್ತಾಯಿಸಿದ್ದರು. ತಿಂಗಳ ಕಾಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

‘ಸ್ತಂಭಕ್ಕೆ ರಾಷ್ಟ್ರಧ್ವಜ ಸರಿಯಾಗಿ ಅಳವಡಿಕೆಯಾಗಿಲ್ಲ, ಕೊಂಚ ಕೆಳಗೆ ಇಳಿದಂತೆ ಹಾರುತ್ತಿದೆ, ಧ್ವಜ ಹಳೆಯದಾಗಿದೆ’ ಎಂದು ಆರೋಪಿಸಿ ಕೆಲವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಇದರಿಂದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜು, ತಹಶೀಲ್ದಾರ್‌ ಶಿವಕುಮಾರ್‌ ಬಿರಾದರ, ಎಎಸ್‌ಪಿ ತಿಮ್ಮಯ್ಯ ನೇತೃತ್ವದಲ್ಲಿ ಹಳೆಯ ಧ್ವಜ ತೆಗೆದು ಹೊಸ ಧ್ವಜ ಆರೋಹಣ ಮಾಡಲಾಯಿತು.

ADVERTISEMENT

‘ಮೊದಲು ತರಾತುರಿಯಲ್ಲಿ ಧ್ವಜಾರೋಹಣ ಮಾಡಿದ್ದ ಕಾರಣ ಧ್ವಜ ಗಂಟುಹಾಕಿಕೊಂಡು ಸರಿಯಾಗಿ ಹಾರುತ್ತಿರಲಿಲ್ಲ. ಹೀಗಾಗಿ ರಾಷ್ಟ್ರಗೀತೆ ಹಾಡಿ ನಿಯಮಾನುಸಾರವಾಗಿ ಹೊಸದಾಗಿ ಧ್ವಜಾರೋಹಣ ಮಾಡಿದ್ದೇವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.