ಮಳವಳ್ಳಿ: ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹೊರಕೋಟೆಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ.
ಪಟ್ಟಣದ ಹೊರಕೋಟೆಯ ಭಾಗ್ಯಮ್ಮ, ಸರೋಜಮ್ಮ, ಶಿವಕುಮಾರ್ ಎಂಬುವರಿಗೆ ಸೇರಿದ ಹಳೆಯ ಮನೆಗೆ ಸಂಪೂರ್ಣ ಹಾನಿಯಾಗಿದೆ.
ಭಾನುವಾರ ರಾತ್ರಿ 10ಗಂಟೆ ವೇಳೆಗೆ ಘಟನೆ ನಡೆದಿದೆ. ಮನೆಯಲ್ಲಿ ಸರೋಜಮ್ಮ, ಶಿವಕುಮಾರ್ ಮಾತ್ರ ವಾಸವಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ, ಸೋಮವಾರ ಬೆಳಿಗ್ಗೆ ರಾಜಸ್ವ ನಿರೀಕ್ಷಕ ಚೇತನ್ ಹಾಗೂ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
‘ಕೂಲಿ ಮಾಡಿ ಜೀವನ ಸಾಗಿಸುವ ನಮಗೆ ಮನೆ ಕುಸಿದು ಬಿದ್ದಿರುವುದು ದಾರಿ ಕಾಣದಂತಾಗಿದೆ. ಇರುವ ಮನೆ ಮಳೆಯಿಂದ ಕುಸಿದುಬಿದ್ದಿರುವುದರಿಂದ ಸರ್ಕಾರ ಕೂಡಲೇ ಪರಿಹಾರ ನೀಡಬೇಕು’ ಎಂದು ಸರೋಜಮ್ಮ ಒತ್ತಾಯಿಸಿದರು.
ದೇವಸ್ಥಾನಕ್ಕೆ ನುಗ್ಗಿದ ನೀರು: ಭಾನುವಾರ ಸುರಿದ ಮಳೆಯಿಂದ ಪಟ್ಟಣದ ಹೊರವಲಯದ ನಿಡಘಟ್ಟ ರಸ್ತೆ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದೆ.
ದೇವಸ್ಥಾನದ ಗರ್ಭಗುಡಿ ಮತ್ತು ಆವರಣದಲ್ಲಿ ಎರಡು ಅಡಿಗಳಷ್ಟು ನೀರು ನಿಂತಿತ್ತು. ಅರ್ಚಕರು ಹಾಗೂ ಕೆಲ ಭಕ್ತರು ನೀರನ್ನು ಹೊರಹಾಕಿದ್ದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಎ.ಚಿಕ್ಕರಾಜು ಮಾತನಾಡಿ, ‘ಕನಕಪುರ-ಮಳವಳ್ಳಿ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಿ ಮುಂದೆ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.