ADVERTISEMENT

ರಕ್ತದಾನಿಗಳ ಸಂಖ್ಯೆ ಹೆಚ್ಚಳ: ಜಿಲ್ಲಾಧಿಕಾರಿ ಸಂತಸ

ಸ್ವಯಂ ಪ್ರೇರಿತ ರಾಷ್ಟ್ರೀಯ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 16:21 IST
Last Updated 28 ಸೆಪ್ಟೆಂಬರ್ 2024, 16:21 IST
ಮಂಡ್ಯ ನಗರದ ಮಿಮ್ಸ್‌ ರಕ್ತನಿಧಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚು ರಕ್ತದಾನ ಮಾಡಿದ ದಾನಿಗಳನ್ನು ಗೌರವಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ಕೆ.ಟಿ.ಹನುಮಂತು ಪಾಲ್ಗೊಂಡಿದ್ದರು
ಮಂಡ್ಯ ನಗರದ ಮಿಮ್ಸ್‌ ರಕ್ತನಿಧಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚು ರಕ್ತದಾನ ಮಾಡಿದ ದಾನಿಗಳನ್ನು ಗೌರವಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ಕೆ.ಟಿ.ಹನುಮಂತು ಪಾಲ್ಗೊಂಡಿದ್ದರು   

ಮಂಡ್ಯ: ‘ಜಿಲ್ಲೆಯಲ್ಲಿ ರಕ್ತದಾನಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಂತಸ ತಂದಿದೆ, ರಕ್ತದಾನ ಶಿಬಿರ ಎನ್ನುವುದು ಒಂದು ಮಾನವೀಯ ಗುಣವುಳ್ಳ ಕಾರ್ಯಕ್ರಮ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಶ್ಲಾಘಿಸಿದರು.

ನಗರದ ಮಿಮ್ಸ್‌ ರಕ್ತನಿಧಿ ಕೇಂದ್ರದ ಆವರಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ, ಇಂಟರ್‌ ನ್ಯಾಷನಲ್ ಹಾಗೂ 20ಕ್ಕೂ ಹೆಚ್ಚು ಅಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ‘ಸ್ವಯಂ ಪ್ರೇರಿತ ರಾಷ್ಟ್ರೀಯ ರಕ್ತದಾನಿಗಳ ದಿನ ಅಂಗವಾಗಿ ಶನಿವಾರ ಆಯೋಜಿಸಿದ್ದ ರಕ್ತದಾನ ಮತ್ತು ಹೆಚ್ಚು ರಕ್ತದಾನ ಮಾಡಿದ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯದಲ್ಲಿ ಹೆಚ್ಚು ರಕ್ತದಾನಿಗಳನ್ನು ಹೊಂದಿರುವುದು ಹೆಮ್ಮೆಯ ವಿಷಯ, ಅಗತ್ಯವಿರುವವರಿಗೆ ತಕ್ಷಣವೇ ರಕ್ತನೀಡುವ ಸೇವಾ ಮನೋಭಾವದ ರಕ್ತದಾನಿಗಳಿದ್ದಾರೆ’ ಎಂದರು.

ADVERTISEMENT

ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಮಾತನಾಡಿ, ‘ರಕ್ತ ವರ್ಗೀಕರಣ ಪಿತಾಮಹ ಕಾರ್ಲ್ ಲಾಂಡ್‌ಸ್ಪೈನರ್‌ ಎಂಬುವವರು ರಕ್ತದ ಗುಂಪುಗಳ ವರ್ಗೀಕರಣ ಕಂಡು ಹಿಡಿದರು. ಈ ಸಾಧನೆಯಿಂದ ಸಾಕಷ್ಟು ಜೀವಗಳು ಉಳಿಯುವಂತಾಯಿತು. ಸಮಾಜದಲ್ಲಿ ರಕ್ತ ದಾನ ಮಾಡುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಇರಬೇಕು’ ಎಂದು ತಿಳಿಸಿದರು.

ರಕ್ತದಾನಿಗಳಿಂದ 30ಕ್ಕೂ ಹೆಚ್ಚು ಯುನಿಟ್‌ ರಕ್ತ ಸಂಗ್ರಹಿಸಲಾಯಿತು. ನಂತರ ಅತಿ ಹೆಚ್ಚು ರಕ್ತದಾನ ಮಾಡಿರುವ ರಕ್ತದಾನಿಗಳನ್ನು ಅಭಿನಂದಿಸಿ ಪ್ರಮಾಣಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ ನ್ಯಾಷನಲ್ ನಿರ್ದೇಶಕ ನಾಗರಾಜು ವಿ.ಬೈರಿ, ಮಿಮ್ಸ್ ನಿರ್ದೇಶಕ ಡಾ.ನರಸಿಂಹ ಸ್ವಾಮಿ, ಅಂಗವಿಕಲರ ಕಲ್ಯಾಣ ಅಧಿಕಾರಿ ಕೋಮಲ್ ಕುಮಾರ್, ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ, ಅಲಯನ್ಸ್ ಸಂಸ್ಥೆಯ ವೈ.ಎಚ್.ರತ್ಮಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.