ADVERTISEMENT

ಸಮೀಕ್ಷೆ ಮೇಲೆ ವಿಶ್ವಾಸವಿಲ್ಲ: ಸುಮಲತಾ

​ಪ್ರಜಾವಾಣಿ ವಾರ್ತೆ
Published 19 ಮೇ 2019, 5:48 IST
Last Updated 19 ಮೇ 2019, 5:48 IST
ಮಂಡ್ಯ ನಗರದಲ್ಲಿ ಭಾನುವಾರ ನಡೆದ ಮದುವೆ ಕಾರ್ಯಕ್ರಮದಲ್ಲಿ ಸುಮಲತಾ ಹಾಗೂ ಎನ್.ಚಲುವರಾಯಸ್ವಾಮಿ ಮಾತುಕತೆ ನಡೆಸಿದರು
ಮಂಡ್ಯ ನಗರದಲ್ಲಿ ಭಾನುವಾರ ನಡೆದ ಮದುವೆ ಕಾರ್ಯಕ್ರಮದಲ್ಲಿ ಸುಮಲತಾ ಹಾಗೂ ಎನ್.ಚಲುವರಾಯಸ್ವಾಮಿ ಮಾತುಕತೆ ನಡೆಸಿದರು   

ಮಂಡ್ಯ: ‘ಲೋಕಸಭಾ ಚುನಾವಣಾ ಫಲಿತಾಂಶ ಕುರಿತು ಸಮೀಕ್ಷೆಗಳನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದಾರೆ. ನನ್ನ ಗೆಲುವಿನ ಬಗ್ಗೆ ವಿಶ್ವಾಸವಿದ್ದು, ಫಲಿತಾಂಶ ಹೊರಬೀಳುವವರೆಗೂ ಕಾಯುತ್ತೇನೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಇಲ್ಲಿ ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಚುನಾವಣೋತ್ತರ ಸಮೀಕ್ಷೆಗಳು ಒಬ್ಬೊಬ್ಬರ ಪರವಾಗಿರುತ್ತವೆ. ಹೀಗಾಗಿ, ಸಮೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಸೋಲು ಗೆಲುವಿನ ಕುರಿತು ನಾನು ಯಾವುದೇ ಸಮೀಕ್ಷೆ ಮಾಡಿಸುವುದಿಲ್ಲ’ ಎಂದರು.

‘ರಾಜ್ಯ ಸರ್ಕಾರವು ರೈತರ ಸಾಲಮನ್ನಾ ಮಾಡಲಿಲ್ಲ. ರೈತರ ಬೆಳೆಗೆ ಬೆಂಬಲ ಬೆಲೆ ಕೊಡಬೇಕು ಎಂದು ನಟ ದರ್ಶನ್‌ ಹೇಳಿಕೆ ನೀಡಿದ್ದಾರೆ. ಇದು ರೈತಪರ ಕಾಳಜಿಯ ಹೇಳಿಕೆಯಾಗಿದ್ದು, ನನ್ನ ಮನದಾಳದ ಮಾತೂ ಆಗಿದೆ. ಯಾವುದೇ ಸರ್ಕಾರ ಆಗಿದ್ದರೂ ರೈತರ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.

ADVERTISEMENT

ಜನರೇ ತೀರ್ಮಾನ ಮಾಡುತ್ತಾರೆ: ‘ಪಕ್ಷೇತರ ಅಭ್ಯರ್ಥಿಯು ಈ ಚುನಾವಣೆಯನ್ನು ಸ್ವಾಭಿಮಾನದ ಚುನಾವಣೆಯನ್ನಾಗಿ ಪರಿಗಣಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಪರವಾಗಿ ಜೆಡಿಎಸ್‌ ವರಿಷ್ಠ, ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಸದಸ್ಯರು ಪ್ರಚಾರ ನಡೆಸಿದ್ದಾರೆ. ಫಲಿತಾಂಶ ಬರುವವರೆಗೆ ಎಲ್ಲರೂ ತಾಳ್ಮೆಯಿಂದ ಇರಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎನ್.ಚಲುವರಾಯಸ್ವಾಮಿ ತಿಳಿಸಿದರು.

‘ಎಲ್ಲಾ ಸಮೀಕ್ಷೆಗಳು ನಿಖಿಲ್‌ ವಿರುದ್ಧ ಬಂದಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಹಾಗೆಂದು ಸುಮಲತಾ ಗೆದ್ದಿದ್ದಾರೆ ಎಂದು ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಮೈತ್ರಿ ಅಭ್ಯರ್ಥಿ ನಿಖಿಲ್ ಸೋತರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಅವರು ದೊಡ್ಡವರು. ಈ ಹೇಳಿಕೆಗೆ ಸಂಬಂಧಿಸಿದಂತೆ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದರು.

‘ಫಲಿತಾಂಶದ ಬಗ್ಗೆ ಬೆಟ್ಟಿಂಗ್‌ ಒಳ್ಳೆಯದಲ್ಲ. ಬೆಟ್ಟಿಂಗ್‌ ಕಟ್ಟಿರುವವರು ಹಿಂಪಡೆದುಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.