ADVERTISEMENT

ಜನ ಆಶೀರ್ವದಿಸಿದರೆ ಮತ್ತೆ ಸಿ.ಎಂ ಆಗುವೆ: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ ಸರ್ಕಾರ ಶೀಘ್ರ ಪತನ: ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 0:05 IST
Last Updated 20 ಅಕ್ಟೋಬರ್ 2024, 0:05 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಮಂಡ್ಯ: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ 2028ರವರೆಗೆ ಅಧಿಕಾರದಲ್ಲಿರುವುದಿಲ್ಲ. ಆ ಪಕ್ಷದ ಶಾಸಕರಲ್ಲೇ ಅಸಮಾಧಾನ ಸ್ಫೋಟಿಸಿದೆ. ಜನ ಆಶೀರ್ವದಿಸಿದರೆ ಮತ್ತೊಮ್ಮೆ ನಾನು ಮುಖ್ಯಮಂತ್ರಿಯಾಗುತ್ತೇನೆ. ನಾನು ಜ್ಯೋತಿಷಿಯಲ್ಲ, ಜನ ಅವಕಾಶ ನೀಡುವ ವಿಶ್ವಾಸವಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

ನಗರದಲ್ಲಿ ಶನಿವಾರ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ನನಗೆ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಬೇರೆಯವರ ಹಂಗಿನಲ್ಲಿ ಕೆಲವು ತಿಂಗಳು ಅಧಿಕಾರ ಮಾಡಿದ್ದೇನೆ. ಜನರ ನನ್ನ ಆಡಳಿತ ನೋಡಿದ್ದಾರೆ. ಮುಂದೆ ಪೂರ್ಣ ಬಹುಮತದ ಸರ್ಕಾರ ರಚಿಸುವ ನಂಬಿಕೆಯಿದೆ’ ಎಂದರು. 

ADVERTISEMENT

‘ಸಾರ್ವಜನಿಕರ ತೆರಿಗೆ ಹಣ ಲೂಟಿಯಾಗುತ್ತಿದೆ. ಸರ್ಕಾರದ ಆಸ್ತಿಗಳು ಕಬಳಿಕೆಯಾಗುತ್ತಿವೆ. ಅದಕ್ಕೆ ಕಡಿವಾಣ ಹಾಕಿದರೆ, ಕಾಂಗ್ರೆಸ್‌ನವರು ತಿಂಗಳಿಗೆ ₹2 ಸಾವಿರ ಕೊಡುತ್ತಿದ್ದಾರಲ್ಲ, ಅದರ ಬಲದಾಗಿ ಜನರಿಗೆ ತಿಂಗಳಿಗೆ ₹10 ಸಾವಿರ ಸಂಪಾದನೆ ಮಾಡುವ ಆರ್ಥಿಕ ಶಕ್ತಿ ತುಂಬಬಹುದು. ಕಾಂಗ್ರೆಸ್‌ ಸರ್ಕಾರದ ಆಡಳಿತ ನೋಡಿ ಜನ ಬೇಸತ್ತಿದ್ದಾರೆ. ನಾವು ಸರ್ಕಾರವನ್ನು ತೆಗೆಯುವುದಿಲ್ಲ. ಜನರೇ ತೆಗೆಯುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರು ಮುತ್ತಿಗೆ ಹಾಕಿದ ಕುರಿತು ಪ್ರತಿಕ್ರಿಯಿಸಿ, ‘ಇದಕ್ಕಾಗಿಯೇ ನಾನು ರಾಜ್ಯದಲ್ಲಿ ಸರ್ಕಾರ ಇದೆಯೇ ಅಂದಿದ್ದು‘ ಎಂದರು.

‘15 ಸಾವಿರ ಹುದ್ದೆಗಳು ಖಾಲಿ ಇದೆ ಎನ್ನುತ್ತಾರೆ. ಆದರೆ 70 ಹುದ್ದೆ ತುಂಬಿಸಲು ಹೊರಟಿದ್ದಾರೆ. ಕಲ್ಯಾಣ ಕರ್ನಾಟಕದ ಬಗ್ಗೆ ಮುಖ್ಯಮಂತ್ರಿ ದೊಡ್ಡ ಭಾಷಣ ಮಾಡಿದರು. ಆದರೆ ಯಾವ ರೀತಿ ಅವರನ್ನು ನಡೆಸಿಕೊಳ್ಳುತ್ತಿದ್ದಾರೆ. ಯಾವ ಬದ್ಧತೆ ಇಟ್ಟುಕೊಂಡಿದ್ದಾರೆ ಎಂಬುದು ಕಾಣುತ್ತಿದೆ’ ಎಂದು ‌ಹೇಳಿದರು.

‘ನ್ಯಾಯಾಲಯದ ಆದೇಶದ ಮೇರೆಗೆ ಮೈಸೂರಿನ ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ತನಿಖೆ ಪ್ರಾರಂಭವಾಗಿದೆ. ಅಂತಿಮವಾಗಿ ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು’ ಎಂದರು.

‘ಜೆಡಿಎಸ್‌ ತುಂಬಿದ ಶಕ್ತಿ ದೆಹಲಿ ನಾಯಕರಿಗೆ ಗೊತ್ತು’

‘ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚಿಸಲು ಆಗಲ್ಲ. ಜೆಡಿಎಸ್‌ ಯಾವ ರೀತಿ ಶಕ್ತಿ ತುಂಬಿದೆ ಎಂಬುದು ದೆಹಲಿ ನಾಯಕರಿಗೆ ಗೊತ್ತಿದೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಅವರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದರು.  ‘ಚನ್ನಪಟ್ಟಣ ಸೇರಿ ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಯೇ ನಿಲ್ಲುತ್ತಾರೆ ಎಂದು ನಾನು ಹೇಳಿದ್ದೇನೆಯೇ ಹೊರತು ಜೆಡಿಎಸ್ ಅಭ್ಯರ್ಥಿಯನ್ನು ಹಾಕುತ್ತೇನೆಂದಿಲ್ಲ. ತ್ಯಾಗದ ಬಗ್ಗೆ ಮಾತನಾಡುವವರು ತಮ್ಮ ಆತ್ಮವನ್ನು ಪ್ರಶ್ನಿಸಿಕೊಳ್ಳಬೇಕು. ಮೈತ್ರಿಗೆ ಅಡ್ಡಿಯಾಗಬಾರದು ಎಂದು ನಡೆದುಕೊಳ್ಳುತ್ತಿದ್ದೇನೆ’ ಎಂದರು.

ಸ್ಪರ್ಧಿಸಲು ಭಯವಿಲ್ಲ: ನಿಖಿಲ್ ಕುಮಾರಸ್ವಾಮಿ

ಬಳ್ಳಾರಿ: ‘ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ರೀತಿಯ ಹೆದರಿಕೆ ಇಲ್ಲ’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. 

‘ಚನ್ನಪಟ್ಟಣದಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ 80 ಸಾವಿರ ಮತ ಬರುತ್ತವೆ. ಇನ್ನೂ 15 ಸಾವಿರ ಮತ ಬೇಕಾಗುತ್ತವೆ. ಅವಕಾಶ ಒದಗಿ ಬಂದರೆ, ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಪಕ್ಷದ ಕಾರ್ಯಕರ್ತರ ರಕ್ಷಣೆಯೇ ನಮಗೆ ಮುಖ್ಯ. ನಮ್ಮದು ಎನ್‌ಡಿಎ ಕುಟುಂಬ. ಮೋದಿ ಅಥವಾ ಅಮಿತ್‌ ಶಾ ಅವರನ್ನು ನಾವು ಮೀರಿ ಹೋಗುವ ಪ್ರಶ್ನೆ ಇಲ್ಲ’ ಎಂದರು.

‘ನಾವು ಕೋಲಾರ ಬಿಟ್ಟು ಕೊಟ್ಟಿರಲಿಲ್ಲವೇ?’

ರಾಮನಗರ: ‘ನಾವು ಗೆದ್ದಿದ್ದ ಕೋಲಾರವನ್ನು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಿಟ್ಟು ಕೊಡಲಿಲ್ಲವೇ? ಅದೇ ರೀತಿ, ಚನ್ನಪಟ್ಟಣ ಕ್ಷೇತ್ರವನ್ನು ಈಗ ಬಿಜೆಪಿಗೆ ಬಿಟ್ಟು ಕೊಡುವಂತೆ ಜೆಡಿಎಸ್‌ಗೆ ಒತ್ತಾಯಿಸುತ್ತೇವೆ...’

- ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣವನ್ನು ಬಿಜೆಪಿಗೆ ಬಿಟ್ಟು ಕೊಡುತ್ತಾರೆಯೇ? ಎಂಬ ಪ್ರಶ್ನೆಗೆ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ನೀಡಿದ ಪ್ರತಿಕ್ರಿಯೆ ಇದು.

‘ಕೋಲಾರ ಸಂಸದರಾಗಿದ್ದ ಮುನಿಸ್ವಾಮಿ ಅವರಿಗೆ ಟಿಕೆಟ್ ಕೈ ತಪ್ಪಿದರೂ ಪಕ್ಷದ ಸೂಚನೆಯಂತೆ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಕೆಲಸ ಮಾಡಿ ಗೆಲುವಿಗೆ ಶ್ರಮಿಸಲಿಲ್ಲವೇ? ಬಿಜೆಪಿ ಅಥವಾ ಜೆಡಿಎಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದರು.

‘ಉಪ ಚುನಾವಣೆಯಲ್ಲಿ ಯೋಗೇಶ್ವರ್ ಗೆಲುವು ಸಾಧಿಸುವುದು ಗೋಡೆ ಮೇಲಿನ ಬರಹದಷ್ಟೇ ಸತ್ಯ. ಯೋಗೇಶ್ವರ್ ಹೊರತುಪಡಿಸಿದರೆ ಅಲ್ಲಿ ಗೆಲ್ಲುವ ಸಾಮರ್ಥ್ಯವಿರುವುದು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮಾತ್ರ ಎಂದು ಹೇಳಿದರು.

‘ಯೋಗೇಶ್ವರ್ ನುರಿತ ರಾಜಕಾರಣಿ. ಪಕ್ಷೇತರವಾಗಿ, ಕಾಂಗ್ರೆಸ್‌ ಮತ್ತು ಬಿಜೆಪಿಯಿಂದಲೂ ಗೆದ್ದಿದ್ದಾರೆ. ಟಿಕೆಟ್ ಸಿಗದಿದ್ದಾಗ ಸಮಾಜವಾದಿ ಪಕ್ಷದಿಂದ ಟಿಕೆಟ್ ತಂದು ಕೆಂಪು ಟೋಪಿ ಧರಿಸಿ ಚುನಾವಣೆ ಗೆದ್ದಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.