ADVERTISEMENT

ಕಾಂಗ್ರೆಸ್‌ ಸರ್ಕಾರ ತೆಗೆಯುವವರೆಗೂ ವಿರಮಿಸುವುದಿಲ್ಲ: ಎಚ್.ಡಿ.ದೇವೇಗೌಡ ಶ‍ಪಥ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 12:53 IST
Last Updated 8 ನವೆಂಬರ್ 2024, 12:53 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ   

– ಪ್ರಜಾವಾಣಿ ಕಡತ ಚಿತ್ರ

ಪಾಂಡವಪುರ (ಮಂಡ್ಯ ಜಿಲ್ಲೆ): ‘ಕೊನೆ ಉಸಿರು ಇರುವವರೆಗೆ ರಾಜಕೀಯ ಹೋರಾಟ ಮಾಡುತ್ತೇನೆ. ಇದು ದೇವೇಗೌಡನ ಹುಟ್ಟುಗುಣ. ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತ ಎಂದಿಗೂ ಹೇಳಿಲ್ಲ. ಈಗ ನಿಖಿಲ್‌ ಕುಮಾರಸ್ವಾಮಿ ಗೆಲುವಿಗಾಗಿ ಹೋರಾಟ ಮಾಡ್ತಿದ್ದೀನಿ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. 

ತಾಲ್ಲೂಕಿನ ಎಲೆಕೆರೆ ಗ್ರಾಮದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಒಡೆತನದ ಎಸ್‌.ಟಿ.ಜಿ. ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಸತಿ ನಿಲಯವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ನನ್ನ 62 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂಥ ಸರ್ಕಾರವನ್ನು ನೋಡಿಲ್ಲ. ರಾಜ್ಯದ ಉಳಿವಿಗಾಗಿ ಶಕ್ತಿಮೀರಿ ಹೋರಾಟ ಮಾಡುತ್ತೇನೆ. ಈ ಸರ್ಕಾರವನ್ನು ತೆಗೆಯುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ’ ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.

ಕೊತ್ವಾಲ್ ರಾಮಚಂದ್ರನ ಬಳಿ ನೂರು ರೂಪಾಯಿಗೆ ಕೆಲಸ ಪ್ರಾರಂಭಿಸಿದ ಡಿ.ಕೆ.ಶಿವಕುಮಾರ್ ಅವರು ರೈತರು ಮತ್ತು ನಾಡಿನ ಜನತೆಗಾಗಿ ಯಾವತ್ತಾದರೂ ಕಣ್ಣೀರು ಹಾಕಿರುವುದು ನೋಡಿದ್ದೀರಾ? ನೆಹರು, ಇಂದಿರಾ ಗಾಂಧಿ ಅವರು ಅಧ್ಯಕ್ಷರಾಗಿದ್ದ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕ್ತಾರಾ? ಎಂದು ನಿಖಿಲ್‌ ಕಣ್ಣೀರಿನ ಬಗ್ಗೆ ವ್ಯಂಗ್ಯವಾಡಿದ್ದ ಡಿ.ಕೆ.ಶಿವಕುಮಾರ್‌ ವಿರುದ್ಧ ಹರಿಹಾಯ್ದರು.

‘ದೇವೇಗೌಡ, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕುತ್ತಾರೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ನೋವಾದಾಗ ಹೃದಯ ಮರುಗುತ್ತೆ. ಆಗ ಕಣ್ಣೀರು ಬರುತ್ತೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ’ ಎಂದರು.

ಡಿಕೆಶಿ ಮತ್ತು ಎಚ್‌ಡಿಕೆ ನಡುವಿನ ವ್ಯಕ್ತಿತ್ವವನ್ನು ಹೋಲಿಕೆ ಮಾಡುವುದು ಬೇಡ. ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರವನ್ನು ಜಿಲ್ಲೆಯನ್ನಾಗಿ ಘೋಷಿಸಿದರು. ಡಿ.ಕೆ.ಶಿವಕುಮಾರ್ ರಾಮನಗರವನ್ನು ಬೆಂಗಳೂರಿಗೆ ಸೇರಿಸಿದರೆ ಅನುಕೂಲವಾಗುತ್ತದೆ ಎಂದು ಹೇಳುತ್ತಿದ್ದಾರೆ. ಅವರ ತಲೆಯಲ್ಲಿ ಏನೇನು ಇದೆಯೋ? ಎಂದರು. 

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶ್ಯಾದನಹಳ್ಳಿ ಚಲುವರಾಜು, ಗುರುಸ್ವಾಮಿ, ವಿ.ಎಸ್.ನಿಂಗೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.