ADVERTISEMENT

ಹಲಗೂರು: ಅಕ್ರಮ ಮರಳು ವಶ, ಬಹಿರಂಗ ಹರಾಜು

ಶಿಂಷಾ ನದಿ ಪಾತ್ರದ ಗ್ರಾಮಗಳಲ್ಲಿ ಎತ್ತಿನಗಾಡಿಗಳಲ್ಲಿ ಸಾಗಣೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 12:39 IST
Last Updated 14 ಜೂನ್ 2024, 12:39 IST
ಹಲಗೂರು ಸಮೀಪದ ದಡಮಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಣೆ ಅಪರಾಧ ಕುರಿತು ಸಿಪಿಐ ಎಚ್ಚರಿಕೆ ನೀಡಿದರು.
ಹಲಗೂರು ಸಮೀಪದ ದಡಮಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಣೆ ಅಪರಾಧ ಕುರಿತು ಸಿಪಿಐ ಎಚ್ಚರಿಕೆ ನೀಡಿದರು.   

ಹಲಗೂರು: ಶಿಂಷಾ ನದಿ ಪಾತ್ರದ ದಡಮಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 50 ಟಿಪ್ಪರ್ ನಷ್ಟು ಮರಳನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು, ಸಾರ್ವಜನಿಕರಿಗೆ ಬಹಿರಂಗ ಹರಾಜು ಹಾಕಿದರು.

ಸಾರ್ವಜನಿಕರಿಂದ ಖಚಿತ ಮಾಹಿತಿ ಪಡೆದು ಶುಕ್ರವಾರ ಬೆಳಿಗ್ಗೆ ದಾಳಿ ಮಾಡಿದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಹಲಗೂರು ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್.ಶ್ರೀಧರ್ ನೇತೃತ್ವದ ತಂಡ ಗ್ರಾಮದ ಕೆಲವೆಡೆ ಜಂಟಿ ಕಾರ್ಯಾಚರಣೆ ನಡೆಸಿದರು.

ಈ ಸಮಯದಲ್ಲಿ ಖಾಸಗಿ ಜಮೀನು ಸೇರಿ ಗ್ರಾಮದ ಹೊರವಲಯದಲ್ಲಿ ಸುಮಾರು ಏಳು ಕಡೆಗಳಲ್ಲಿ ಅಕ್ರಮ ಮರಳು ರಾಶಿ ಪತ್ತೆಯಾದವು. ಮಳವಳ್ಳಿ ತಾಲ್ಲೂಕು ದಂಡಾಧಿಕಾರಿಗಳಾದ ತಹಶೀಲ್ದಾರ್ ಕೆ.ಎನ್.ಲೋಕೇಶ್ ಅನುಮತಿ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಬಹಿರಂಗ ಹರಾಜು ನಡೆಸಿ, ₹5.4 ಲಕ್ಷ ಹರಾಜು ಹಣ ಸಂಗ್ರಹಿಸಲಾಯಿತು.

ADVERTISEMENT

‘ನದಿ ಪಾತ್ರದ ಗ್ರಾಮಗಳಾದ ದಡಮಹಳ್ಳಿ, ಅಂತರವಳ್ಳಿ, ಯತ್ತಂಬಾಡಿ, ಹಚ್ಚೇಗೌಡನದೊಡ್ಡಿಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಎತ್ತಿನಗಾಡಿಗಳ ಮೂಲಕ ಅಕ್ರಮ ಮರಳು ಸಂಗ್ರಹ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎತ್ತಿನ ಗಾಡಿಗಳ ಸಂಚಾರ ತಡೆಗಟ್ಟಲು ನದಿಯ ಬಳಿ ಇರುವ ದಾರಿ ಮಧ್ಯೆ ಕಂದಕ ನಿರ್ಮಿಸಲು ಕಂದಾಯ ಇಲಾಖೆಯಿಂದ ಕ್ರಮವಹಿಸಬೇಕು’ ಎಂದು ರಾಜಸ್ವ ನಿರೀಕ್ಷಕ ಶಿವಕುಮಾರ್ ಅವರಿಗೆ ಸಿಪಿಐ ಶ್ರೀಧರ್ ಸಲಹೆ ನೀಡಿದರು.

‘ಮರಳು ಸಂಗ್ರಹ ಕಾನೂನು ಬಾಹಿರ ಕೆಲಸವಾಗಿದ್ದು, ತಕ್ಷಣವೇ ನದಿ ಪಾತ್ರದಲ್ಲಿ ಮರಳು ಸಾಗಣೆ ಮಾಡುವುದನ್ನು ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಅಕ್ರಮ ಮರಳು ಸಾಗಣೆ ಮುಂದುವರಿದರೆ, ಸಾಗಣೆದಾರರು ಮತ್ತು ಮರಳು ಸಂಗ್ರಹಣೆ ಮಾಡಲು ಜಾಗ ನೀಡುವ ಜಮೀನು ಮಾಲೀಕರ ಮೇಲೂ ದೂರು ದಾಖಲಿಸಿ ಕಾನೂನಿನ ಮೂಲಕ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಸಿಪಿಐ ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಕಾರ್ಯಾಚರಣೆಯಲ್ಲಿ ಹುಸ್ಕೂರು ವೃತ್ತದ ಉಪ ತಹಶೀಲ್ದಾರ್ ಹೇಮಾವತಿ, ಸರ್ಕಲ್‌ ಇನ್ಸ್‌ಪೆಕ್ಟರ್ ಬಿ.ಎಸ್.ಶ್ರೀಧರ್, ಪಿಎಸ್ಐ ಬಿ.ಮಹೇಂದ್ರ, ರಾಜಸ್ವ ನಿರೀಕ್ಷಕ ಶಿವಕುಮಾರ್, ರವಿಕುಮಾರ್, ಗ್ರಾಮ ಲೆಕ್ಕಿಗ ರವೀಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಹಲಗೂರು ಸಮೀಪದ ದಡಮಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಶಿವಕುಮಾರ್ ಮರಳು ರಾಶಿಗಳನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ರವಿಕುಮಾರ್ ರವೀಶ್ ಶಿವಕುಮಾರ್ ಇದ್ದರು.

50 ಟಿಪ್ಪರ್ ಮರಳು ಪತ್ತೆ ನದಿ ಮಧ್ಯೆ ಕಂದಕ ನಿರ್ಮಿಸಲು ಸಲಹೆ ಜಮೀನು ಮಾಲೀಕರ ವಿರುದ್ಧ ಪ್ರಕರಣದ ಎಚ್ಚರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.